ಜಿಲ್ಲೆ

ಕಾನೂನುಬಾಹಿರವಾಗಿ ಮಲ್ಟಿ ಲೇಔಟ್ ನೀಡಿಕೆ : 34 ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ಪಿಡಿಒ ವಿರುದ್ಧ ಆಕ್ರೋಶ

ಸೌಮ್ಯ ಆರ್

ಉಪ್ಪಿನಂಗಡಿ: ಪುಡಾ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ವ್ಯಕ್ತಿಯೋರ್ವರಿಗೆ ಜಮೀನಿನ ವಿನ್ಯಾಸದಲ್ಲಿ ಮಲ್ಟಿ ಲೇಔಟ್ (ವಿಭಜನೆ) ಮಾಡಿಕೊಟ್ಟಿದ್ದಾರೆ ಎಂದು 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಅವರ ಮೇಲೆ ಗಂಭೀರ ಆರೋಪ ಮಾಡಿದ ಗ್ರಾ.ಪಂ. ಸದಸ್ಯರೊಬ್ಬರು ರಾಜೀನಾಮೆ ನೀಡಿ ಸಭೆಯಿಂದ ಹೊರ ನಡೆದ ಘಟನೆ 34 ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಗ್ರಾ.ಪಂ.ಅಧ್ಯಕ್ಷೆ ಸುಜಾತ ಆರ್.ರೈ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದ ಸದಸ್ಯ ಪ್ರಶಾಂತ್ ಎನ್., ಗ್ರಾಮದ ವ್ಯಕ್ತಿಯೊಬ್ಬರ ಜಾಗವನ್ನು ವಿಭಜನೆ ಮಾಡಿ ನೀಡಲು 2024ರ ಫೆಬ್ರವರಿಯ ದಿನಾಂಕ ನಮೂದಿಸಿ ಇಒ ಅನುಮೋದನೆ ನೀಡಿ, ಗ್ರಾ.ಪಂ.ಗೆ ಕಳುಹಿಸಿದ್ದಾರೆ. ಆದರೆ ಅದರಲ್ಲಿರುವ ಸ್ಟಾೃಂಪ್ ಪೇಪರ್ 2024ರ ಆಗಸ್ಟ್ ತಿಂಗಳಿನದ್ದು. ಕಾನೂನು ಪ್ರಕಾರ ಈ ಜಾಗದ ವಿಭಜನೆ ಮಾಡಿಕೊಡಬೇಕಾಗಿರುವುದು ಪುಡಾ. ಆದರೆ ಇಲ್ಲಿ ಕಾನೂನುಬಾಹಿರವಾಗಿ ಅವರಿಗೆ ಜಾಗದ ವಿಭಜನೆ ಮಾಡಿ ವಿನ್ಯಾಸ ನಕ್ಷೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.

ಈ ಕಡತವನ್ನು ಪರಿಶೀಲಿಸಿದಾಗ 2024ರ ಮೇ ತಿಂಗಳಿನಲ್ಲಿ ಈ ಜಾಗದ 9/11(ಎ) ಖಾತೆ ಬದಲಾವಣೆಯಾಗಿದೆ. ಆದರೆ ಈ ಕಡತದಲ್ಲಿ 2024ರ ಫೆಬ್ರವರಿ ತಿಂಗಳಿನ ದಿನಾಂಕವನ್ನು ನಮೂದಿಸಿರುವುದರಿಂದ ಈ ಬಗ್ಗೆ ಸೂಕ್ತ ಮಾರ್ಗದರ್ಶನಕ್ಕಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಆ ನಿರ್ಣಯದಂತೆ ಇಒ ಅವರಿಗೆ ಪತ್ರ ಬರೆದು ಮಾರ್ಗದರ್ಶನ ಪಡೆದುಕೊಳ್ಳಲಾಗಿದೆಯಾ? ಎಂದು ಪ್ರಶ್ನಿಸಿದರು.

ಆಗ ಪಿಡಿಒ ದೇವಪ್ಪ ನಾಯ್ಕ ಮಾತನಾಡಿ, ಇಒ ಅನುಮೋದನೆ ನೀಡಿದಂತೆ ಇಲ್ಲಿ ಜಮೀನನ್ನು ವಿಭಜನೆ ಮಾಡಿ ನೀಡಲಾಗಿದೆ. ಸಾಮಾನ್ಯ ಸಭೆಯ ನಿರ್ಣಯದಂತೆ ಇಒ ಅವರಿಗೆ ಪತ್ರ ಬರೆಯಲಾಗಿದೆ ಎಂದರು. ಆಗ ಪ್ರಶಾಂತ್ ಮಾತನಾಡಿ, ಇಒ ಅವರಿಗೆ ಪತ್ರ ಬರೆದಿರುವ ಬಗ್ಗೆ ನನಗೆ ದಾಖಲೆ ಒದಗಿಸಿ. ಇಲ್ಲಿ ಜಾಗದ ವಿಭಜನೆ ಮಾಡಿಕೊಟ್ಟಾಗ ಪಂಚಾಯಿತಿ ಸದಸ್ಯರ ಗಮನಕ್ಕೆ ಯಾಕೆ ತಂದಿಲ್ಲ?. ಇಲ್ಲಿ ಬಡವನಿಗೊಂದು ನ್ಯಾಯ ಶ್ರೀಮಂತನಿಗೊಂದು ನ್ಯಾಯ ಮಾಡಬೇಡಿ. ಕಾನೂನನ್ನು ಗಾಳಿಗೆ ತೂರಬೇಡಿ. ಸದಸ್ಯರ ನಿರ್ಣಯಕ್ಕೆ ಬೆಲೆ ಇಲ್ಲವಾದರೆ ನಾವಿದ್ದೂ ಏನು ಪ್ರಯೋಜನ? ಎಂದು ಆಕ್ರೋಶ ವ್ಯಕ್ತಪಡಿಸಿ ರಾಜೀನಾಮೆ ಪತ್ರ ನೀಡಿ ಸಭೆಯಿಂದ ಹೊರನಡೆದರು.

ಈ ಪ್ರಕರಣದ ಕೂಲಂಕಷ ತನಿಖೆ ನಡೆದ ಬಳಿಕ ಸಭೆ ನಡೆಸಿ ಎಂದು ಸದಸ್ಯ ವಿಜಯಕುಮಾರ್ ಸಲಹೆ ನೀಡಿದರು. ಈ ಬಗ್ಗೆ ಚರ್ಚೆಗಳು ನಡೆದು ಇತರ ಸದಸ್ಯರೂ ಸಭಾತ್ಯಾಗ ಮಾಡಿದ ಬೆನ್ನಲ್ಲೇ ಪಿಡಿಒ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಸದಸ್ಯರಾದ ಹರೀಶ ಕೆ, ರಮೇಶ, ವೇದಾವತಿ, ಸ್ವಪ್ನಾ ಸಭೆಯಲ್ಲಿ ಉಪಸ್ಥಿತರಿದ್ದರು.

ಕಳಪೆ ಗುಣಮಟ್ಟದ ಕಾಮಗಾರಿ

ಕರುವೇಲು-ಶಾಂತಿನಗರ ರಸ್ತೆಯಲ್ಲಿ ಅಪರಿಚಿತರು ತ್ಯಾಜ್ಯ ತಂದು ಎಸೆಯುತ್ತಿದ್ದು, ಇಲ್ಲಿ ಪಂಚಾಯಿತಿ ವತಿಯಿಂದ ಸಿ.ಸಿ.ಕ್ಯಾಮರಾ ಅಳವಡಿಸಲು ಸದಸ್ಯರು ಸಲಹೆ ನೀಡಿದರು. ಉಪಾಧ್ಯಕ್ಷ ಹರೀಶ ಡಿ.ಮಾತನಾಡಿ, ಗ್ರಾ.ಪಂ.ನ ಮೈಂದಡ್ಕ ರಸ್ತೆಗೆ ಶಾಸಕರ 30 ಲಕ್ಷ ರೂ. ಅನುದಾನದಡಿ ಕಾಂಕ್ರಿಟ್ ಕಾಮಗಾರಿ ನಡೆದಿದ್ದು, ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.

ಲಕ್ಷಾಂತರ ರೂ. ಪಡೆದಿರುವ ಶಂಕೆ

ಈ ಜಮೀನಿನ ಮಲ್ಟಿ ಲೇಔಟ್(ವಿಭಜನೆ) ಈಗ ಮಾಡಿಕೊಟ್ಟಿರುವುದು ಕಾನೂನುಬಾಹಿರವಾಗಿದೆ. ಇದನ್ನು ಮಾಡಿಕೊಡದಿರುವುದಕ್ಕೆ ಈ ಹಿಂದಿನ ಪಿಡಿಒ ಅವರ ವರ್ಗಾವಣೆಗೆ ಕಾರಣವಾಗಿದೆ ಎಂಬ ಮಾತುಗಳು ಸದಸ್ಯರಿಂದ ಈ ಸಂದರ್ಭ ಕೇಳಿಬಂತು. ಪ್ರಕರಣದ ಬಗ್ಗೆ ರಾಜೀನಾಮೆ ನೀಡಿದ ಸದಸ್ಯ ಪ್ರಶಾಂತ್ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ಮಾಧ್ಯಮದ ಪ್ರತಿನಿಧಿಯೋರ್ವರಿಗೆ ದೊರೆತ ಮಾಹಿತಿಯಂತೆ ಲಕ್ಷಾಂತರ ರೂ. ವ್ಯವಹಾರ ಕುದುರಿಸಿ ಈ ಕೃತ್ಯವೆಸಗಲಾಗಿದೆ. ಸತ್ಯಾಸತ್ಯತೆ ಬಯಲುಗೊಳಿಸುವ ಸಲುವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಲಾಗುವುದೆಂದರು.