ಜಿಲ್ಲೆ

ಕಾಂಗ್ರೆಸ್​ ಆಡಳಿತದ 5 ವರ್ಷಗಳಲ್ಲಿ ತಿಂಡಿ, ಕಾಫಿ, ಬಿಸ್ಕತ್​ಗೆ 200 ಕೋಟಿ ರೂ. ವೆಚ್ಚ! ಎನ್.ಆರ್.ರಮೇಶ್ ಗಂಭೀರ ಆರೋಪ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಕಚೇರಿಯು ತಿಂಡಿ, ಬಿಸ್ಕತ್, ಕಾಫಿಗೆಂದು ಪ್ರತಿದಿನ ಸರಾಸರಿ 11 ಲಕ್ಷ ರೂ. ವೆಚ್ಚ ಮಾಡಿದ್ದು, ಸಿಎಂ ಕಚೇರಿಗೆ ಬಂದ ಅತಿಥಿ ಗಣ್ಯರ ಹೆಸರಿನಲ್ಲಿ 200 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಅಕ್ರಮ ಎಸಗಲಾಗಿದೆ‌ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಖರ್ಚು-ವೆಚ್ಚದ ದಾಖಲೆಗಳನ್ನು ಮಂಡಿಸಿದ ಅವರು, 2013-14 ರಿಂದ 2017-18ರ ಅವಧಿಯ ಲೆಕ್ಕಪರಿಶೋಶನಾ ವರದಿಯಲ್ಲಿ ಈ ಬಗ್ಗೆ ತೀವ್ರ ಆಕ್ಷೇಪ ಎತ್ತಲಾಗಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕಚೇರಿ ಕೊಠಡಿ ಕೊಠಡಿ ಸಂಖ್ಯೆ 314 ರಿಂದ 316ರವರೆಗೆ ಐದು ವರ್ಷಗಳ ಕಾಲ ಒಂದು ದಿನ ರಜೆಯಿಲ್ಲದೆ ಕೆಲಸ ಮಾಡಿದಂತಿದೆ. ವಾರದ ರಜೆ, ಎರಡು ಶನಿವಾರ ಹಾಗೂ ಸಾರ್ವತ್ರಿಕ ರಜೆ ಸೇರಿದರೆ ಐದು ವರ್ಷಗಳಲ್ಲಿ 410 ದಿನಗಳನ್ನು ಕಳೆದರೆ ಪ್ರತಿದಿನ ತಿಂಡಿ, ಬಿಸ್ಮತ್, ಕಾಫಿಗಾಗಿ ಒಟ್ಟು 200.62 ಕೋಟಿ ಖರ್ಚು ತೋರಿಸಲಾಗಿದ್ದು, ಬಹುಶಃ ಅತಿಥಿಗಳಿಗೆ ಬಂಗಾರದ ‌ಬಿಸ್ಕತ್ ವಿತರಿಸಿರಬೇಕು ಎಂದು ಎನ್.ಆರ್.ರಮೇಶ್ ಛೇಡಿಸಿದರು.

ಸಿದ್ದರಾಮಯ್ಯ ಭ್ರಷ್ಟ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಕುಮಾರಕೃಪಾ ಅತಿಥಿ ಗೃಹ ಬೇರೆ‌ಬೇರೆ ವಸತಿ ಗೃಹಗಳು, ಡೀಸೆಲ್-ಪೆಟ್ರೀಲ್ ವೆಚ್ಚದ‌ ಅಕ್ರಮಗಳ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ. ಕಾಂಡೋಮ್ ಖರೀದಿಯಲ್ಲೂ ಬೊಕ್ಕಸದ ಹಣ ಲೂಟಿ ಮಾಡಲಾಗಿದೆ. ಸಿದ್ದರಾಮಯ್ಯ ಭ್ರಷ್ಟಾಚಾರದ ಕುರಿತು 118 ಪ್ರಕರಣಗಳ ದಾಖಲೆಗಳನ್ನು ಈಗಾಗಲೇ ಬಿಡುಗಡೆ ಮಾಡುವ ಜತೆಗೆ ದೂರು ದಾಖಲಿಸಿದ್ದು, ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿ ಉಳಿಸಿರುವೆ ಎಂದು ಎನ್.ಆರ್.ರಮೇಶ್ ಹೇಳಿದರು.