ಜಿಲ್ಲೆ

1900 ವಾರ್ಡನ್​ಗಳಿಗೆ ಬಡ್ತಿ ಗಗನ ಕುಸುಮ; 20 ವರ್ಷಗಳಿಂದ ಇಲ್ಲ ಬಡ್ತಿಭಾಗ್ಯ

| ಅವಿನ್ ಶೆಟ್ಟಿ ಉಡುಪಿ

ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಾರ್ಡನ್​ಗಳು 20 ವರ್ಷಗಳಿಂದ ಬಡ್ತಿ ಭಾಗ್ಯದಿಂದ ವಂಚಿತರಾಗಿದ್ದಾರೆ. ಹಳೇ ನಿಯಮದಂತೆ ಕಡಿಮೆ ಪ್ರಮಾಣದಲ್ಲಿ ಬಡ್ತಿ ಸಿಗುತ್ತಿರುವುದರಿಂದ 1900ಕ್ಕೂ ಅಧಿಕ ಮಂದಿ ಬಡ್ತಿ ರಹಿತರಾಗಿ ಹತ್ತಾರು ವರ್ಷಗಳಿಂದ ದುಡಿಯುತ್ತಿದ್ದಾರೆ.

ಸರ್ಕಾರಿ ಸಿಬ್ಬಂದಿ ಕನಿಷ್ಠ 2 ಬಾರಿ ಮುಂಬಡ್ತಿ ನಿಯಮವಿದೆ. ಸಮಾಜ ಕಲ್ಯಾಣ ಇಲಾಖೆ ಅಧೀನ ಸಂಸ್ಥೆ ಐಟಿಡಿಪಿಯಲ್ಲಿ ಅಧೀಕ್ಷಕರ ಹುದ್ದೆ ಮುಂಬಡ್ತಿಗೆ ಶೇ.30, ವಾರ್ಡನ್ಸ್​ಗೆ 60, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ವಾರ್ಡನ್​ಗಳಿಗೆ ಶೇ.80, ಎಫ್​ಡಿಎಗೆ ಶೇ.10 ಮುಂಬಡ್ತಿಗೆ ಅವಕಾಶವಿದೆ. ಆದರೆ ಸಮಾಜ ಕಲ್ಯಾಣ ಇಲಾಖೆ ವಾರ್ಡನ್​ಗಳಿಗೆ ಈ ಅವಕಾಶವಿಲ್ಲ.

1985ರ ವೃಂದ ಮತ್ತು ನೇಮಕಾತಿ (ಸಿ ಆಂಡ್ ಆರ್) ನಿಯಮದಂತೆ ಇಲಾಖೆಯ ವಾರ್ಡನ್​ಗಳಿಗೆ ಶೇ.20, ಪ್ರಥಮ ದರ್ಜೆ ಸಹಾಯಕರಿಗೆ ಶೇ.75 ಮುಂಬಡ್ತಿ ಇದೆ. ಈ ನಿಯಮ ರೂಪಿಸುವ ಸಂದರ್ಭ ಹಾಸ್ಟೆಲ್​ಗಳು, ವಾರ್ಡನ್​ಗಳ ಸಂಖ್ಯೆ ಕಡಿಮೆ ಇತ್ತು. ಪ್ರಸಕ್ತ ಹೆಚ್ಚಾಗಿರುವುದರಿಂದ ಈ ಬಡ್ತಿ ಕ್ರಮದಲ್ಲಿ ಅನ್ಯಾಯವಾಗುತ್ತಿದೆ. ಇಲಾಖೆಗೆ 2010ರಲ್ಲಿ ಎಫ್​ಡಿಎ ಆಗಿ ಸೇರಿದವರು ಕಚೇರಿ ಅಧೀಕ್ಷಕ (ಪತ್ರಾಂಕಿತ), ಸಹಾಯಕ ನಿರ್ದೇಶಕ (ಎಡಿ) ಹುದ್ದೆ ಸಹಿತ ಎರಡೆರಡು ಬಡ್ತಿ ಪಡೆದಿದ್ದಾರೆ. 20 ವರ್ಷದಿಂದ ನಾವು ವಾರ್ಡನ್ ಹುದ್ದೆಯಲ್ಲಿಯೇ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ಪರಿಸ್ಥಿತಿ ಬಂದಿದೆ ಎಂದು ಬಡ್ತಿ ವಂಚಿತ ವಾರ್ಡನ್​ಗಳು ಅಳಲು ತೋಡಿಕೊಂಡಿದ್ದಾರೆ.

ವಾರ್ಡನ್ ಹುದ್ದೆಗಳಿಗೆ ಬಿಎಡ್, ಪದವಿ ವಿದ್ಯಾರ್ಹತೆ ನಿಗದಿಪಡಿಸಿರುವುದರಿಂದ ಪ್ರೌಢಶಾಲೆ ಸಹ ಶಿಕ್ಷಕರ ವೇತನ ಶ್ರೇಣಿ ನೀಡಬೇಕು. 365 ದಿನವೂ ಕರ್ತವ್ಯ, ಜವಾಬ್ದಾರಿ ನಿರ್ವಹಿಸುವ ವಾರ್ಡನ್​ಗಳಿಗೆ ರಜೆ ಸಂದರ್ಭ ಪರ್ಯಾಯ ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ಜೂನಿಯರ್ ವಾರ್ಡನ್ ನೇಮಕವಾಗಬೇಕು. ಸಹಾಯಕ ನಿರ್ದೇಶಕರ ಹುದ್ದೆ ನೇರ ನೇಮಕಾತಿ ರದ್ದುಪಡಿಸಿ ಬಡ್ತಿಯಿಂದ ಭರ್ತಿ ಮಾಡಬೇಕು. ಪೊಲೀಸ್ ಇಲಾಖೆಯಂತೆ ವೇತನ ಆಯೋಗ ಶಿಫಾರಸು ಮಾಡಿದಂತೆ ಭತ್ಯೆ ನೀಡಬೇಕಿದೆ ಎಂಬ ಆಗ್ರಹ ವಾರ್ಡನ್​ಗಳದ್ದು.

ಪ್ರಸ್ತುತ ಹಲವು ಜಿಲ್ಲೆಗಳಲ್ಲಿ ವಾರ್ಡನ್​ಗಳ ಕೊರತೆ ಇದೆ. ಬಹುತೇಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಬಡ್ತಿ ಸಮಸ್ಯೆ ಬಗೆಹರಿಸುವ ಬೇಡಿಕೆ ಜತೆಗೆ ಹಾಸ್ಟೆಲ್ ವಾರ್ಡನ್ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು.

| ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

ಕಳೆದ 20 ವರ್ಷಗಳಿಂದ ಮುಂಬಡ್ತಿಯಾಗಿಲ್ಲ. ಸಮಾಜ ಕಲ್ಯಾಣ ಇಲಾಖೆ ವಾರ್ಡನ್​ಗಳಿಗೆ ಸಿ ಆಂಡ್ ಆರ್ ನಿಯಮಗಳಿಗೆ ತಿದ್ದುಪಡಿ ಮಾಡಿ ಶೇ.80 ಮುಂಬಡ್ತಿ ಹೆಚ್ಚಿಸಬೇಕು.

| ಭಾಸ್ಕರ್ ಪೂಜಾರಿ ಬಳ್ಕೂರು ರಾಜ್ಯ ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ನಿಲಯ ಪಾಲಕರ ಸಂಘ