ಜಿಲ್ಲೆ

ಮದ್ಯ ಮಾರಾಟದಿಂದ ಒಂದೇ ದಿನ 18.85 ಕೋಟಿ ರೂ. ರಾಜಸ್ವ

ಬೆಂಗಳೂರು: ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿ. (ಎಂಎಸ್​ಐಎಲ್) ಮದ್ಯದಂಗಡಿಗಳಲ್ಲಿ ಡಿ.31ರಂದು ದಾಖಲೆಯ ಮದ್ಯ ಮಾರಾಟವಾಗಿದ್ದು, ಒಂದೇ ದಿನದಲ್ಲಿ ಸರ್ಕಾರಕ್ಕೆ 18.85 ಕೋಟಿ ರೂ. ಆದಾಯ ಹರಿದು ಬಂದಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 4.34 ಕೋಟಿ ರೂ. ಅಧಿಕ ರಾಜಸ್ವ ಹೆಚ್ಚಾಗಿದೆ. 2022ರ ಡಿ.31ರಂದು 14.51 ಕೋಟಿ ಮೊತ್ತದ ಮದ್ಯ ಮಾರಾಟವಾಗಿತ್ತು.

ರಾಜ್ಯದಲ್ಲಿ 1,031 ಎಂಎಸ್​ಐಎಲ್ ಮದ್ಯದಂಗಡಿಗಳಿವೆ. ರಾಯಚೂರಿನ ರೈಲ್ವೆ ನಿಲ್ದಾಣದ ಬಳಿಯ ಮಳಿಗೆಯಲ್ಲೇ 11.66 ಲಕ್ಷ ರೂ. ಮದ್ಯ ಮಾರಾಟವಾದರೆ, ಅದೇ ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ 9.96 ಲಕ್ಷದ ಮದ್ಯ ಬಿಕರಿಯಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 1.82 ಕೋಟಿ ರೂ. ಮದ್ಯ ಸೇಲ್ ಆಗಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ ಎಂಎಸ್​ಐಎಲ್ ಮಳಿಗೆಗಳಲ್ಲಿ 8 ಕೋಟಿ ರೂ. ಮದ್ಯ ವಹಿವಾಟು ನಡೆಯುತ್ತದೆ.

ರಾಜಸ್ವ ಸಂಗ್ರಹ ಹೆಚ್ಚಳ: ರಾಜ್ಯ ಸರ್ಕಾರವು ಅಬಕಾರಿ ಇಲಾಖೆಗೆ ನಿಗದಿಪಡಿಸಿದ್ದ 36 ಸಾವಿರ ಕೋಟಿ ರೂ. ಗುರಿ ಪೈಕಿ 2023ರ ಡಿಸೆಂಬರ್ ವೇಳೆಗೆ 25,168 ಕೋಟಿ ರೂ. ಆದಾಯ ಬಂದಿದೆ. ಮೂರು ತಿಂಗಳು ಬಾಕಿ ಇರುವುದರಿಂದ ರಾಜಸ್ವ ಗುರಿ ಮುಟ್ಟುವ ನಿರೀಕ್ಷೆಯನ್ನು ಇಲಾಖೆ ಹೊಂದಿದೆ. 2023ರ ಏಪ್ರಿಲ್​ನಲ್ಲಿ 2,308 ಕೋಟಿ ರೂ., ಮೇನಲ್ಲಿ 2,607 ಕೋಟಿ ರೂ., ಜೂನ್​ನಲ್ಲಿ 3,549 ಕೋಟಿ ರೂ., ಜುಲೈನಲ್ಲಿ 2,977 ಕೋಟಿ ರೂ., ಆಗಸ್ಟ್​ನಲ್ಲಿ 2,568 ಕೋಟಿ ರೂ., ಸೆಪ್ಟೆಂಬರ್​ನಲ್ಲಿ 2,599 ಕೋಟಿ ರೂ., ಅಕ್ಟೋಬರ್​ನಲ್ಲಿ 2,691 ಕೋಟಿ ರೂ., ನವೆಂಬರ್​ನಲ್ಲಿ 2,866 ಕೋಟಿ ರೂ ಹಾಗೂ ಡಿಸೆಂಬರ್​ನಲ್ಲಿ 3 ಸಾವಿರ ಕೋಟಿ ರೂ. ಸೇರಿ 25,168 ಕೋಟಿ ರೂ. ಆದಾಯ ಸಂಗ್ರಹವಾಗಿದೆ.