ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಯಕ್ಷಧ್ರುವ ಪಟ್ಲ ಫೌಂಡೇಷನ್ ಬೆಳ್ತಂಗಡಿ ಘಟಕದ ಮೂರನೇ ವಾರ್ಷಿಕೋತ್ಸವ ಯಕ್ಷ ಸಂಭ್ರಮ ಕಾರ್ಯಕ್ರಮ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಡಿ.14 ನಡೆಯಲಿದ್ದು, ವಿವಿಧ ಸಮಿತಿಗಳ ಅಂತಿಮ ಹಂತದ ಪೂರ್ವ ಸಿದ್ಧತಾ ಸಭೆ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಉಪಸ್ಥಿತಿಯಲ್ಲಿ ನವಶಕ್ತಿ ವಠಾರದಲ್ಲಿ ನಡೆಯಿತು.
ಶಶಿಧರ್ ಶೆಟ್ಟಿ ಮಾತನಾಡಿ, ಹಿಂದಿನ 2 ವರ್ಷ ಪಟ್ಲ ಯಕ್ಷ ಸಂಭ್ರಮ ಅದ್ದೂರಿಯಾಗಿ ನಡೆದಿದ್ದು, ತಾಲೂಕಿನ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಯೋಚನೆಯಂತೆ ಗುರುವಾಯನಕೆರೆಯ ಶಕ್ತಿನಗರ ಸಮೀಪದ ನವಶಕ್ತಿ ಮೈದಾನದಲ್ಲಿ ವಿಶೇಷ ರೀತಿಯಲ್ಲಿ ಈ ಬಾರಿಯ ಯಕ್ಷ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿಗಳನ್ನು ಹಂಚಲಾಗಿದೆ. ಬೆಳಗ್ಗೆ 11.30ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಯಕ್ಷಧ್ರುವ ಯಕ್ಷ ಶಿಕ್ಷಣ ಶಾಲಾ ತಂಡಗಳ ಸುಮಾರು 450 ಮಕ್ಕಳು ಯಕ್ಷಗಾನದೊಂದಿಗೆ ರಂಗ ಪ್ರವೇಶ ಮಾಡಲಿರುವುದು ಈ ಬಾರಿಯ ವಿಶೇಷತೆ ಎಂದು ತಿಳಿಸಿದರು.
ಮೇಳದ ದೇವರ ಮೆರವಣಿಗೆ ಸಂಜೆ 5 ಗಂಟೆಗೆ ಗುರುವಾಯನಕೆರೆ ಬಂಟರ ಭವನದ ಬಳಿಯಿಂದ ಕುಣಿತ ಭಜನೆ, ಚೆಂಡೆ ವಾದ್ಯಗಳು, ಸುಡುಮದ್ದು, ವೇಷಭೂಷಣಗಳೊಂದಿಗೆ ವಿಜೃಂಭಣೆಯಿಂದ ಕ್ರೀಡಾಂಗಣಕ್ಕೆ ಆಗಮಿಸಲಿದೆ. 40ಕ್ಕಿಂತಲೂ ಅಧಿಕ ಖಾದ್ಯಗಳ ರುಚಿ ಸವಿಯುವ ಅವಕಾಶ, ಸಿನಿಮಾ ತಾರೆಯರು, ಯಕ್ಷಗಾನ ಕಲಾವಿದರು ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಸೇರುವ ನಿರೀಕ್ಷೆ ಇರುವುದರಿಂದ ಯಾವುದೇ ರೀತಿಯ ದಟ್ಟಣೆಯಾಗದಂತೆ ಸುಮಾರು 5 ಎಕರೆ ಜಾಗ ಸಮತಟ್ಟುಗೊಳಿಸಿ ಸಿದ್ಧಪಡಿಸಲಾಗಿದೆ ಎಂದರು. ಸಭೆಯಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.