ಬೆಂಗಳೂರು: ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೊನಾ ಭಯದಲ್ಲಿ ನಲುಗುತ್ತಿರುವಾಗ, ಬೆಂಗಳೂರಿನಲ್ಲಿ 17 ಕಾಲರಾ ಪ್ರಕರಣಗಳು ಪತ್ತೆಯಾಗಿವೆ!
ಬೆಂಗಳೂರು ದಕ್ಷಿಣ ವಲಯದಲ್ಲಿ 7, ಪೂರ್ವ ವಲಯದಲ್ಲಿ 8, ಪಶ್ಚಿಮ ವಲಯದಲ್ಲಿ 2 ಪ್ರಕರಣ ಸೇರಿ ವಾರದಲ್ಲಿ 17 ಕಾಲರಾ ಪ್ರಕರಣಗಳು ವರದಿಯಾಗಿವೆ. ನೀಲಸಂದ್ರ, ಪದ್ಮನಾಭನಗರ, ಪುಲಕೇಶಿನಗರ, ಬಸವನಗುಡಿ, ಆರ್.ಟಿ. ನಗರ ಮತ್ತು ಎಲ್.ಆರ್. ನಗರ ಸೇರಿ ವಿವಿಧೆಡೆ ಕಾಲರಾ ಕಂಡುಬಂದಿದೆ. ಕಳೆದ 2 ವರ್ಷಗಳಿಂದ ಇಲ್ಲದಿದ್ದ ಕಾಲರಾ ಮತ್ತೆ ಕಾಣಿಸಿಕೊಂಡಿದ್ದು ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ. ವಿಜಯೇಂದ್ರ ಹೇಳಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತವೆ. ಇದೇ ವೇಳೆ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಕುಡಿಯುವ ನೀರು ಪೂರೈಕೆ ಪೈಪುಗಳು ಒಡೆದು ಕಲುಷಿತ ನೀರು ಸೇರ್ಪಡೆಯಾಗಿರಬಹುದು. ಅಶುದ್ಧ ನೀರು ಸೇವನೆ, ಬೀದಿಬದಿ ತೆರೆದಿಟ್ಟ ಆಹಾರ, ಹಣ್ಣುಗಳ ಸೇವನೆ ಹಾಗೂ ಮನೆಯಲ್ಲಿ ಸ್ವಚ್ಛತೆ ಕೊರತೆಯಿಂದ ಕಾಲರಾ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಜಲಮಂಡಳಿ ಮೇಲೆ ಆರೋಪ: ಒಂದೇ ಕಡೆ ಕಾಲರಾ ಕಂಡುಬರದೆ ವಿವಿಧೆಡೆ ಕಾಣಿಸಿಕೊಂಡಿದೆ. ಹಾಗಾಗಿ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಅಶುದ್ಧ ನೀರು ಪೂರೈಸುವ ಮೂಲಕ ಜಲಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಮೇಯರ್ ಹಾಗೂ ಪಾಲಿಕೆ ಅಧಿಕಾರಿಗಳು ಆರೋಪಿಸುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಪೈಪುಗಳ ದುರಸ್ತಿ, ಕುಡಿಯುವ ನೀರಿನಲ್ಲಿ ಕೊಳಚೆ ನೀರು ಸೇರ್ಪಡೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಲಮಂಡಳಿಗೆ ಸೂಚಿಸಲಾಗಿದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ನೀರಿನ ಪರೀಕ್ಷೆ, ಕ್ಲೋರಿನ್ ಮಾತ್ರೆ ವಿತರಣೆ
ಪೈಪ್ಲೈನ್ ನೀರಿನ ನಿರಂತರ ಪರೀಕ್ಷೆ, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಜಲಮಂಡಳಿ ಅಧ್ಯಕ್ಷರಿಗೆ ಸೂಚಿಸಲಾಗಿದೆ. ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ-
ಸಂಸ್ಥೆಗಳ ನೆರವಿನೊಂದಿಗೆ ಕಾಲರಾ ತಡೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕುದಿಸಿ ಆರಿಸಿದ ನೀರು ಕುಡಿಯುವಂತೆ ತಿಳಿಸಲಾಗುತ್ತಿದ್ದು, ಜತೆಗೆ ಕ್ಲೋರಿನ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ತಿಳಿಸಿದ್ದಾರೆ.
ಕಾಲರಾ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು
ಮನೆ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ್ಝ ಕುಡಿಯುವ ನೀರು ಪೂರೈಕೆ ಪೈಪುಗಳು ಒಡೆದು ಚರಂಡಿ ಅದರೊಳಗೆ ಸೇರುತ್ತಿದ್ದರೆ ಕೂಡಲೇ ದುರಸ್ತಿಗೆ ಕ್ರಮ ವಹಿಸಬೇಕು
ಅಂಗಡಿ, ಮುಂಗಟ್ಟು ಮತ್ತು ಹೋಟೆಲ್ಗಳಲ್ಲಿ ನೀರು ಕುಡಿಯುವ ಮುನ್ನ ಎಚ್ಚರಿಕೆ ವಹಿಸಬೇಕು
ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು
ಹೊರಗೆ ಮಾರಾಟ ಮಾಡುವ ತಿಂಡಿ, ತಿನಿಸು ತಿನ್ನಬಾರದು
ಬೀದಿಬದಿ ಹಣ್ಣುಗಳನ್ನು ತಿನ್ನಬಾರದು
ಅಡುಗೆಗೆ ಶುದ್ಧ ನೀರನ್ನು ಬಳಸಬೇಕು
ಕೈಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು
ಕಾಲರಾ ಸೋಂಕಿತ ವ್ಯಕ್ತಿಯಿಂದ ದೂರವಿದ್ದು, ಅವರ ವಸ್ತುಗಳನ್ನು (ಹಾಸಿಗೆ, ಬಟ್ಟೆ..) ಬಿಸಿ ನೀರಿನಿಂದ ಶುಚಿಗೊಳಿಸಬೇಕು.