ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್ ನಿಯಂತ್ರಿಸಲು ಸರ್ಕಾರ 200 ಕೋಟಿ ರೂ. ನೀಡುತ್ತಿದೆ. ಅದರ ಜತೆಗೆ ಎನ್ಡಿಆರ್ಎಫ್ನಲ್ಲಿ ಮೀಸಲಿರುವ ಅನುದಾನದಲ್ಲಿ 184 ಕೋಟಿ ರೂ. ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಬುಧವಾರ ವಿಧಾನಪರಿಷತ್ನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ: ಕರೊನಾ ಆತಂಕ ಹಿನ್ನೆಲೆಯಲ್ಲಿ ವಿಧಾನಪರಿಷತ್ತಿನ ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರ ಪ್ರವೇಶಕ್ಕೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ನಿಷೇಧ ಹೇರಿದ್ದಾರೆ. ಶಾಸಕರು ಹಾಗೂ ಸಚಿವರು ಸಹ ಗ್ಯಾಲರಿ ಪ್ರವೇಶ ಕೋರಿ ಮನವಿ ಸಲ್ಲಿಸಬಾರದು. ಪಾಸ್ಗಳನ್ನು ವಿತರಿಸಬಾರದು ಎಂದು ಸೂಚಿಸಿದರು.
ಜನಪ್ರತಿನಿಧಿಗಳ ಮಕ್ಕಳಿಗೂ ಎಫೆಕ್ಟ್: ವಿಧಾನಪರಿಷತ್ನಲ್ಲಿ ಕರೊನಾ ವೈರಸ್ ಪರಿಣಾಮ ಕುರಿತಂತೆ ಚರ್ಚೆ ನಡೆಯುವಾಗ, ಜನಪ್ರತಿನಿಧಿಗಳು ವಿದೇಶದಲ್ಲಿರುವ ತಮ್ಮ ಮಕ್ಕಳ ಪರಿಸ್ಥಿತಿ ವಿವರಿಸಿದರು. ಜಯಮಾಲಾ ಮಗಳು ಲಂಡನ್ನಲ್ಲಿ, ಡಾ.ವೈ.ಎ. ನಾರಾಯಣಸ್ವಾಮಿ ಮಗ ಪ್ಯಾರಿಸ್ನಲ್ಲಿ ಮತ್ತು ಸಚಿವ ಬಿ.ಸಿ. ಪಾಟೀಲ್ ಮಗಳು ಇಟಲಿಯಲ್ಲಿ ಸಿಲುಕಿಕೊಂಡಿರುವ ಬಗ್ಗೆ ಹೇಳಿಕೊಂಡರು. ಸರ್ಕಾರ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ತಮ್ಮ ಮಗಳು ಬೆಳಗ್ಗೆ ಇಟಲಿಯಿಂದ ಬಂದಿದ್ದು, ಬೆಂಗಳೂರಿಗೆ ಬರಲು ಸಮಸ್ಯೆ ಅನುಭವಿಸಿದಳು ಎಂದು ಕಾಂಗ್ರೆಸ್ನ ಆರ್.ಬಿ. ತಿಮ್ಮಾಪುರ ಹೇಳಿದರು.
ಪಕ್ಷಾಂತರಿಗಳಿಗೆ ನಾಚಿಕೆಯಾಗಬೇಕು: ಸಂವಿಧಾನದ ಮೇಲಿನ ಚರ್ಚೆ ವೇಳೆ ಪಕ್ಷಾಂತರದ ವಿರುದ್ಧ ಹರಿಹಾಯ್ದ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಜನಪ್ರತಿನಿಧಿಗಳು ಹಣಕ್ಕಾಗಿ ಮಾರಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುತ್ತ ಗೋಸುಂಬೆಗಳ ರೀತಿ ಬಣ್ಣ ಬದಲಿಸುತ್ತಿದ್ದಾರೆ. ಅಂಥವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಕೆಲಸ ಮಾಡಿದೆ: ಬಿಜೆಪಿ ನಾಯಕರು 70 ವರ್ಷದಿಂದ ಕಾಂಗ್ರೆಸ್ ಏನು ಮಾಡಿತು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ. 75 ಜನರು ಒಂದು ಹೊತ್ತಿನ ಊಟವಿಲ್ಲದ ಪರಿಸ್ಥಿತಿಯಲ್ಲಿದ್ದರು. ಶೇ. 85 ಜನ ಅನಕ್ಷರಸ್ಥರಾಗಿದ್ದರು. ಸೇನೆಯಲ್ಲಿ ಬಲವಿಲ್ಲದಂತಿತ್ತು. ಆದರೆ, ಅದೆಲ್ಲವನ್ನು ಗಟ್ಟಿಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಇದನ್ನು ಬಿಜೆಪಿ ತಿಳಿದುಕೊಳ್ಳಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಸಂವಿಧಾನ ಮೇಲಿನ ಚರ್ಚೆ ವೇಳೆ ತಿಳಿಸಿದರು.