ಜಿಲ್ಲೆ

17,161 ಪರಿಹಾರ ಮೊತ್ತ ಪಾವತಿ ಬಾಕಿ

ಇಂದಿರಾ ಎನ್ ಕೆ

ಬೈಂದೂರು: ರಾಜ್ಯದಲ್ಲಿ 17,161 ಜಾನುವಾರು ಮೃತ ಪ್ರಕರಣಗಳಲ್ಲಿ ಪರಿಹಾರ ಮೊತ್ತ ಪಾವತಿಗೆ ಬಾಕಿ ಇದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿ ಹಸು, ಎಮ್ಮೆ, ಎತ್ತು ಮುಂತಾದ ಮೃತ 111 ಪ್ರಕರಣಗಳಿಗೆ ಪರಿಹಾರ ಮೊತ್ತ ಪಾವತಿಸಲು ಬಾಕಿ ಇದೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು. ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರ ಪ್ರಶ್ನೆಗೆ ಉತ್ತರಿಸಿದರು

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡಿಸಿ ಅಭಿವೃದ್ಧಿಪಡಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಪಾವತಿಸಲು ಬಾಕಿ ಇರುವ ಬಿಲ್‌ಗಳ ಬಗ್ಗೆ ಶಾಸಕ ಗುರುರಾಜ್ ಶೆಟ್ಟಿ ಗಂಟೆಹೊಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜು, ಕರ್ನಾಟಕ ನೀರಾವರಿ ಅಧಿನಿಯಮ 1965ರನ್ವಯ 40 ಹೆಕ್ಟೆರ್‌ನಿಂದ 2000 ಹೆಕ್ಟೆರ್‌ವರೆಗೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತವೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 40 ಹೆಕ್ಟೆರ್‌ಗಿಂತ ಕಡಿಮೆ ಹೆಚ್ಚು ಕಟ್ಟುವ ಪ್ರದೇಶ ಹೊಂದಿದ ಕೆರೆಗಳಿದ್ದು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕೆರೆಗಳಿಲ್ಲ ಎಂದು ಉತ್ತರಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಜಮೀನಿನಲ್ಲಿ ಗೇರು ಲೀಸ್ ಪಡೆದು ಹಲವಾರು ವರ್ಷಗಳಿಂದ ಗೇರು ಸಾಗುವಳಿ ಮಾಡುತ್ತಿರುವವರ ಹೆಸರಿಗೆ ಜಾಗ ಮಂಜೂರು ಮಾಡುವ ಬಗ್ಗೆ ಗಂಟಿಹೊಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ರಾಜ್ಯದಲ್ಲಿ ಉಡುಪಿ, ದ.ಕ. ಜಿಲ್ಲೆಯಲ್ಲಿ ಮಾತ್ರ 550 ಮಂದಿ ಗೇರು ಲೀಸ್ ಹೊಂದಿರುತ್ತಾರೆ. ಬೈಂದೂರು, ಕುಂದಾಪುರ ತಾಲೂಕಿನಲ್ಲಿ 142 ಪ್ರಕರಣಗಳಿದ್ದು, ಹಲವು ವರ್ಷಗಳಿಂದ ಸರ್ಕಾರಿ ಜಮೀನನ್ನು ಗೇರು ಲೀಸ್‌ಗೆ ಪಡೆದುಕೊಂಡು ಸಾಗುವಳಿ ಮಾಡುತ್ತಿರುವ ಅರ್ಹರಿಗೆ ಕಾಯಂ ಆಗಿ ಮಂಜೂರು ಮಾಡುವ ಬಗ್ಗೆ ಕರ್ನಾಟಕ ಭೂ-ಮಂಜೂರಾತಿ ನಿಯಮ 1969ಕ್ಕೆ ತಿದ್ದುಪಡಿ ಮಾಡಿ ನಿಯಮ 23-ಎ ಸೇರ್ಪಡೆಗೊಳಿಸಲಾಗಿದೆ. ಈ ನಿಯಮದಡಿ ಭೂ ಮಂಜೂರಾತಿಗೆ ಕ್ರಮವಹಿಸಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.