ಜಿಲ್ಲೆ

ಸರಣಿ ಕಳ್ಳತನ 24 ಗಂಟೆಯ ಒಳಗೆ ಮೂವರ ಬಂಧನ‌

Uttara Kannada - Subash Hegde

ಹಳಿಯಾಳ: ಪಟ್ಟಣದಲ್ಲಿ ಗುರುವಾರ ಸರಣಿ ಕಳ್ಳತನ ನಡೆಸಿದ್ದ ಅಂತರ ಜಿಲ್ಲಾ ಕಳ್ಳರನ್ನು ಕೇವಲ 24 ಗಂಟೆಯ ಒಳಗೆ ಹೆಡೆಮುರಿ ಕಟ್ಟುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ. 

ಗುರುವಾರ ಬೆಳಗಿನ ಜಾವ ಪಟ್ಟಣದ ಬಸ್ ನಿಲ್ದಾಣ ರಸ್ತೆಯ  ವಿಷ್ಣು ಹನುಮಂತ ನಾಯ್ಕ ಮಾಲಿಕತ್ವದ ಜ್ಯೋತಿ ಮೆಡಿಕಲ್ ಶಾಪ್ ಬೀಗ ಮುರಿದು  ಒಟ್ಟೂ 15,000 ರೂಪಾಯಿ ಹಣವನ್ನು ಕಳ್ಳತನ ಮಾಡಿದ್ದ  ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಲ್ಲದೇ ಇದೇ ರಸ್ತೆಯಲ್ಲಿ ಇನ್ನುಳಿದ ಎರಡು ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳರಿಗೆ ಅಲ್ಪ ಪ್ರಮಾಣದ ಹಣ ಮಾತ್ರ ಸಿಕ್ಕಿತ್ತು ಹೀಗಾಗಿ‌ ಅವರು ಪ್ರಕರಣ ದಾಖಲಿಸಿರಲಿಲ್ಲ.

ಆದರೆ, ಸರಣಿ ಕಳ್ಳತನವೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು ಪೋಲಿಸರಿಗೆ ತಲೆನೋವಾಗಿ ಪರಿಣಮಿಸಿತ್ತು. ತಕ್ಷಣ ಕ್ಷೀಪ್ರ ಕಾರ್ಯಾಚರಣೆಗೆ ಇಳಿದ ಪೋಲಿಸರು ಖಚಿತ ಮಾಹಿತಿಯ ಮೆರೆಗೆ ಪಕ್ಕದ ಧಾರವಾಡ ನಗರದ  ಮಂಜುನಾಥ  ಅರ್ಜುನ ಹುಲ್ಲುರು,  ಮಂಜುನಾಥ  ಬಸವರಾಜ ಡೊಂಗರಿಕೊಪ್ಪ ಹಾಗೂ ವಿನೋದ ದುಂಡಪ್ಪ ಕಿರಗಿ ಎಂಬುವವರನ್ನು ಧಾರವಾಡ ರಸ್ತೆಯ ಆರ್.ಆರ್.ದಾಬಾ ಹತ್ತಿರ  ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ  ಆರೋಪಿತರು ತಪ್ಪೊಪ್ಪಿಕೊಂಡಿದ್ದಾರೆ.

ಇವರಿಂದ  ಕಳ್ಳತನ ಮಾಡಿದ ಹಣ ಮತ್ತು ಕೃತ್ಯಕ್ಕೆ ಬಳಸಿದ ಟಿವಿಎಸ್ ಎಕ್ಸೆಲ್ ಮೋಟರ್ ಸೈಕಲ್  ಜಪ್ತುಪಡಿಸಿ ಹಳಿಯಾಳ ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ‌ ಎಂದು ಪೋಲಿಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್ ಐಗಳಾದ  ವಿನೋದ ರೆಡ್ಡಿ,  ಅಮೀನಸಾಬ ಅತ್ತಾರ ಪೋಲಿಸ್ ಸಿಬ್ಬಂದಿ  ಇಸ್ಮಾಯಿಲ್ ಕೋಣನಕೇರಿ, ಎಂ.ಎಂ. ಮುಲ್ಲಾ, ಬೀಮಪ್ಪ ಕದರಮುಂಡಲಗಿ , ಶ್ರೀಶೈಲ ಜಿ.ಎಂ, ಉಮೆಶ ಹನಗಂಡಿ, ಸೋಹೇಲ್ ನಾಗನೂರ ಪಾಲ್ಗೊಂಡಿದ್ದರು.