ಜಿಲ್ಲೆ

ಬೆಂಗಳೂರಲ್ಲಿ ಅವಿವಾಹಿತ ಅಕ್ಕ-ತಂಗಿ ಅನುಮಾನಾಸ್ಪದ ಸಾವು

ಬೆಂಗಳೂರು: ನಗರದ ಮಾಗಡಿ ರಸ್ತೆ ಗೋಪಾಲಪುರ 3ನೇ ಕ್ರಾಸ್‌ನ ಮನೆಯಲ್ಲಿ ಅಕ್ಕ-ತಂಗಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಗೋಪಾಲಪುರದ ಜಮುನಾ (60) ಮತ್ತು ರಾಣಿ (58) ಮೃತರು. ಈ ಇಬ್ಬರ ಸಹೋದರಿ ಪ್ರೇಮಾ ಎಂಬಾಕೆ ಗುರುವಾರ ಬೆಳಗ್ಗೆ ಮನೆಗೆ ಬಂದಾಗ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಅಸಹಜ ಸಾವು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಮಾಗಡಿ ರಸ್ತೆ ಪೊಲೀಸರು ತಿಳಿಸಿದ್ದಾರೆ.

ಜಮುನಾ, ರಾಣಿ ಮತ್ತು ಪ್ರೇಮಾ ಸಹೋದರರಿಯರು. ಜಮುನಾ ಮತ್ತು ರಾಣಿ ಮದುವೆ ಆಗಿಲ್ಲ. ಇಬ್ಬರೂ ಜೊತೆಯಲ್ಲಿ ವಾಸವಾಗಿದ್ದರು. ಪ್ರೇಮಾ ಮದುವೆಯಾಗಿದ್ದು, ಚಾಮರಾಜಪೇಟೆಯಲ್ಲಿ ನೆಲೆಸಿದ್ದರು. ಸೋಮವಾರ ಮತ್ತು ಮಂಗಳವಾರ ಮೂವರು ಸಹೋದರಿಯರು ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಆನಂತರ ಎರಡು ದಿನ ಕರೆ ಸ್ವೀಕರಿಸಿದ ಕಾರಣ ಪ್ರೇಮಾ, ಗುರುವಾರ ಬೆಳಗ್ಗೆ ಪತಿಯ ಜತೆಗೆ ಗೋಪಾಲಪುರದ ಸಹೋದರಿಯರ ಮನೆ ಬಳಿಗೆಬಂದು ಬಾಗಿಲು ತಟ್ಟಿದ್ದಾರೆ.

ಆದರೆ, ಬಾಗಿಲು ತೆಗೆದಿಲ್ಲ. ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದಾಗ ಹಾಲ್‌ನಲ್ಲಿ ಒಬ್ಬಾಕೆ ಮತ್ತು ಮಲಗುವ ಕೊಠಡಿಯಲ್ಲಿ ಒಬ್ಬಾಕೆ ಶವಗಳು ಪತ್ತೆಯಾಗಿವೆ. ಅಡುಗೆ ಮಾಡಿ ಊಟ ಮಾಡಿರುವ ಪಾತ್ರೆಗಳು ಹಾಲ್‌ನಲ್ಲಿ ಇವೆ. ಮನೆಯಲ್ಲಿದ್ದ ಚಿನ್ನಾಭರಣ, ನಗದು ಮತ್ತು ಶವದ ಮೈ ಮೇಲಿನ ಆಭರಣ ಕಳವಾಗಿಲ್ಲ. ಆದರೆ, ಸಾವಿಗೆ ನಿಖರ ಕಾರಣ ತಿಳಿದು ಬಾರದ ಕಾರಣ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.