ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ಹತ್ತು ವರ್ಷಗಳಿಂದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆ ಶಹೀದ್ ಸಿ.ಎಂ.ಅಬ್ದುಲ್ಲ ಮುಸ್ಲಿಯಾರ್ ಫೌಂಡೇಶನ್ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ದಶಮಾನೋತ್ಸವ ಸಂಭ್ರಮ, ಧಾರ್ಮಿಕ ಪದವಿ ಪ್ರದಾನ ಸಮಾರಂಭ ನ.1ರಿಂದ 3ರ ವರೆಗೆ ನಡೆಯಲಿದೆ ಎಂದು ಸಂಸ್ಥೆಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿದ್ಯಾಕೇಂದ್ರದ ದಶಮಾನೋತ್ಸವದ ಅಂಗವಾಗಿ ನ.1 ರಂದು ಮಧ್ಯಾಹ್ನ ತೋಡಾರು ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಂಸ್ಥೆಯ ಕ್ಯಾಂಪಸ್ ವರೆಗೆ ವಾಹನ ಜಾಥ, ಸಂಸ್ಥೆಯ ಆವರಣದಲ್ಲಿ ದ್ವಜಾರೋಹಣ, ಮಗ್ರಿಬ್ ನಮಾಝಿನ ಬಳಿಕ ಅಂತರಾಷ್ಟ್ರೀಯ ವಾಗಿ ಅಲ್ ಹಾಫಿಕ್ ಅಹ್ಮದ್ ಕಬೀರ್ ಬಾಖವಿ ಕೇರಳ ಇವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ.
ಮೂರು ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಗಣಿತ, ಪಾರಂಪರಿಕ ವಸ್ತುಗಳು, ವಿಸ್ಮಯ ಲೋಕ, ಮೆಂಟಲಿಸಂ, ಎ.ಐ ಮತ್ತು ಇತರ ವಿಷೇಶ ಆಕರ್ಷಣೆಗಳ ದಾರುನ್ನೂರು ಎಕ್‌ಸ್ಪೋ 2024 ನಡೆಯಲಿದೆ.
ನ.2ರಂದು ಪೂರ್ವಾಹ್ನ 9ಕ್ಕೆ ಬ್ಯಾರಿ ಸಾಂಸ್ಕೃತಿಕ ಸಮ್ಮಿಲನದಲ್ಲಿ ಬ್ಯಾರಿ ಸಾಹಿತ್ಯ, ಸಂಸ್ಕೃತಿ ಮತ್ತು ಬೆಳವಣಿಗೆಯ ತರಬೇತಿ, ಯೂತ್ ಮೀಟ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬ್ಯಾರಿ ಸಾಧಕರಿಗೆ ಸನ್ಮಾನ ನಡೆಯಲಿದೆ. ಅಪರಾಹ್ನ 2ರಿಂದ ಶಹೀದ್ ಸಿ.ಎಂ ಉಸ್ತಾದ್ ಕಾನ್ಸರೆನ್ಸ್‌ನಲ್ಲಿ ಸಿ.ಎಂ ಉಸ್ತಾದ್ ಜೀವನ ಚರಿತ್ರೆಯ ಬಗ್ಗೆ ವಿವಿಧ ಸೆಮಿನಾರ್‌ಗಳು ನಡೆಯಲಿದೆ. ಅಸರ್ ನಮಾಝಿನ ಬಳಿಕ ಅಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಇವರು ನೂತನ ಗ್ರಂಥಾಲಯ ಉದ್ಘಾಟನೆ ಮಾಡಲಿದ್ದಾರೆ. ಮಗ್ರಿಬ್ ನಮಾಝಿನ ಬಳಿಕ ಅಂತರಾಷ್ಟ್ರೀಯವಾಗಿ ಸಿಂಸಾರುಲ್ ಹಖ್ ಹುದವಿ ಕೇರಳ ಇವರಿಂದ ಮುಖ್ಯ ಪ್ರಭಾಷಣ ಹಾಗೂ ವಲಿಯುಲ್ಲಾಹಿ ಫೈಝಿ ವಾಯಕಗಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ.
ನ.3ರಂದು ಪೂರ್ವಹ್ನ 9.00ಕ್ಕೆ ಮಹಲ್‌ಲ್ ಅಭಿವೃದ್ಧಿ, ನಾಯಕತ್ವದ ಕುರಿತಂತೆ ಮಹಲ್‌ಲ್ ಸಾರಥಿ ಸಂಗಮ ನಡೆಯಲಿದೆ. ಅಪರಾಹ್ನ 3ಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ಸೌಹಾರ್ದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವರಾದ ಜಮೀರ್ ಅಹಮದ್, ರಹೀಂ ಖಾನ್. ಶಾಸಕರಾದ ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಐವನ್ ಡಿಸೋಜಾ, ಮಾಜಿ ಸಚಿವ ಅಭಯಚಂದ್ರ ಜೈನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕಾಶಿಪಟ್ಣ ಗ್ರಾ.ಪಂ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಮರೋಡಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಸ್ಥಳೀಯ ಪ್ರಮುಖರಾದ ಜಯಂತ ಕೋಟ್ಯಾನ್ ಮೊದಲಾದವರು ಭಾಗವಹಿಸಲಿದ್ದಾರೆ.
ಮಗ್ರಿಬ್ ನಮಾಝಿನ ಬಳಿಕ ಸನದುದಾನ ಮಹಾ ಸಮ್ಮೇಳನ ನಡೆಯಲಿದೆ ಎಂದರು.
ದಾರುನ್ನೂರು ಕೇಂದ್ರ ಸಮಿತಿ ಅಧ್ಯಕ್ಷರು ಹಾಗೂ ದ.ಕ ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್, ಕಾರ್ಯದರ್ಶಿ ಅಬ್ದುಲ್ ಸಮದ್ ಹಾಜಿ, ದಶಮಾನೋತ್ಸವ ಸಮಿತಿ ಸಂಚಾಲಕ ಫಕೀರಬ್ಬ ಮರೋಡಿ, ಮುಖ್ಯಶಿಕ್ಷಕ ಹುಸೈನ್ ರಹ್ಮಾನಿ, ಅಂಗರಕರಿಯ ಖತೀಬ್ ಸಯ್ಯಿದ್ ಅಕ್ರಂ ತಂಙಳ್, ಪ್ರಾಂಶುಪಾಲ ಅಮೀನ್ ಹುದವಿ, ಆಸ್ಕೋ ಅಬ್ದುಲ್ ರಹಿಮಾನ್ ಹಾಜಿ, ಶಾಹುಲ್ ಹಮೀದ್ ತಂಙಳ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.