ಜಿಲ್ಲೆ

ಹಿಜಾಬ್​ ವಿವಾದ, ನಾಳೆಯೇ ಹೈಕೋರ್ಟ್ ತೀರ್ಪು: ರಾಜಧಾನಿಯಲ್ಲಿ ಮಾ.21ರ ವರೆಗೂ ನಿಷೇಧಾಜ್ಞೆ

Webdesk - Ravikanth

ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದಲ್ಲದೆ, ಭಾರಿ ಸಂಘರ್ಷಕ್ಕೂ ಕಾರಣವಾಗಿದ್ದ ಹಿಜಾಬ್ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ಮಂಗಳವಾರ ತೀರ್ಪು ಬರಲಿದೆ. ಮತ್ತೊಂದೆಡೆ ಈ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಇರಲಿದೆ.

ಮಾರ್ಚ್ 15ರಿಂದ 21ರ ವರೆಗೆ ಸಿಆರ್‌ಪಿಸಿ 144ರ ಅನ್ವಯ ನಗರದ ಎಲ್ಲೆಡೆ ನಿಷೇಧಾಜ್ಞೆ ವಿಧಿಸಲಾಗಿದೆ. ಒಂದೆಡೆ ಗುಂಪು ಸೇರುವುದು, ಸಭೆ ನಡೆಸುವುದು, ಪ್ರತಿಭಟನೆ, ರ‌್ಯಾಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚಾರಣೆ ನಡೆಸುವುದನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ಕುರಿತು ವಿವಾದವಾಗಿ ಎಲ್ಲೆಡೆ ಪ್ರತಿಭಟನೆ, ರ‌್ಯಾಲಿ ಮತ್ತು ಅಹಿತಕರ ಘಟನೆಗಳು ನಡೆದಿದ್ದವು. ಇದೀಗ ವಿವಾದ ಸಂಬಂಧ ಮಂಗಳವಾರ ಹೈಕೋರ್ಟ್ ತೀರ್ಪು ನೀಡಲಿದೆ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಗುಪ್ತದಳ ಮಾಹಿತಿ ನೀಡಿದೆ. ಇದರ ಅನ್ವಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜಾಲತಾಣಗಳ ಮೇಲೆ ನಿಗಾವಹಿಸಿದ್ದು, ಪ್ರಚೋದನಕಾರಿ ಹೇಳಿಕೆ, ಪೋಸ್ಟ್ ಅಪ್‌ಲೋಡ್ ಮಾಡುವ ಕಿಡಿಗೇಡಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ.

ಹಿಜಾಬ್ ತೀರ್ಪು ಪ್ರಕಣ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿ ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಲಿದ್ದು, ಅದು ಮುಂದಿನ ಆದೇಶದವರೆಗೂ ಜಾರಿ ಇರಲಿದೆ ಎಂಬುದಾಗಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಹಿಜಾಬ್ ಸಂಘರ್ಷ ವೇಳೆ ಅತಿಹೆಚ್ಚು ಗಲಾಟೆ ನಡೆದ ಇನ್ನೂ ಕೆಲವು ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಜಾರಿ ಆಗುವ ಸಾಧ್ಯತೆಗಳಿವೆ.