Bengaluru Stampede : ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಐಪಿಎಲ್ ಟ್ರೋಫಿ ವಿಜಯೋತ್ಸವ ದುರಂತದಲ್ಲಿ ಕೊನೆಗೊಂಡಿದೆ. 18 ವರ್ಷದ ಬಳಿಕ ಟ್ರೋಫಿ ಗೆದ್ದ ಖುಷಿ, ಕೇವಲ ಒಂದೇ ದಿನದಲ್ಲಿ ಮಾಯವಾಯಿತು. ಸಂಭ್ರಮದ ಮನೆಯಂತಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂತಕದ ಛಾಯೆ ಆವರಿಸಿತು. ಐಪಿಎಲ್ ಇತಿಹಾಸದಲ್ಲೇ ಕರಾಳ ಘಟನೆಯೊಂದು ಘಟಿಸಿ ಹೋಗಿದೆ. ನೆಚ್ಚಿನ ಕ್ರೀಡಾ ತಾರೆಗಳನ್ನು ಕಣ್ತುಂಬಿಕೊಳ್ಳುವ ಧಾವಂತದಲ್ಲಿ ತಮ್ಮ ರಕ್ಷಣೆಯ ಬಗ್ಗೆ ಯೋಚಿಸದೇ ಕ್ರೀಡಾಂಗಣದತ್ತ ಜಮಾಯಿಸಿದ್ದ ಅಭಿಮಾನಿಗಳಲ್ಲಿ 11 ಮಂದಿ ಕಾಲ್ತುಳಿತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಇದೀಗ ಈ ಘಟನೆ ಕಾರಣ ಏನೆಂಬುದು ತಿಳಿದುಬಂದಿದೆ.
ಮಂಗಳವಾರ (ಜೂನ್ 03) ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಬುಧವಾರ (ಜೂನ್ 04) ಅಹಮದಾಬಾದ್‌ನಿಂದ ತಮ್ಮ ತವರು ಮೈದಾನಕ್ಕೆ ಆರ್ಸಿಬಿ ತಂಡ ಹಿಂತಿರುಗಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂಬ ಸುದ್ದಿ ಕೇಳಿ ಲಕ್ಷಾಂತರ ಅಭಿಮಾನಿಗಳು ಸ್ಟೇಡಿಯಂಗೆ ಜಮಾಯಿಸಿದರು. ಇತ್ತ ಸರ್ಕಾರದಿಂದ ವಿಧಾನಸೌಧದ ಮೆಟ್ಟಿಲುಗಳಲ್ಲಿ ಆರ್ಸಿಬಿ ತಂಡ ಸನ್ಮಾನ ಸ್ವೀಕರಿಸಿದರೆ, ಅತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘೋರ ದುರಂತ ಸಂಭವಿಸಿತು. ಒಂದೇ ಕಡೆ ಲಕ್ಷಾಂತರ ಮಂದಿ ಜಮಾಯಿಸಿದ್ದರು. ಅಲ್ಲದೆ, ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ಸ್ಥಳದಲ್ಲಿ ಮೆಡಿಕಲ್ ವ್ಯವಸ್ಥೆಯು ಇರಲಿಲ್ಲ. ಸುಮಾರು 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದ್ದರು ಎನ್ನಲಾಗಿದೆ. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಇದೊಂದು ಕರಾಳ ಘಟನೆಯಾಗಿದೆ. ಐಪಿಎಲ್ಗೆ ಇದೊಂದು ಕಪ್ಪು ಚುಕ್ಕಿ ಎಂದರೆ ತಪ್ಪಾಗಲಾರದು. ಈ ಘಟನೆಯ ಬಗ್ಗೆ ಕೇಳಿ ಸಚಿನ್, ಅನೀಲ್ ಕುಂಬ್ಳೆ ಸೇರಿದಂತೆ ಅನೇಕ ದಿಗ್ಗಜರು ಕೂಡ ದುಃಖ ವ್ಯಕ್ತಪಡಿಸಿದ್ದಾರೆ.
ಸಂಭ್ರಮಾಚರಣೆ ಸುದ್ದಿ ಕೇಳಿದ ಕೂಡಲೇ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದರು. ಈ ವೇಳೆ ಗಂಟೆಗಟ್ಟಲೇ ಕಾದರೂ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶಿಸಲು ಅವಕಾಶ ಸಿಗಲಿಲ್ಲ. ಇತ್ತ ಸ್ಟೇಡಿಯಂನತ್ತ ಬರುವ ಜನರ ಸಂಖ್ಯೆಯು ಹೆಚ್ಚಾಯಿತು. ಇದರ ನಡುವೆ ಉಚಿತ ಟಿಕೆಟ್ ವಿತರಣೆ ವದಂತಿ ಕೂಡ ಹಬ್ಬಿತ್ತು. ಈ ಗೊಂದಲಗಳಿಂದಾಗಿ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ. ತುಂಬಾ ಕಿರಿದಾದ ಗೇಟ್ ನಂಬರ್ 7ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಟಿಕೆಟ್ ಸಿಗುತ್ತದೆ ಎಂಬ ಆಸೆಯಲ್ಲಿ ಒಮ್ಮೆಲೆ ಎಲ್ಲರೂ ಗೇಟ್ ನಂಬರ್ 7ರತ್ತ ಜಮಾಯಿಸಿದರು. ಇದರಿಂದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಯಿತು. ಇದೇ ಸಂದರ್ಭದಲ್ಲಿ ಜೋರಾಗಿ ಮಳೆ ಬಂದಿದ್ದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು 21 ಸ್ಟ್ಯಾಂಡ್ಗಳಿದ್ದು, 13 ಗೇಟುಗಳಿವೆ. ಇದರಲ್ಲಿ ಗೇಟ್ ನಂಬರ್ 9 ಮತ್ತು 10 ಅನ್ನು ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಸದಸ್ಯರಿಗೆ ಮಾತ್ರ ಮೀಸಲಿಡಲಾಗಿದೆ. ಮುಖ್ಯ ಪ್ರವೇಶ ಮಾರ್ಗದ ಅಕ್ಕಪಕ್ಕದಲ್ಲಿರುವ 5,6,7,19 ಮತ್ತು 20ನೇ ಗೇಟ್ಗಳಲ್ಲಿ ನಿನ್ನೆ ಜನರು ಜಮಾಯಿಸಿದ್ದರು. ಆದರೆ, ಗೇಟ್ ನಂಬರ್ 7ರಲ್ಲಿ ವದಂತಿಯ ಕಾರಣದಿಂದ ಭಾರೀ ಸಾವು-ನೋವು ಸಂಭವಿಸಿದೆ. ಇದಿಷ್ಟೇ ಅಲ್ಲದೆ, ವಿಜಯೋತ್ಸವ ಮೆರವಣಿಗೆ ವಿಚಾರದಲ್ಲಿ ಸರ್ಕಾರದ ವಿಳಂಬದ ನಿರ್ಧಾರವೂ ಕೂಡ ಇದಕ್ಕೆ ಕಾರಣವಾಗಿದೆ. ಮೆರವಣಿಗೆ ಆಗಿದ್ದರೆ, ಜನರು ಕ್ರೀಡಾಂಗಣದತ್ತ ಸುಳಿಯುತ್ತಿರಲಿಲ್ಲ. ಆದರೆ, ಮೆರವಣಿಗೆ ರದ್ದಾದಾಗ ಎಲ್ಲರೂ ಕ್ರೀಡಾಂಗಣದತ್ತ ಜಮಾಯಿಸಿದ್ದು, ಈ ದುರ್ಘಟನೆ ಕಾರಣವಾಗಿದೆ ಎಂದು ಹೇಳಲಾಗಿದೆ.
ನಿನ್ನೆ ವಿಧಾನಸೌಧದಲ್ಲಿ ಆರ್ಸಿಬಿ ಆಟಗಾರರಿಗೆ ನಡೆದ ಸನ್ಮಾನ ಸಮಾರಂಭವೂ ಕೂಡ ಅವ್ಯವಸ್ಥೆಯ ಆಗರವಾಗಿತ್ತು. ಇತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸರ್ಕಾರ ವಿಫಲವಾಯಿತು. ಯಾವುದೇ ತುರ್ತು ವೈದ್ಯಕೀಯ ಸೌಲಭ್ಯ ಇರಲಿಲ್ಲ. ಭಾರಿ ಜನ ಜಮಾಯಿಸಿದ್ದರಿಂದ ಪೊಲೀಸರಿಗೂ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ತರಾತುರಿಯಲ್ಲಿ ಸಮಾರಂಭ ಆಯೋಜನೆ ಮಾಡಿದ್ದು ಕೂಡ ಈ ದುರಂತಕ್ಕೆ ಕಾರಣವಾಗಿದೆ. ಪೂರ್ವ ಸಿದ್ಧತೆ ಮಾಡಿ, ಒಂದೆರೆಡು ದಿನ ಬಿಟ್ಟು ಈ ಸಂಭ್ರಮಾಚರಣೆ ಮಾಡಿದ್ದರೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಆದರೆ, ಆತಾತುರವಾಗಿ ಮಾಡುವ ಮೂಲಕ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಸಹ ಘೋಷಿಸಿದೆ. ಅದೇ ರೀತಿ, ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.