ಉಡುಪಿ: ಜಿಲ್ಲಾಡಳಿತ ಹಳ್ಳಿಗೆ ಬಂದರೆ ಅಲ್ಲಿರುವ ನೈಜ ಸಮಸ್ಯೆ ಅರಿವಾಗುತ್ತದೆ. ಜತೆಗೆ ಸರ್ಕಾರ ತಮ್ಮ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಈ ನಿಟ್ಟಿನಲ್ಲಿ ಏಕಕಾಲದಲ್ಲಿ ರಾಜ್ಯದ 247 ಕಡೆಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲಾಗುತ್ತಿದೆ. ಇಲ್ಲಿ ಕೇವಲ ಭರವಸೆ ಮಾತ್ರವಲ್ಲದೆ ಪರಿಹಾರವನ್ನೂ ದೊರಕಿಸಿ ಕೊಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಬ್ರಹ್ಮಾವರ ತಾಲೂಕಿನ ಆರೂರು ಹಾಗೂ ಕೊಕ್ಕರ್ಣೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ, ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆಲ್ಲ ಜಿಲ್ಲಾಧಿಕಾರಿಯನ್ನು ನೋಡಬೇಕಿದ್ದರೆ ಅವರ ಕಚೇರಿಗೆ ಹೋಗಬೇಕಿತ್ತು. ನಮ್ಮ ಸರ್ಕಾರ ಬಂದ ಮೇಲೆ ಜನರಿದ್ದಲ್ಲಿಗೆ ಡಿಸಿಗಳೇ ಬರುತ್ತಾರೆ. ಇಡೀ ಆಡಳಿತ ಯಂತ್ರವೇ ಹಳ್ಳಿಗೆ ಆಗಮಿಸುತ್ತದೆ. ಅಲ್ಲೇ ವಾಸ್ತವ್ಯ ಇದ್ದು ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದರು. ಯಾವುದೇ ಯೋಜನೆಯ ಅರ್ಹ ಫಲಾನುಭವಿಗಳನ್ನು ಸತಾಯಿಸುವುದು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ತಪ್ಪುತ್ತದೆ. ಕಚೇರಿಗಳಲ್ಲಿ ಯಾರನ್ನೂ ಕಾಯಿಸಬಾರದು ಎಂದು ಸೂಚಿಸಿದರು.
ಮನೆ ಬಾಗಿಲಿಗೆ ಪಿಂಚಣಿ: ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಆಧಾರದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ನೀಡಲಾಗುತ್ತದೆ. ಸಣ್ಣ ಮನೆಗಳನ್ನು ಕಟ್ಟುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 1 ಅಥವಾ 2 ದಿನದಲ್ಲಿ ಕೃಷಿ ಜಮೀನು ಭೂಪರಿವರ್ತನೆ ಮಾಡಲಾಗುತ್ತದೆ ಎಂದರು. ಜನಸ್ನೇಹಿ ಕಂದಾಯ ಇಲಾಖೆ ರೂಪಿಸುವುದು ಸರ್ಕಾರದ ಮುಖ್ಯ ಉದ್ದೇಶ. ಇದಕ್ಕೆ ಅಡ್ಡಿಯಾಗಿರುವ ಓಬೀರಾಯನ ಕಾಲದ ಕಾನೂನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅಶೋಕ್ ಹೇಳಿದರು. ಸಚಿವ ಸುನೀಲ್ ಕುಮಾರ್, ಶಾಸಕ ಕೆ.ರಘುಪತಿ ಭಟ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ವುತ್ತಿತರರಿದ್ದರು.
ರಾಜ್ಯಾದ್ಯಂತ ಕಡತ ವಿಲೇ ಅಭಿಯಾನ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ವ್ಯವಸ್ಥೆಯಲ್ಲಿ ಹೊಸತನ ಮೂಡಿಸಲು ಯತ್ನಿಸಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲಾಗುವುದು ಎಂದು ಅಶೋಕ್ ತಿಳಿಸಿದರು. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಒತ್ತುವರಿ ಜಮೀನಿನಲ್ಲಿರುವ ತೋಟಗಳನ್ನು 30 ವರ್ಷ ಅವಧಿಗೆ ಕೃಷಿಕರಿಗೆ ಲೀಸ್ನಲ್ಲಿ ನೀಡುವ ಚಿಂತನೆ ನಡೆಸಲಾಗಿದೆ ಎಂದು ಆರ್.ಅಶೋಕ್ ತಿಳಿಸಿದರು. ನಿರ್ದಿಷ್ಟ ಮೊತ್ತಕ್ಕೆ ಲೀಸ್ಗೆ ನೀಡಿದರೆ, ಸರ್ಕಾರಕ್ಕೆ ಆದಾಯ ಬರುತ್ತದೆ. ಕೃಷಿಕರ ಆತಂಕವೂ ದೂರವಾಗುತ್ತದೆ. ಚಿಕ್ಕಮಗಳೂರಿನಲ್ಲಿ 45 ಸಾವಿರ ಎಕರೆ, ಹಾಸನದಲ್ಲಿ 25 ಸಾವಿರ ಎಕರೆ ಇಂತಹ ಒತ್ತುವರಿ ಜಮೀನು ಇದೆ ಎಂದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆ 15 ದಿನದಲ್ಲಿ ತಾರ್ಕಿಕ ಅಂತ್ಯ: ಅತಿಕ್ರಮಣ ತಡೆಯುವ ಉದ್ದೇಶದಿಂದ ಹಿಂದಿನ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಹಾಗೂ ಗೋಮಾಳ ಜಮೀನುಗಳನ್ನು ಡೀಮ್್ಡ ಫಾರೆಸ್ಟ್ಗೆ ಸೇರಿಸಿ ಅರಣ್ಯ ಭೂಮಿ ಎಂಬುದಾಗಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದರಿಂದ ಸಮಸ್ಯೆ ಉದ್ಭವವಾಗಿದೆ. ಪ್ರಸ್ತುತ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಅಫಿಟವಿಟ್ ಸಲ್ಲಿಸಿದ್ದು, ಶೇ.70 ಕಾರ್ಯ ಮುಗಿದಿದೆ. 15 ದಿನದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ರ್ತಾಕ ಅಂತ್ಯ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
ಅಶೋಕ್ ಹೇಳಿದ ಸಿಯಾಚಿನ್ ಕಥೆ: ಜಾರ್ಜ್ ಫರ್ನಾಂಡಿಸ್ ರಕ್ಷಣಾ ಸಚಿವರಾಗಿದ್ದ ಸಂದರ್ಭ ಸಿಯಾಚಿನ್ನಲ್ಲಿ ಕಾರ್ಯ ನಿರ್ವಹಿಸುವ ಸೈನಿಕರಿಗೆ ಅಗತ್ಯ ವಸ್ತುಗಳನ್ನು ನೀಡುವ ಬಗ್ಗೆ ಕಡತ ಕಳುಹಿಸಿಕೊಟ್ಟಿದ್ದರು. ಆದರೆ ಅಧಿಕಾರಿಗಳು ವರ್ಷವಾದರೂ ಸಹಿ ಹಾಕಿರಲಿಲ್ಲ. ಗಮನಿಸಿದ ಸಚಿವರು ತಾವೇ ಖುದ್ದು ಸಿಯಾಚಿನ್ಗೆ ತೆರಳಿ ವಾಸ್ತವ್ಯ ಹೂಡಿದರು. ಆಗ ಅಲ್ಲಿನ ಕಷ್ಟಗಳನ್ನು ಕಣ್ಣಾರೆ ಕಂಡ ಅಧಿಕಾರಿಗಳು ವಾಪಸ್ ಬಂದ ಕೂಡಲೇ ಕಡತಕ್ಕೆ ಸಹಿ ಹಾಕಿದ್ದರು. ಗ್ರಾಮ ವಾಸ್ತವ್ಯದಿಂದ ಸ್ಥಳೀಯ ಸಮಸ್ಯೆಗಳ ನೈಜ ಚಿತ್ರಣ ಲಭಿಸುತ್ತದೆ ಎಂಬುದಾಗಿ ಸಚಿವ ಅಶೋಕ್ ಉದಾಹರಣೆ ಸಹಿತ ವಿವರಿಸಿದರು.
ಶಾಲೆಯಲ್ಲಿ ವಾಸ್ತವ್ಯ: ಕೊಕ್ಕರ್ಣೆ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕಪಿಲಾ ದೇಸಿ ತಳಿಯ ಹಸುವಿಗೆ ಗೋಪೂಜೆ ನೆರವೇರಿಸುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿ 1,437 ಮಂದಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಹಸ್ತಾಂತರಿಸಲಾಯಿತು. ಅಶೋಕ್ ಕುಡುಬಿ ಜನಾಂಗದವರು, ಸ್ಥಳೀಯ ರೈತರ ಮನೆಗಳಿಗೂ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದರು.
ಜಿಲ್ಲಾಡಳಿತದ ನಡೆ ಹಳ್ಳಿಯ ಕಡೆ: ಕಂದಾಯ ಇಲಾಖೆಯ ನಿರ್ದೇಶನದಂತೆ ಜಿಲ್ಲಾಧಿಕಾರಿ ನಡೆ -ಹಳ್ಳಿಯ ಕಡೆ ಅಭಿಯಾನದ ಅಂಗವಾಗಿ ಶನಿವಾರ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರು ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಕೈಗೊಂಡರು. ಅಧಿಕಾರಿಗಳು ಕೆಲ ಬೇಡಿಕೆಗಳನ್ನು ಸ್ಥಳದಲ್ಲೇ ಈಡೇರಿಸಿದರೆ, ಉಳಿದವನ್ನು ಪೂರ್ಣಗೊಳಿಸುವ ಭರವಸೆ ನೀಡಿದರು.