ದೇವದುರ್ಗ: ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜು.8ರಿಂದ ಕನಿಷ್ಠ 120 ದಿನ ನೀರು ಹರಿಸಲು ತೀರ್ಮಾನಿಸಲಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ಬೆಂಗಳೂರಿನಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜು.1 ರಂದು ನಡೆದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾರಾಯಣಪುರ ಬಲದಂಡೆ ನಾಲೆಗೆ ಜು.8ರಿಂದ ಕನಿಷ್ಠ 120 ದಿನ ನೀರು ಹರಿಸಲು ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಮೊದಲ ಬೆಳೆಗೆ ಪೂರ್ಣಪ್ರಮಾಣದ ನೀರು ಲಭ್ಯವಾಗಲಿವೆ.
ಪ್ರತಿವರ್ಷ ಜುಲೈ ಮೂರು ಇಲ್ಲವೆ, ನಾಲ್ಕನೇ ವಾರಕ್ಕೆ ನಾಲೆಗೆ ನೀರು ಹರಿಸಲಾಗುತ್ತಿತ್ತು. ಇದರಿಂದ ಎರಡನೇ ಬೆಳೆಗೆ ಬೇಸಿಗೆಯಲ್ಲಿ ನೀರಿನ ಕೊರತೆ ಕಾಡುತ್ತಿತ್ತು. ಈಗ 15 ದಿನ ಮುನ್ನವೇ ನಾಲೆಗೆ ನೀರು ಬಿಡಲು ನಿರ್ಣಯಿಸಿರುವುದು ಕೃಷಿಕರ ಖುಷಿ ಹಿಮ್ಮಡಿಗೊಳಿಸಿದೆ. ಇದರಿಂದ ಕೃಷ್ಣಾ ಕೊಳ್ಳದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಕೃಷ್ಣಾ ಮೇಲ್ದಂಡೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದರಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ನಿರೀಕ್ಷೆಯಂತೆ ಶೇ.80 ಭರ್ತಿಯಾಗಿವೆ. ಅಲ್ಲದೆ ಕಳೆದ 15ದಿನಗಳಿಂದ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಹೀಗಾಗಿ ನದಿಗೆ ಹರಿಸುವ ನೀರನ್ನೆ ನಾಲೆಗೆ ಹರಿಸಲು ಐಸಿಸಿ ಸಭೆಯಲ್ಲಿ ಚರ್ಚಿಸಲಾಗಿದೆ. ಎರಡು ಜಲಾಶಯ ಪೂರ್ಣಪ್ರಮಾಣದಲ್ಲಿ ಭರ್ತಿಯಾಗದಿದ್ದರೂ ಸುಮಾರು 91 ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಾಗಿದ್ದರಿಂದ ಈ ನಿರ್ಣಯಕೈಗೊಳ್ಳಲಾಗಿದೆ.
ಜು.8ರಿಂದ ನವೆಂಬರ್ ಮೊದಲ ವಾರದವರೆಗೆ ನೀರು ವಾರಬಂಧಿ ಇಲ್ಲದೆ ಹರಿಯಲಿದ್ದು ಅಷ್ಟರಲ್ಲೆ ಮೊದಲ ಬೆಳೆ ಭತ್ತ ರೈತರ ಕೈಸೇರಲಿವೆ. ಸೋನಾ ಮಸೂರು, ಆರ್‌ಎನ್‌ಆರ್, ಕಾವೇರಿ ತಳಿ ಹೆಚ್ಚಾಗಿ ಬೆಳೆಯುತ್ತಿದ್ದು ಇವು 115ರಿಂದ 120 ದಿನಗಳಲ್ಲಿ ಕೈಸೇರಲಿವೆ. ನವೆಂಬರ್ ಎರಡನೇ ವಾರದಲ್ಲಿ ರಾಶಿಮಾಡಿ ನಾಲ್ಕನೇ ವಾರದಲ್ಲಿ ಬೇಸಿಗೆ(ಎರಡನೇ) ಬೆಳೆಗೆ ಸಿದ್ಧರಾಗಬಹುದು ಎನ್ನುವುದು ರೈತರ ಲೆಕ್ಕಾಚಾರವಾಗಿದೆ.
ಕೃಷಿಕರಿಗೆ ಪ್ಲಸ್ ಪಾಯಿಂಟ್ ಟೇಲೆಂಡ್ ಭಾಗದ ರೈತರ ಜೀವಹಿಂಡುವ ವಾರಬಂಧಿ ಪದ್ಧತಿ ಮೊದಲ ಬೆಳೆಗೆ ಜಾರಿಗೊಳಿಸದಿರುವುದು ಕೃಷಿಕರಿಗೆ ಪ್ಲಸ್ ಪಾಯಿಂಟ್. 123 ಟಿಎಂಸಿ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಸದ್ಯ 87 ಟಿಎಂಸಿ ಅಡಿ ನೀರಿದೆ. 33.31ಟಿಎಂಸಿ ಸಾಮರ್ಥ್ಯದ ನಾರಾಯಣಪುರ ಡ್ಯಾಂನಲ್ಲಿ 26 ಟಿಎಂಸಿ ಸಂಗ್ರಹವಿದೆ. ಎರಡೂ ಸೇರಿ 91ಟಿಎಂಸಿ ಅಡಿ ನೀರು ಬಳಕೆಗೆ ಲಭ್ಯವಿದ್ದು ಎರಡೂ ಜಲಾಶಯದಲ್ಲಿ ಒಳಹರಿವು ಇದೆ. ಇದರ ಆಧಾರದ ಮೇಲೆ ಲೆಕ್ಕಾಚಾರ ಹಾಕಿರುವ ಐಸಿಸಿ ಸಭೆ ಒಳಹರಿವು ಇರುವವರೆಗೆ ವಾರಬಂಧಿ ಹಾಕದಿರಲು ನಿರ್ಧರಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಗಾಲವಿದ್ದು ನೀರು ಬಂದೇಬರುತ್ತೆ ಎನ್ನುವ ಗ್ಯಾರಂಟಿಯಿಂದ ಅವಧಿಗೆ ಮುನ್ನವೇ ನೀರು ಬಿಡುತ್ತಿದೆ.
ಬಲದಂಡೆ ನಾಲೆಗೆ ಪ್ರತಿವರ್ಷ ತಡವಾಗಿ ನೀರು ಬಿಡುತ್ತಿರುವ ಕಾರಣ ಬೇಸಿಗೆಯಲ್ಲಿ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಿದ್ದು, ನೀರು ಲಭ್ಯವಿದೆ ತಕ್ಷಣ ಬಿಡಲು ಒತ್ತಾಯಿಸಿದೆ. ಐಸಿಸಿ ಸಭೆ ಉತ್ತಮ ನಿರ್ಧಾರಕೈಗೊಂಡಿದ್ದು, ನಾಲೆಗೆ 120ದಿನ ನಿರಂತರ ನೀರು ಹರಿಯಲಿದೆ. ಇದರಿಂದ ಟೇಲೆಂಡ್ ಭಾಗದ ರೈತರಿಗೆ ಅನುಕೂಲವಾಗಲಿದೆ. ಕರೆಮ್ಮ ಜಿ.ನಾಯಕ ಶಾಸಕಿ, ದೇವದುರ್ಗ ಐಸಿಸಿ ಸಭೆ ಉತ್ತಮ ತೀರ್ಮಾನ ಕೈಗೊಂಡಿದ್ದು, ಜು.8ರಿಂದ ನೀರು ಬಂದರೆ ಸರಿಯಾದ ಸಮಯಕ್ಕೆ ಮೊದಲ ಬೆಳೆ ಕೈಸೇರಲಿದೆ. ಅಲ್ಲದೆ ಬೇಸಿಗೆ ಬೆಳೆಗೆ ನೀರಿನ ಕೊರತೆಯಾಗಲ್ಲ. ನದಿಗೆ ನೀರು ವ್ಯರ್ಥವಾಗಿ ಹರಿಸುವ ಬದಲು ನಾಲೆಗೆ ಹರಿಸಿದ್ದು ಉತ್ತಮ ಕೆಲಸ. ಟೇಲೆಂಡ್ ಭಾಗದ ರೈತರಿಗೆ ಅನುಕೂಲವಾಗಲಿದೆ. ಹೊನ್ನಪ್ಪಗೌಡ ರೈತ, ಗುಂಡಗುರ್ತಿ