"ಮಾಯಾವಿ ಪೇಂಟಿಂಗ್".... ವಿಜಯವಾಣಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ..! 
ದೀಪಾವಳಿ ವಿಶೇಷ

"ಮಾಯಾವಿ ಪೇಂಟಿಂಗ್".... ವಿಜಯವಾಣಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ..! Vijayavani Deepavali Story Contest

ಬೆಂಗಳೂರಿನ ಪ್ರಸಿದ್ಧ ‘ಇಮ್ಯಾಜಿನೇಷನ್ ಸ್ಪೇಸ್ ಆರ್ಟ್ ಗ್ಯಾಲರಿ’ಯಲ್ಲಿ ಆ ದಿನ ಬೆಳಗ್ಗೆ ದೊಡ್ಡ ತಲ್ಲಣ ಸೃಷ್ಟಿಯಾಗಿತ್ತು. ಗ್ಯಾಲರಿಯ ಮಾಲಿಕ ಹಾಗೂ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಸಂಗಮೇಶ್ ತಮ್ಮದೇ ಗ್ಯಾಲರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ವಿಷಯ ಅಂದು ಬೆಳಗ್ಗೆ ಗ್ಯಾಲರಿಯನ್ನು ಸ್ವಚ್ಛ ಮಾಡಲು ಕೆಲಸದವರು ಬಂದ ಮೇಲಷ್ಟೆ ತಿಳಿಯಿತು. ಒಳಗಿನಿಂದ ಗ್ಯಾಲರಿ ಮುಚ್ಚಿದ ಕಾರಣ ಸಂಗಮೇಶ್ ಒಳಗೇ ಚಿತ್ರ ಬಿಡಿಸುವಲ್ಲಿ ತಲ್ಲೀನರಾಗಿರಬಹುದು ಎಂದು ಭಾವಿಸಿದ ಕೆಲಸದಾಕೆ, ಸಂಗಮೇಶ್​ರನ್ನು ಕರೆಯುತ್ತ ಎಷ್ಟೇ ಬಾಗಿಲು ತಟ್ಟಿದರೂ ಬಾಗಿಲು ತೆರೆಯಲಿಲ್ಲ. ಆತಂಕಗೊಂಡ ಕೆಲಸದಾಕೆ ಆರ್ಟ್ ಗ್ಯಾಲರಿಯ ಮ್ಯಾನೇಜರ್ ಮನೋಜ್​ಗೆ ಕರೆ ಮಾಡಿದಳು.

‘‘ನಿನ್ನೆ ಸಂಜೆ ಯಾವುದೋ ಒಂದು ಮುಖ್ಯವಾದ ಚಿತ್ರ ಬಿಡಿಸುವಲ್ಲಿ ತೊಡಗಿದ್ದ ಅವರು ಸಮಯದ ಅರಿವಿಲ್ಲದೇ... ನಾನು ಹೋಗುವ ಸಮಯಕ್ಕೆ ಹೋಗಿ ಕರೆದರೆ, ‘ನನಗೆ ಇನ್ನೂ ಒಂಚೂರು ಕೆಲಸವಿದೆ, ಮುಗಿದ ಕೂಡಲೇ ನಾನೇ ಗ್ಯಾಲರಿಯನ್ನು ಮುಚ್ಚಿಕೊಂಡು ಹೋಗುತ್ತೇನೆ’ ಎಂದಿದ್ದರು’’ ಅಂದ ಮ್ಯಾನೇಜರ್ ಮನೋಜ. ಸ್ವಲ್ಪ ಸಮಯ ಬಿಟ್ಟು ‘‘ಅಲ್ಲೇ ಒಳಗೆ ಎಲ್ಲೋ ಆಯಾಸದಿಂದಾಗಿ ಗಾಢ ನಿದ್ರೆ ಮಾಡುತ್ತಿರಬೇಕು, ಸ್ವಲ್ಪ ಗ್ಯಾಲರಿಯ ಸುತ್ತ ನೋಡಮ್ಮ, ಯಾವುದಾದರೊಂದು ಕಿಟಕಿ ತೆರದಿರಬಹುದು. ಬಹುಶಃ ಅಲ್ಲಿಂದ ಕರೆದರೆ ಅವರಿಗೆ ಎಚ್ಚರವಾಗಬಹುದು’’ ಎಂದು ಕೆಲಸದಾಕೆಗೆ ಹೇಳಿದ. ಮನೋಜನ ಸೂಚನೆಯಂತೆ ಕೆಲಸದಾಕೆ ಗ್ಯಾಲರಿಯ ಸುತ್ತ ಒಂದು ಸುತ್ತು ಸುತ್ತಿ ಬಂದಿದ್ದಳು. ಎಲ್ಲೂ ಕಿಟಕಿಗಳಾಗಲಿ, ಬಾಗಿಲುಗಳಾಗಲಿ ತೆರೆದಂತೆ ಕಾಣಲಿಲ್ಲ. ಕೂಡಲೇ ಕೆಲಸದಾಕೆ ಇದರ ಬಗ್ಗೆ ಮ್ಯಾನೇಜರ್ ಮನೋಜನಿಗೆ ವಿವರಿಸಿದಳು. ಸ್ವಲ್ಪ ಹೊತ್ತು ಕಳೆಯುತ್ತಿದ್ದಂತೆಯೇ ಈ ಎಲ್ಲ ಮಾಹಿತಿ ಗಾಳಿಯಂತೆ ಎಲ್ಲೆಡೆ ಪಸರಿಸಿ, ಸಂಗಮೇಶ್​ನ ಆಪ್ತರು, ಸ್ನೇಹಿತರು, ಬಂಧು-ಬಳಗದವರೆಲ್ಲರೂ ಆರ್ಟ್ ಗ್ಯಾಲರಿಯ ಮುಂದೆ ಜಮಾಯಿಸಿದರು.

ಬಂದವರಲ್ಲಿ ಕೆಲವರು ಆರ್ಟ್ ಗ್ಯಾಲರಿಯ ಮುಖ್ಯ ಬಾಗಿಲನ್ನು ಒಡೆದು ಒಳಗೆ ಹೋಗುವುದೆಂದು ತೀರ್ವನಿಸಿಕೊಂಡು, ಅಕ್ಕ ಪಕ್ಕ ಸಿಕ್ಕ ಕೆಲವು ಆಯುಧಗಳನ್ನು ಬಳಸಿ, ಬಾಗಿಲನ್ನು ಮುರಿದು ಒಳಗೆ ನಡೆದೇ ಬಿಟ್ಟರು. ಒಳಗೆ ಹೊಕ್ಕ ಆ ಜನ ಅಲ್ಲಿನ ವಾಸ್ತವ ಸ್ಥಿತಿಯನ್ನು ಬೆರಗಾಗಿ ನೋಡುತ್ತಿದ್ದರು. ಗ್ಯಾಲರಿಯ ಎಲ್ಲ ಕಿಟಕಿ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದವು. ಸಂಗಮೇಶ್ ಗ್ಯಾಲರಿಯ ಒಳಗೇ ಇದ್ದುಕೊಂಡು, ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿ ಗಾಳಿಯಲ್ಲಿ ಕರಗಿ ಮಾಯವಾದಂತೆ ವಾಸ್ತವ ಸ್ಥಿತಿ ತೋರುತ್ತಿತ್ತು. ಆದರೆ ಇದು ಮಾಯಾಜಗತ್ತು ಅಲ್ಲವಲ್ಲ ಎಂದು ಅರಿತ ಅಲ್ಲಿನ ಜನ ಮುಂದೆ ಏನಾದರೊಂದು ಮಾಹಿತಿ ಸಿಗಬಹುದೆಂದು, ಬಹಳ ನಿರೀಕ್ಷೆಯೊಡನೆ ಸಿಸಿ ಟಿವಿ ಕಂಟ್ರೋಲ್ ರೂಮಿನೆಡೆಗೆ ನಡೆದರು. ಅಲ್ಲಿ ಹೋದ ಅವರಿಗೆ ವಿಚಿತ್ರವೊಂದು ಕಾದಿತ್ತು. ಹಿಂದಿನ ದಿನ ಗ್ಯಾಲರಿಗೆ ಬಂದ ಹಾಗೂ ಸಂಜೆ ಹೊರಗೆ ಹೋದ ಎಲ್ಲ ಜನರ ಫೂಟೇಜ್ ಅಲ್ಲಿತ್ತು, ಆದರೆ ಸಂಗಮೇಶ್ ಗ್ಯಾಲರಿಯಿಂದ ಹೊರಗೆ ಬಂದ ಫೂಟೇಜ್ ಕಾಣಲಿಲ್ಲ. ಜನಕ್ಕೆ ಒಂದಂತೂ ಸ್ಪಷ್ಟವಾಯ್ತು, ಸಂಗಮೇಶ್ ಗ್ಯಾಲರಿಯ ಒಳಗೆ ಇದ್ದ ಸಂದರ್ಭದಲ್ಲೇ ಅವರಿಗೆ ಏನೋ ಆಗಿದೆ ಎಂದು. ಅಷ್ಟೊತ್ತಿಗಾಗಲೇ ಈ ಸುದ್ದಿ ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿ, ಪೊಲೀಸರು ತಮಗೆ ತಲುಪಿದ ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ, ನಾಪತ್ತೆ ಅಥವಾ ಅಪಹರಣ ಪ್ರಕರಣವೇ ಆಗಿರುತ್ತದೆಂದು ಭಾವಿಸಿ ತಮ್ಮೊಡನೆ ಈ ಹಿಂದೆ ಇಂಥದ್ದೇ ಅನೇಕ ಪ್ರಕರಣಗಳಲ್ಲಿ ತಮಗೆ ಸಹಾಯ ಮಾಡಿದ್ದ, ನಿಗೂಢ ಪ್ರಕರಣಗಳನ್ನು ಭೇದಿಸುವ ಮೇಧಾವಿ, ಡಿಟೆಕ್ಟಿವ್ ಅನಿಕೇತ್​ನೊಡನೆ ಅಲ್ಲಿಗೆ ಬಂದರು.

ಅನಿಕೇತ್ ಕೇವಲ ಪತ್ತೆದಾರನಲ್ಲ; ಹಳೆಯ ಹಸ್ತ ಪ್ರತಿಗಳು, ಐತಿಹಾಸಿಕ ಚಿಹ್ನೆಗಳು ಮತ್ತು ಕಲಾಕೃತಿಗಳಲ್ಲಿ ಅಡಗಿರುವ ರಹಸ್ಯ ಸಂಕೇತಗಳನ್ನು ಬಿಡಿಸುವಲ್ಲಿ ಜಾಗತಿಕ ಮಟ್ಟದ ಪರಿಣಿತ. ಸಿನಿಮಾಗಳಲ್ಲಿ ತೋರಿಸುವ ಹಾಗೆ ಸೂಟು ಬೂಟು ಧರಿಸಿ, ಕೈಯಲ್ಲೊಂದು ಭೂತಗನ್ನಡಿಯನ್ನು ಹಿಡಿದು, ನೋಡುವವರಿಗೆ ನೋಟದಲ್ಲೇ ಗೊತ್ತಾಗುವ ಹಾಗೆ. ಅಲ್ಲದೇ, ಸಾಧಾರಣವಾದ ಮೇಲಂಗಿಯೊಂದನ್ನು ಧರಿಸಿ, ರಾತ್ರಿ ಹೊತ್ತು ತೊಡುವ ನೈಟ್ ಪ್ಯಾಂಟ್ ಹಾಗೂ ದಿನಬಳಕೆಯ ಪಾದರಕ್ಷೆಯನ್ನು ತೊಟ್ಟು ಪ್ರಕರಣದ ಸ್ಥಳಕ್ಕೆ ಬಂದಿದ್ದ. ಬಂದೊಡನೆ ನೇರವಾಗಿ ಸಂಗಮೇಶ್ ಅವರ ಸ್ಟುಡಿಯೋ ಕೋಣೆಗೆ ಹೋದ. ಅಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಆದರೆ ಹೋದೊಡನೆಯೇ ಅವನ ಗಮನ ಸೆಳೆದಿದ್ದು ಮಾತ್ರ ಕೋಣೆಯ ಮಧ್ಯದಲ್ಲಿದ್ದ ಆ ಅಪೂರ್ಣ ಪೇಂಟಿಂಗ್. ಅದು ಮಳೆಗಾಲದಲ್ಲಿನ ಮುಸ್ಸಂಜೆ ವೇಳೆ ದೇವಸ್ಥಾನದ ಮುಂದೆ ನಿಂತಿದ್ದ ಒಬ್ಬ ವ್ಯಕ್ತಿಯ ಅದ್ಭುತ ದೃಶ್ಯವಾಗಿತ್ತು. ಮಳೆಗಾಲದ ಸಂದರ್ಭ ಜಿಟಿಜಿಟಿ ಮಳೆಯಲ್ಲಿ ಒಬ್ಬ ವ್ಯಕ್ತಿ ದೇವಸ್ಥಾನದ ಮುಂದೆ ಹಳೆಯ ಕನ್ನಡಿಯೊಂದನ್ನು ಹಿಡಿದು, ಏನೋ ಬೆಲೆ ಕಟ್ಟಲಾಗದ್ದು ಸಿಕ್ಕಿದೆ ಎನ್ನುವ ಮುಖಭಾವದೊಡನೆ ಚಿತ್ರಕಾರನನ್ನೇ ದಿಟ್ಟಿಸಿ ನೋಡುತ್ತಿದ್ದ ಚಿತ್ರ ಅದಾಗಿತ್ತು.

ಅನಿಕೇತ್ ಆ ಪೇಂಟಿಂಗ್​ಅನ್ನು ಸೂಕ್ಷ್ಮವಾಗಿ ಗಮನಿಸಲು ಶುರು ಮಾಡಿದ. ಗ್ಯಾಲರಿಯ ಮ್ಯಾನೇಜರ್ ಮನೋಜ ಗಾಬರಿಯಿಂದ ಕೇಳಿದ, ‘‘ಸರ್, ಇದರಲ್ಲಿ ಏನಾದರೂ ಸುಳಿವು ಸಿಗುತ್ತಾ? ಪೊಲೀಸರು ಇಡೀ ನಗರ ಹುಡುಕಿದರೂ ಸಂಗಮೇಶ್ ಸರ್ ಪತ್ತೆಯಾಗಿಲ್ಲ...’’

ಅನಿಕೇತ್ ಒಂದು ಮಾತನ್ನೂ ಆಡಲಿಲ್ಲ. ತನ್ನ ಪ್ಯಾಕೆಟ್​ನಿಂದ ಅಲ್ಟ್ರಾ ವೈಲೆಟ್ (ಯುವಿ) ಲೈಟ್ ತೆಗೆದು ಪೇಂಟಿಂಗ್ ಮೇಲೆ ಹರಿಸಿದ. ತಕ್ಷಣವೇ ಅಲ್ಲಿಯವರೆಗೆ ಕಣ್ಣಿಗೆ ಕಾಣದ ಕೆಲವು ರಹಸ್ಯ ಅಕ್ಷರಗಳು ಮತ್ತು ಸಂಖ್ಯೆಗಳು ಕ್ಯಾನ್ವಾಸ್ ಮೇಲೆ ಹೊಳೆಯಲಾರಂಭಿಸಿದವು.

‘517426- ಬೆಳಕು ಎಲ್ಲಿದೆಯೋ, ನಿಜವೂ ಅಲ್ಲೇ ಇದೆ’ ಎಂಬ ಒಗಟಿನಂತಹ ವಾಕ್ಯ ಪೇಂಟಿಂಗ್ ನ ಕೆಳಭಾಗದಲ್ಲಿ ಮೂಡಿ ಬಂತು. ‘‘6 ಸಂಖ್ಯೆಗಳಿಂದ ಸಿಗಬಹುದಾದ ಒಂದು ಸ್ಥಳವೆಂದರೆ ಅದು ಪಿನ್ ಕೋಡ್ ಮಾತ್ರ’’ ಎಂದು ಉದ್ಗರಿಸಿದ ಅನಿಕೇತ್. ‘‘ಸಂಗಮೇಶ್ ಕೇವಲ ಚಿತ್ರ ಬಿಡಿಸುತ್ತಿರಲಿಲ್ಲ. ಅವರು ಅನೇಕ ಐತಿಹಾಸಿಕ ದೇವಸ್ಥಾನದ ಇತಿಹಾಸ ಹಾಗೂ ಅಲ್ಲಿನ ನಿಧಿಗಳ ಕುರಿತಾಗಿ ಸಂಶೋಧನೆ ಮಾಡುತ್ತಿದ್ದರು. ಈ ಪೇಂಟಿಂಗ್ ಕೇವಲ ಒಂದು ಕಲಾಕೃತಿಯಲ್ಲ, ಇದೊಂದು ರಹಸ್ಯ ನಕ್ಷೆ!’’

ತಕ್ಷಣ ತನ್ನ ಬಳಿಯಿದ್ದ ಮೊಬೈಲ್​ನಲ್ಲಿ ಪಿನ್ ಕೋಡ್ ನಮೂದಿಸಿ ಸ್ಥಳ ಯಾವುದಾಗಿರಬಹುದೆಂದು ಪರಿಶೀಲಿಸತೊಡಗಿದ. ಅದು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಗೆ ಹೊಂದಿಕೊಂಡಿರುವ ಪ್ರಸ್ತುತ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ತಾಲ್ಲೂಕಿನ ಪಕ್ಕದಲ್ಲಿನ ಕೆಲವು ಪ್ರದೇಶಗಳನ್ನು ಸೂಚಿಸುತ್ತಿತ್ತು. ಕೂಡಲೇ ಆ ಜಾಗಕ್ಕೆ ಹೋಗಿ ಪೇಂಟಿಂಗ್​ನಲ್ಲಿನ ದೇವಸ್ಥಾನವನ್ನೇ ಹೋಲುವ ದೇವಸ್ಥಾನವನ್ನು ಪತ್ತೆ ಹಚ್ಚುವುದೆಂದು ತೀರ್ವನಿಸಿದ. ಹೊರಡುವ ಮುಂಚೆ ಸಂಗಮೇಶ್ ಅವರಿಗೆ ಸಂಬಂಧಿಸಿದಂತೆ ಮೂರು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ. ಅವರಲ್ಲಿ ಮೊದಲನೆಯವನು ಮನೋಜ, ಗ್ಯಾಲರಿ ಮ್ಯಾನೇಜರ್. ಸಂಗಮೇಶ್ ಅವರ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಈತ, ಇತ್ತೀಚೆಗೆ ಗ್ಯಾಲರಿಯ ಖಾತೆಯಿಂದ ದೊಡ್ಡ ಮೊತ್ತವೊಂದು ಮಾಯವಾದದ್ದರಲ್ಲಿ ತೊಡಗಿಕೊಂಡ ಬಗ್ಗೆ ಈತನ ಮೇಲೆ ಸಂಶಯವಿತ್ತು. ಎರಡನೆಯವನು ಪ್ರಜ್ವಲ್, ಕಲಾ ವಿಮರ್ಶಕ. ಜಗತ್ತಿನಾದ್ಯಂತ ಅಪರೂಪದ ಕಲಾಕೃತಿಗಳನ್ನು ಕೊಳ್ಳುವ- ಮಾರುವ ದಂಧೆಯ ಲಿಂಕ್ ಹೊಂದಿದ್ದ ಕುತಂತ್ರಿ. ಸಂಗಮೇಶ್​ರ ಈ ಅಪೂರ್ಣ ಪೇಂಟಿಂಗ್​ಅನ್ನು ಕೋಟಿ ಬೆಲೆಗೆ ಕೊಳ್ಳಲು ಇವನು ಹಠ ಹಿಡಿದಿದ್ದ. ಮೂರನೆಯವಳು ಸಂಗಮೇಶ್​ರ ಸಾಕು ಮಗಳು ರಾಧಾ. ತಂದೆಯ ಆಸ್ತಿ ಮೇಲೆ ಕಣ್ಣಿಟ್ಟಿದ್ದಾಳೆ ಎಂಬ ವದಂತಿ ಇತ್ತು. ತಂದೆ ನಾಪತ್ತೆಯಾಗುವುದಕ್ಕಿಂತ ಎರಡು ದಿನ ಮೊದಲೇ ಗೆಳೆಯರೊಂದಿಗೆ ಸೇರಿ ಪ್ರವಾಸ ಹೋಗಿರುವುದಾಗಿ ಹೇಳುತ್ತಿದ್ದಳು.

‘ಬೆಳಕು ಎಲ್ಲಿದೆಯೋ-ನಿಜವೂ ಅಲ್ಲಿದೆ...’ ಅನಿಕೇತ್ ಈ ವಾಕ್ಯವನ್ನು ಪದೇಪದೆ ಯೋಚಿಸಿದ. ದೇವಸ್ಥಾನದ ಮುಂದೆ ನಿಂತಿದ್ದ ವ್ಯಕ್ತಿಯು ಕೈಯಲ್ಲಿ ಹಿಡಿದಿದ್ದ ಕನ್ನಡಿಯಲ್ಲಿ ದೇವಸ್ಥಾನದಲ್ಲಿನ ದೀಪದ ಪ್ರತಿಬಿಂಬ ಇದೆ. ಆ ದೀಪದ ಪ್ರತಿಫಲನ ಕನ್ನಡಿಯ ವಿರುದ್ಧ ದಿಕ್ಕಿನಲ್ಲಿ ಒಂದು ಕಡೆ ಬಿದ್ದಿರಬೇಕಲ್ಲ ಎಂದು ಯೋಚಿಸಿದ. ಆದರೆ ಪೇಂಟಿಂಗ್​ನಲ್ಲಿನ ಸನ್ನಿವೇಶವು ಮುಸ್ಸಂಜೆಯಾಗಿದ್ದು, ಪೂರ್ತಿ ಕತ್ತಲಾಗಿರಲಿಲ್ಲ. ಆದ್ದರಿಂದ ಅನಿಕೇತ್ ತನ್ನ ಬಳಿಯ ಭೂತಗನ್ನಡಿಯಲ್ಲಿ ಪೇಂಟಿಂಗ್​ಅನ್ನು ಮತ್ತೊಮ್ಮೆ ಪರಿಶೀಲಿಸುತ್ತಾ ದೀಪದ ಪ್ರತಿಬಿಂಬ ಎಲ್ಲಾದರೂ ಬಿದ್ದ ಹಾಗೆ ಕಾಣುತ್ತದೇನೋ ಎಂದು ನೋಡುತ್ತ ಕುಳಿತ.

ಸ್ವಲ್ಪ ಸಮಯದ ನಂತರ ಏನನ್ನೋ ಕಂಡುಕೊಂಡವನಂತೆ ಪಿನ್ ಕೋಡ್ ಮೂಲಕ ಹುಡುಕಿದ್ದ ಪ್ರದೇಶದತ್ತ ಅನಿಕೇತ್ ಸಾಗಿದ. ಬೆಂಗಳೂರಿನಿಂದ ಸರಿಸುಮಾರು 100 ಕಿಮೀ ಇರುವ ಗುಡಿಪಲ್ಲಿ ಎಂಬ ಆ ಪ್ರದೇಶಕ್ಕೆ ತಲುಪಲು 4 ಗಂಟೆ ಬೇಕಾಯಿತು. ಅಷ್ಟೊತ್ತಿಗೆ ಇಳಿ ಸಂಜೆಯಾಗಿತ್ತು. ಕೂಡಲೇ ಅಲ್ಲಿನ ಒಂದಷ್ಟು ಜನರ ಬಳಿ ಪೇಂಟಿಂಗ್​ನ ಫೋಟೊವೊಂದನ್ನು ತೋರಿಸಿ, ‘‘ಇದೇ ತರಹದ ದೇವಸ್ಥಾನ ಇಲ್ಲಿ ಎಲ್ಲಾದರೂ ಇದೆಯೇ’’ ಎಂದು ಕೇಳಿದ. ಅನಿಕೇತ್​ಗೆ ಆ ದೇವಸ್ಥಾನದ ಜಾಡು ಹಿಡಿಯುವುದು ಅಷ್ಟು ಕಷ್ಟವೇನಾಗಲಿಲ್ಲ. ಯಾಕೆಂದರೆ ಅದು ಅಲ್ಲಿನ ಪ್ರಖ್ಯಾತ ದೇವಸ್ಥಾನವಾಗಿತ್ತು. ದುರದೃಷ್ಟವೆಂದರೆ ಅದು ಆಂಧ್ರಪದೇಶದ ಗುಡಿಪಲ್ಲಿ ಮತ್ತು ತಮಿಳುನಾಡಿನ ವೇಪನಪಲ್ಲಿ ಎಂಬ ಗ್ರಾಮಗಳ ನಡುವಿನ, ಆ ಭಾಗದ ದೊಡ್ಡ ಅರಣ್ಯ ಪ್ರದೇಶದ ನಡುವಿನಲ್ಲಿತ್ತು.

ಅನಿಕೇತ್ ಧೈರ್ಯಶಾಲಿ ಹೌದು, ಆದರೆ ಏಕಾಂಗಿಯಾಗಿ ಕಾಡು ಪ್ರವೇಶ ಮಾಡಿ ದೇವಸ್ಥಾನವನ್ನು ಕಂಡು ಹಿಡಿಯುವಷ್ಟು ಧೈರ್ಯ ಅವನಲ್ಲಿರಲಿಲ್ಲ. ಅಲ್ಲದೇ ಅಲ್ಲಿಗೆ ಒಬ್ಬನೇ ಹೋಗಿದ್ದ. ಜೊತೆಗೆ ಯಾರೂ ಇರಲಿಲ್ಲ. ಸ್ವಲ್ಪ ಸಮಯ ಯೋಚಿಸಿದ. ತಡ ಮಾಡಿದರೆ ತನ್ನ ಎಲ್ಲ ಯೋಜನೆಗಳು ಹಾಳಾಗಬಹುದು ಎನಿಸಿತು. ಸ್ಥಳೀಯರಿಗೆ ಒಂದಿಷ್ಟು ಹಣ ಕೊಟ್ಟು ಜೊತೆಗೆ ಕರೆದುಕೊಂಡು ಹೋಗುವುದೆಂದು ತೀರ್ವನಿಸಿದ. ಆದರೆ ಅಲ್ಲಿನ ಜನ ಆ ಕಾಡಿನ ಬಗ್ಗೆ ಚಿಕ್ಕಂದಿನಿಂದ ಅನೇಕ ಭಯಾನಕ ಕಥೆಗಳನ್ನು ಕೇಳಿದ್ದರು. ಎಷ್ಟೇ ಹಣ ಕೊಡುತ್ತೇನೆಂದರೂ ಕಾಡಿಗೆ ಹೋಗಲು ಮನಸ್ಸು ಮಾಡಲಿಲ್ಲ. ಕೊನೆಗೆ ಒಂದಿಬ್ಬರು ಯುವಕರು ತಾವು ಕೂಡ ಇಂತಹ ಸಾಹಸಿ ಕೆಲಸಗಳ ಅನುಭವ ಪಡೆಯಬೇಕೆಂಬ ಉದ್ದೇಶದಿಂದ ಅನಿಕೇತ್ ಜೊತೆಗೆ ಕಾಡಿಗೆ ಹೋಗಲು ಒಪ್ಪಿಕೊಂಡರು. ತಮಗೆ ಹಣ ಕೊಡುವ ಅವಶ್ಯಕತೆಯೂ ಇಲ್ಲವೆಂದರು. ರಾತ್ರಿಯ ಊಟಕ್ಕೆ ಹಾಗೂ ಆಯಾಸವಾದರೆ ಸ್ವಲ್ಪ ಸಮಯ ನಿದ್ರಿಸಲು ಬೇಕಾದ ಎಲ್ಲ ವಸ್ತುಗಳನ್ನು ಸಿದ್ಧಪಡಿಸಿಕೊಂಡು ಕಾಡಿನತ್ತ ಹೊರಟರು.

ಕಾಡಿನಲ್ಲಿನ ಕಿತ್ತುಹೋದ ರಸ್ತೆಯಲ್ಲಿ ನಡೆಯುತ್ತ ಪೇಂಟಿಂಗ್​ನಲ್ಲಿನ ದೇವಸ್ಥಾನ ತಲುಪುವಷ್ಟರಲ್ಲಿ ರಾತ್ರಿ ಸುಮಾರು 10 ಗಂಟೆಯಾಗಿತ್ತು. ಹೋದವರೇ ತಾವು ತಂದಿದ್ದ ಊಟ ಸೇವಿಸಿ ಅನಿಕೇತ್​ನ ಸೂಚನೆಯ ಮೇರೆಗೆ ಒಂದಷ್ಟು ಕೆಲಸಗಳನ್ನು ಮಾಡಿ ಮುಗಿಸಿದರು. ಸ್ವಲ್ಪ ಸಮಯದ ನಂತರ ಅನಿಕೇತ್ ಪೇಂಟಿಂಗ್​ನಲ್ಲಿನ ವ್ಯಕ್ತಿ ಹಿಡಿದಂತೆಯೇ ಕೈಯಲ್ಲಿ ಒಂದು ಕನ್ನಡಿಯನ್ನು ಹಿಡಿದು ಆ ವ್ಯಕ್ತಿ ನಿಂತ ಸ್ಥಳದಲ್ಲಿಯೇ ಹೋಗಿ ನಿಂತ. ತನ್ನೊಂದಿಗೆ ಬಂದಿದ್ದ ಯುವಕರಲ್ಲೊಬ್ಬನಿಗೆ ದೇವಸ್ಥಾನದ ಒಳಗೆ ಹೋಗಿ ಪ್ರತಿಮೆಯ ಮುಂದಿಟ್ಟಿದ್ದ ದೀಪವನ್ನು ಹಚ್ಚಲು ಸೂಚಿಸಿದ. ಯುವಕ ಹೋಗಿ ದೀಪವನ್ನು ಹಚ್ಚಿದ. ತಕ್ಷಣವೇ ದೀಪದ ಬೆಳಕು ಕನ್ನಡಿಯ ಮೇಲೆ ಬೀಳುವ ಹಾಗೆ ಕನ್ನಡಿಯನ್ನು ಸರಿಪಡಿಸಿಕೊಂಡು, ಪೇಂಟಿಂಗ್​ನಲ್ಲಿನ ವ್ಯಕ್ತಿ ನಿಂತ ದಿಕ್ಕಿಗೆ ತಿರುಗಿ ನಿಂತ. ದೀಪದ ಬೆಳಕು ಕನ್ನಡಿಯನ್ನು ತಾಕಿ ಅದರ ಪ್ರತಿಬಿಂಬ ದೇವಸ್ಥಾನದ ಎಡಬದಿಯ ಒಂದು ಕಲ್ಲುಬಂಡೆಯ ಮೇಲೆ ಬಿತ್ತು. ಆ ಕಲ್ಲುಬಂಡೆಯು ದೇವಸ್ಥಾನದಿಂದ ಸರಿಸುಮಾರು 60-65 ಮೀಟರ್ ದೂರವಿತ್ತು. ಕಲ್ಲುಬಂಡೆಯು ಮೂರ್ನಾಲ್ಕು ಮಂದಿಯ ಸಹಾಯದಿಂದ ಸರಿಸುವಷ್ಟು ದೊಡ್ಡ ಗಾತ್ರದ್ದಾಗಿತ್ತು. ಅನಿಕೇತ್ ಆ ಇಬ್ಬರು ಯುವಕರ ಸಹಾಯದಿಂದ ಆ ಕಲ್ಲುಬಂಡೆಯನ್ನು ಸರಿಸಿ ನೋಡಿದರೆ ಒಂದು ಸಣ್ಣ ಗಾತ್ರದ ರಂಧ್ರ ಕಣ್ಣಿಗೆ ಬಿತ್ತು. ಮೊದಲಿಗೆ ಯಾವುದೋ ಪ್ರಾಣಿಗಳು ರಂಧ್ರ ಮಾಡಿರಬಹುದೆಂದು ಯೋಚಿಸಿ ಆ ಬೆಳಕಿನ ಅರ್ಥ ಇನ್ನೇನಾಗಿರಬಹುದು ಎಂದು ಚಿಂತಿಸುತ್ತಾ ಹಿಂದೆ ಸರಿದು ಕುಳಿತರು. ಸ್ವಲ್ಪ ಸಮಯದ ನಂತರ ಏನೋ ಕಂಡುಕೊಂಡವನಂತೆ ಅನಿಕೇತ್ ಯುವಕನಿಗೆ ಒಂದು ಕೋಲನ್ನು ತರಲು ಹೇಳಿದ. ಕೋಲಿನ ಸಹಾಯದಿಂದ ಆ ರಂಧ್ರವನ್ನು ಕೊರೆದ. ಅಚ್ಚರಿಯೆಂಬಂತೆ ಆ ರಂಧ್ರ ಕೋಲಿನಿಂದ ಕೆದಕುತ್ತಲೇ ಒಂದು ದೊಡ್ಡ ರಂಧ್ರವಾಗಿ ಮಾರ್ಪಡುತ್ತಾ ಹೋಯಿತು. ಇನ್ನೂ ಸ್ವಲ್ಪ ಸಮಯ ಅದೇ ರೀತಿ ಅಗೆಯುತ್ತಾ ಹೋದಂತೆ ಆ ರಂಧ್ರವು ಒಂದು ಸುರಂಗ ಮಾರ್ಗಕ್ಕೆ ದಾರಿಯಾಗಿ ತೆರೆದುಕೊಂಡಿತು. ಕೈಯಲ್ಲಿ ಟಾರ್ಚ್ ಆನ್ ಮಾಡಿಕೊಂಡು ರಂಧ್ರದ ಮೂಲಕ ಸುರಂಗ ಪ್ರವೇಶಿಸಿದ ಆ ಮೂವರಿಗೆ ಹುಬ್ಬೇರಿಸುವಂತಹ ದೃಶ್ಯಗಳು ಕಾಣಿಸಿದವು. ಆ ಸುರಂಗದಲ್ಲಿ ಹಿಂದೆ ಆಳ್ವಿಕೆ ಮಾಡಿದಂತಹ ಗಂಗರು, ಕದಂಬರ ಕಾಲದ ಚಿನ್ನದ ನಾಣ್ಯಗಳು, ರಾಜರಿಗೆ ಸಂಬಂಧಿಸಿದ ಅನೇಕ ರಹಸ್ಯ ಪತ್ರಗಳು, ಜೊತೆಗೆ ಇದೇ ತರಹದ ನಿಧಿ ಸಂಪತ್ತು ಹೊಂದಿರುವ ಒಂದಷ್ಟು ಪ್ರದೇಶಗಳ ನಕ್ಷೆಗಳು ಇದ್ದವು. ಆ ಇಬ್ಬರೂ ಯುವಕರು ಮೂಕವಿಸ್ಮಿತರಾಗಿ ತಾವು ಕಂಡದ್ದು ನಿಜವೇ ಅಥವಾ ಕನಸೇ ಅಂತ ಯೋಚಿಸುತ್ತಿದ್ದರೆ, ಅನಿಕೇತ್ ತನ್ನ ಊಹೆಗೂ ಮೀರಿದ ಸಂಪತ್ತು ಹಾಗೂ ಮಾಹಿತಿಯನ್ನು ಕಂಡು ನಿಬ್ಬೆರಗಾದ. ಅಲ್ಲಿ ಸಿಕ್ಕ ನಿಧಿಯ ಇಂದಿನ ಮಾರುಕಟ್ಟೆ ಮೌಲ್ಯವು ನೂರಾರು ಕೋಟಿ ರೂ.ಗಳಷ್ಟಿರಬಹುದು.

ಕಂಡ ನಿಧಿಯ ಬಗ್ಗೆ ಸ್ಥಳೀಯ ಆಡಳಿತಕ್ಕೆ ಹಾಗೂ ಸಂಗಮೇಶ್​ರ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ತಿಳಿಸೋಣವೆಂದು ಆ ಮೂವರೂ ಹೊರಗೆ ಬಂದರು. ದೇವಸ್ಥಾನದ ಸ್ವಲ್ಪ ದೂರದ ಗಾಢವಾದ ಕಾಡಿನ ಕತ್ತಲೆಯಿಂದ ‘‘ಅಲ್ಲೇ ನಿಲ್ಲಿ..’’ ಎಂಬ ಶಬ್ದ ಕೇಳಿಸಿತು. ಗಾಬರಿಗೊಂಡ ಆ ಮೂವರೂ ಶಬ್ದ ಬಂದ ಕಡೆಗೆ ಟಾರ್ಚ್​ನ ಬೆಳಕನ್ನು ಹಾಯಿಸಿದಾಗ, ಆ ಬೆಳಕಿನಲ್ಲಿ ಕಂಡ ವ್ಯಕ್ತಿಯನ್ನು ನೋಡಿ ಬೆಚ್ಚಿಬಿದ್ದರು. ಅವನನ್ನು ಕಾಣುತ್ತಲೇ ಅನಿಕೇತ್ ‘‘ಸುರೇಶ್... ನೀನೇನು ಇಲ್ಲಿ?’’ ಅಂದ. ಅವನು ಈ ಹಿಂದೆಯೇ ಅನಿಕೇತ್​ಗೆ ಪರಿಚಯವಿದ್ದ. ಸಂಗಮೇಶ್​ರ ಸಾಕುಮಗಳಾದ ರಾಧಾಳ ಪ್ರಿಯಕರ. ಸಂಗಮೇಶ್​ರ ಪೂರ್ವಜರು ಈ ಹಿಂದೆ ರಾಜರ ಆಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಜರು ಈ ರೀತಿ ಗುಪ್ತವಾಗಿ ಅಡಗಿಸಿಟ್ಟ ನಿಧಿಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದರು. ಆ ಮಾಹಿತಿಯು ತಲೆಮಾರಿನಿಂದ ತಲೆಮಾರಿಗೆ ರವಾನೆಯಾಗಿ, ಕೊನೆಗೆ ಸಂಗಮೇಶ್​ರ ಬಳಿಗೆ ಬಂದು ನಿಂತಿತ್ತು. ಸಂಗಮೇಶ್ ಮದುವೆ ಮಾಡಿಕೊಂಡಿದ್ದರಾದರೂ ಸಂತಾನ ಪಡೆಯುವಷ್ಟರಲ್ಲೇ ಅವರ ಹೆಂಡತಿ ಯಾವುದೋ ಗಂಭೀರ ಕಾಯಿಲೆಯಿಂದ ಮೃತಪಟ್ಟಿದ್ದರು. ಮಡದಿಯ ಮೇಲಿನ ಪ್ರೀತಿಯಿಂದಾಗಿ ಬೇರೆ ಮದುವೆ ಮಾಡಿಕೊಳ್ಳದೆ, ಅನಾಥಾಶ್ರಮದ ಮಗುವನ್ನು ದತ್ತು ಪಡೆದು ತಮ್ಮ ಮಡದಿಯ ಹೆಸರನ್ನಿಟ್ಟು ಸಾಕುತ್ತಿದ್ದರು. ದಿನ ಕಳೆದಂತೆ ಜ್ಞಾನದಲ್ಲೂ, ಬಲದಲ್ಲೂ ಬೆಳೆದ ಸಾಕು ಮಗಳಾದ ರಾಧಾಗೆ ಹಣ, ಐಶ್ವರ್ಯದ ಮೇಲೆ ಒಲವು ಹೆಚ್ಚುತ್ತಾ ಹೋಯಿತು. ಇದನ್ನು ಮನಗಂಡ ಸಂಗಮೇಶ್ ನಿಧಿಯ ಮಾಹಿತಿಯನ್ನು ರಾಧಾಗೆ ತಿಳಿಸಿದರೆ ತನ್ನ ವೈಯಕ್ತಿಕ ಸುಖ ಭೋಗಕ್ಕೆ ಬಳಸಿಕೊಳ್ಳುತ್ತಾಳೆ ಎಂದುಕೊಂಡು ಮಾಹಿತಿಯನ್ನು ಆಕೆಯಿಂದ ಮುಚ್ಚಿಟ್ಟಿದ್ದರು. ಆದರೆ ಕಲಾ ವಿಮರ್ಶಕ ಪ್ರಜ್ವಲ್, ‘‘ಸಂಗಮೇಶ್ ಅವರು ಬಿಡಿಸುವ ಚಿತ್ರಗಳಲ್ಲಿ ಒಂದಲ್ಲ ಒಂದು ಬಗೆಯ ಸಂದೇಶ ಅಥವಾ ಮಾಹಿತಿ ಇದ್ದೇ ಇರುತ್ತೆ...’’ ಎಂದು ಹಲವು ಬಾರಿ ಮಾತನಾಡಿದ್ದನ್ನು ರಾಧಾ ಕೇಳಿಸಿಕೊಂಡಿದ್ದಳು. ಸಂಗಮೇಶ್​ರ ಪೂರ್ವಜರೆಲ್ಲರೂ ರಾಜರ ಸಂಪರ್ಕದಲ್ಲಿದ್ದವರೇ ಎಂಬುದು ಅವಳಿಗೆ ಗೊತ್ತಿತ್ತು. ರಾಜರು ಅಡಗಿಸಿಟ್ಟ ನಿಧಿಯ ಬಗ್ಗೆಯೂ ಸಂಗಮೇಶ್ ತಮ್ಮ ಪೇಂಟಿಂಗ್​ನಲ್ಲಿ ಚಿತ್ರಿಸಿರಬಹುದೆಂದು ಯೋಚಿಸಿದಳು. ಪ್ರತಿದಿನ ತನ್ನ ಪ್ರಿಯಕರ ಸುರೇಶ್​ನೊಂದಿಗೆ ಆಗಾಗ ಗ್ಯಾಲರಿಗೆ ಭೇಟಿ ನೀಡಿ ಪೇಂಟಿಂಗ್​ಗಳನ್ನು ಪರಿಶೀಲಿಸಿ ಪೇಂಟಿಂಗ್​ನಲ್ಲಿನ ಸ್ಥಳಗಳನ್ನು ಪರಿಶೋಧಿಸುತ್ತಿದ್ದಳು. ಆದರೂ ಯಾವುದೇ ನಿಧಿಯ ಮಾಹಿತಿಯನ್ನು ಭೇದಿಸಲು ಆಗಿರಲಿಲ್ಲ. ಕೊನೆಗೆ ಕೋಟ್ಯಂತರ ರೂಪಾಯಿ ಹಣ ನೀಡಲು ಸಿದ್ಧವಿದ್ದ ಸಂಗಮೇಶ್​ರ ಪೇಂಟಿಂಗ್​ನಲ್ಲಿ ಅತಿ ಮುಖ್ಯವಾದ ಮಾಹಿತಿ ಇದೆ ಎಂದು ತಿಳಿದು, ತಾವೇ ಸಂಚು ರೂಪಿಸಿ ಸಂಗಮೇಶ್​ರನ್ನು ಅಪಹರಿಸಿದರು. ಅದೇ ಗ್ಯಾಲರಿಯ ಒಂದು ರಹಸ್ಯ ಕೊಠಡಿಯಲ್ಲಿರಿಸಿದರು. ಪೊಲೀಸರು ಹಾಗೂ ಮೇಧಾವಿ ಡಿಟೆಕ್ಟರ್ ಅನಿಕೇತ್​ನ ಸಹಾಯದಿಂದ ನಿಧಿಯ ಸ್ಥಳ ಪತ್ತೆ ಹಚ್ಚುವುದೆಂದು ಯೋಚಿಸಿ ಈ ಎಲ್ಲ ಕೆಲಸಗಳನ್ನು ಮಾಡಿದ್ದರು.

ಎಲ್ಲವೂ ತಾವು ಅಂದುಕೊಂಡಂತೆ ಆಯಿತೆಂದು ತಿಳಿದ ಅವರಿಗೆ ಊಹಿಸದ ಘಟನೆಯೊಂದು ಎದುರಾಯಿತು. ಅನಿಕೇತ್​ನನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಸುರೇಶ್​ಗೆ ಅದು ಅನಿರೀಕ್ಷಿತ ತಿರುವು. ಈ ಎಲ್ಲ ಕೆಲಸಗಳನ್ನು ಬಹುಶಃ ರಾಧಾ ಮತ್ತು ಆಕೆಯ ಪ್ರಿಯಕರ ಮಾಡುತ್ತಿರಬಹುದೆಂದು ಮೊದಲೇ ಅಂದುಕೊಂಡಿದ್ದ ಅನಿಕೇತ್, ಆ ಸ್ಥಳಕ್ಕೆ ಹೋಗುವುದಕ್ಕಿಂತ ಮುಂಚೆಯೇ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದ. ತಾವು ಈ ರೀತಿಯ ಸ್ಥಿತಿಯನ್ನು ಎದುರಿಸಬಹುದೆಂದು ಭಾವಿಸಿ ಪೊಲೀಸರು ಹಾಗೂ ಫಾರೆಸ್ಟ್ ಗಾರ್ಡ್​ಗಳನ್ನು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿದ್ದುಕೊಂಡು ಗಮನಿಸುವಂತೆ ಕೇಳಿಕೊಂಡಿದ್ದ. ಸುರೇಶ್ ಇವರನ್ನು ಎದುರುಗೊಂಡು ಮೇಲಿನಂತೆ ಸಂಭಾಷಣೆ ಮಾಡುತ್ತಿರುವಾಗಲೇ ಪೊಲೀಸರು ಹಾಗೂ ಫಾರೆಸ್ಟ್ ಗಾರ್ಡ್​ಗಳು ಸುತ್ತುವರಿದು ಅವನನ್ನು ಬಂಧಿಸಿದರು. ಸಂಗಮೇಶ್​ರ ಪ್ರಕರಣ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಈ ಎಲ್ಲ ಘಟನೆಗಳ ಕುರಿತು ಮಾಹಿತಿ ನೀಡಿ ರಾಧಾಳನ್ನು ಬಂಧಿಸುವಂತೆಯೂ, ಸಂಗಮೇಶ್​ರನ್ನು ಅದೇ ಗ್ಯಾಲರಿಯ ರಹಸ್ಯ ಕೊಠಡಿಯಿಂದ ರಕ್ಷಿಸುವಂತೆಯೂ ವಿನಂತಿಸಿದರು.

ಸಂಗಮೇಶ್ರ ಕಲೆಯು ಕೇವಲ ಸೌಂದರ್ಯವಲ್ಲ, ಅದು ಇತಿಹಾಸವನ್ನು ಹುದುಗಿಸಿಕೊಂಡ ಮಹಾನ್ ಮಾಧ್ಯಮ ಎಂದು ತಿಳಿಸಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದರು.