ಜಿಲ್ಲೆ

ತನ್ನಿಷ್ಟದಂತೆ ಪ್ರೀತಿಸಿ ಮದುವೆಯಾದ ಯುವತಿ ಸೋಫಾಸೆಟ್​ಗಾಗಿ ಪ್ರಾಣವನ್ನೇ ಕಳೆದುಕೊಂಡಳು..!

ಬೆಳಗಾವಿ: 19 ವರ್ಷದ ಯುವತಿಯೊಬ್ಬಳು ತನ್ನಿಷ್ಟದಂತೆಯೇ ಪ್ರೀತಿಸಿ ಮದುಯಾಗಿದ್ದಳು. 5 ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಕೆ ಇದೀಗ ತವರು ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ದುರಂತ ಅಂತ್ಯ ಕಂಡಿದ್ದಾಳೆ. ಅಷ್ಟಕ್ಕೂ ಆಕೆಯ ಸಾವಿಗೆ ಕಾರಣ ಸೋಫಾಸೆಟ್​!

ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ನಿವಾಸಿ ಜ್ಯೋತಿ ನಿಖಿಲ್‌ ಚೋಪಡೆ (19) ಆತ್ಮಹತ್ಯೆ ಮಾಡಿಕೊಂಡವಳು. ಬುಧವಾರ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ನಿಖಿಲ್‌ ಎಂಬಾತನನ್ನು ಪ್ರೀತಿಸಿದ್ದ ಜ್ಯೋತಿಗೆ ಕಳೆದ ಐದು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಕಳೆದ ಕೆಲ ದಿನಗಳ ಹಿಂದಷ್ಟೇ ಜ್ಯೋತಿ ತವರು ಮನೆಗೆ ಬಂದಿದ್ದಳು. ಮದುವೆ ಆದಾಗಿನಿಂದ ಜ್ಯೋತಿ ತನ್ನ ತಂದೆ ಮುಂದೆ ಒಂದಿಲ್ಲೊಂದು ಬೇಡಿಕೆ ಇಡುತ್ತಿದ್ದಳು. ಇತ್ತೀಚಿಗಷ್ಟೇ ತಂದೆಯಿಂದ ಕಾಡಿ ಬೇಡಿ ಫ್ರಿಡ್ಜ್‌ ಒಯ್ದಿದ್ದಳು.

ಹೀಗಿರುವಾಗ ಮತ್ತೆ ನನಗೆ ಸೋಫಾಸೆಟ್‌ ಬೇಕು ಎಂದು ಹಠ ಹಿಡಿದಿದ್ದಳು. ಇದಕ್ಕೆ ಆಕೆಯ ತಂದೆ ಹಣ ಬಂದ ಮೇಲೆ ಕೊಡಿಸುವುದಾಗಿಯೂ ಹೇಳಿದ್ದರಂತೆ. ಆದರೆ ತಾಳ್ಮೆ ಕಳೆದುಕೊಂಡ ಜ್ಯೋತಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನಾ ಸ್ಥಳಕ್ಕೆ ಪೊಲೀಸ್‌ ಇನ್ಸಸ್ಪೆಕ್ಟರ್‌ ರಾಘವೇಂದ್ರ ಹಳ್ಳೂರ, ಪಿಎಸ್‌ಐ ಅವಿನಾಶ ಯರಗೊಪ್ಪ, ಅಪರಾಧ ವಿಭಾಗದ ಪಿಎಸ್‌ಐ ಆರ್‌.ಟಿ. ಲಕ್ಕನಗೌಡರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.