ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2023ರ ಮಾರ್ಚ್ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಕರಡು/ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸಿದೆ.
10 ಅಂಕಗಳಿಗೆ ಬಹು ಆಯ್ಕೆ ಮಾದರಿ (ಎಂಸಿಕ್ಯು) ಪ್ರಶ್ನೆಪತ್ರಿಕೆ ನೀಡಿದೆ. ಇದೇ ಮೊದಲ ಬಾರಿ ಮಂಡಲಿ ದ್ವಿತೀಯ ಪಿಯು ಪರೀಕ್ಷೆ ನಡೆಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಲು ಅನುಕೂಲವಾಗಲೆಂಬ ಉದ್ದೇಶದಿಂದ ಮಾದರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದೆ. ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣರಾಗುವಂತೆ ಮಾಡುವ ಉದ್ದೇಶದಿಂದ ಪ್ರಶ್ನೆಪತ್ರಿಕೆ ಮಾದರಿ ಬದಲಾಯಿಸಿದೆ.
20 ಅಂಕಗಳಿಗೆ ಸುಲಭ ಪ್ರಶ್ನೆ: ಒಟ್ಟಾರೆ 100 ಅಂಕಗಳ ಪ್ರಶ್ನೆಪತ್ರಿಕೆಯಾಗಿದ್ದು, 10 ಅಂಕಗಳಿಗೆ ಎಂಸಿಕ್ಯು, 5 ಅಂಕಗಳಿಗೆ ಹೊಂದಿಸಿ ಬರೆಯಿರಿ, 5 ಅಂಕಗಳಿಗೆ ಬಿಟ್ಟ ಸ್ಥಳ ತುಂಬಿ ನೀಡಲಾಗಿದೆ. ಕನಿಷ್ಠ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಈ ಮಾದರಿ ಸಹಕಾರಿಯಾಗಲಿದೆ ಎಂಬುದು ಮಂಡಲಿ ಉದ್ದೇಶವಾಗಿದೆ.
80 ಅಂಕಗಳಿಗೆ ವಾಕ್ಯ ರಚನೆ: ವಿವಿಧ ಮೂರು ವಿಭಾಗದಲ್ಲಿ ಕ್ರಮವಾಗಿ 2 ಅಂಕದ 11 ಪ್ರಶ್ನೆಗಳನ್ನು ನೀಡಿದೆ. 3 ಅಂಕದ 4 ಪ್ರಶ್ನೆಗಳು, 4 ಅಂಕದ 6 ಪ್ರಶ್ನೆಗಳು, 5 ಮತ್ತು 6 ಅಂಕದ ತಲಾ 2 ಪ್ರಶ್ನೆಗಳನ್ನು ನೀಡಲಾಗಿದೆ. ಒಟ್ಟಾರೆ 80 ಅಂಕಗಳಿಗೆ ವಿಸ್ತೃತವಾಗಿ ವಾಕ್ಯ ರೂಪದಲ್ಲಿ ಉತ್ತರಿಸುವ ಪ್ರಶ್ನೆಗಳಾಗಿವೆ.
ಇದರಲ್ಲಿ ಸಂದರ್ಭ ಸೂಚಿಸಿ ಬರೆಯುವುದು, ಸ್ವಾರಸ್ಯ ರೂಪದಲ್ಲಿ ಉತ್ತರ, ಪದ್ಯದ ಭಾವಾರ್ಥ, ಭಾಷಾಭ್ಯಾಸ, ಪ್ರಬಂಧ, ಪತ್ರಲೇಖನ ಮತ್ತು ಗಾದೆ ಮಾತು ವಿಸ್ತರಿಸಿ ಬರೆಯುವ ಪ್ರಶ್ನೆಗಳನ್ನು ನೀಡಲಿದೆ.
ವಿದ್ಯಾರ್ಥಿಗಳು https://sslc.karnataka.gov.in/ ವೆಬ್ಸೈಟ್ಗೆ ಭೇಟಿ ನೀಡಿ ಪ್ರಶ್ನೆಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯಾಸ ನಡೆಸಬಹುದು.
ಅಧ್ಯಯನ ವರದಿ ಸ್ವೀಕರಿಸಿದ ಸರ್ಕಾರ: ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಳ ಮಾಡುವುದಕ್ಕಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಕೇರಳ, ತಮಿಳುನಾಡು, ದೆಹಲಿ ಸೇರಿ ಇತರೆ ರಾಜ್ಯಗಳ ಪರೀಕ್ಷಾ ಮಾದರಿಯನ್ನು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಇದರ ಆಧಾರದಲ್ಲಿ ಕರಡು ಪ್ರಶ್ನೆಪತ್ರಿಕೆಯನ್ನು ಪ್ರಕಟಿಸಿದೆ.
ಮಾದರಿ ಪ್ರಶ್ನೆಪತ್ರಿಕೆಯನ್ನು ಪ್ರಕಟಿಸಲಾಗಿದೆ. ಬದಲಾವಣೆ ಅವಶ್ಯವೆನಿಸಿದರೆ, ಸಣ್ಣ ಪುಟ್ಟ ಬದಲಾವಣೆ ಆಗಬಹುದು. ಯಾವುದೇ ಆಕ್ಷೇಪಣೆಗಳು ಬಾರದಿದ್ದರೆ ಇದೇ ಅಂತಿಮವಾಗಲಿದೆ.
| ಎಚ್.ಎನ್. ಗೋಪಾಲಕೃಷ್ಣ ಮಂಡಲಿ ನಿರ್ದೇಶಕ