ವಾಣಿಜ್ಯ

ಬ್ಯಾಂಕುಗಳಲ್ಲಿ ಠೇವಣಿ, ಉಳಿತಾಯ ಯೋಜನೆಗಳ ಭವಿಷ್ಯವೇನು?

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಚಲನವಲನಗಳನ್ನು ಅವಲೋಕಿಸುವಾಗ ಸಾರ್ವಜನಿಕರಲ್ಲಿ ತಲ್ಲಣ ಮೂಡಿಸುವ ಹಲವಾರು ಸಂದರ್ಭಗಳು ಗೋಚರಿಸತೊಡಗಿವೆ. ಅದರಲ್ಲೂ ಕೆಲವೇ ವಾರಗಳ ಹಿಂದೆ ನಡೆದ ಯೆಸ್ ಬ್ಯಾಂಕ್ ಘಟನೆ, ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣ, ಗುರುರಾಘವೇಂದ್ರ ಸಹಕಾರ ಕೋ-ಆಪರೇಟಿವ್ ಬ್ಯಾಂಕ್ ಬಿಕ್ಕಟ್ಟು ಹಾಗೂ ಹಲವಾರು ಹಗರಣಗಳು ದಿಗ್ಭ್ರಮೆ ಮೂಡಿಸಿವೆ.

ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರ ಸರ್ಕಾರದ ಕಾಯಿದೆ ಪ್ರಕಾರಕ್ಕೆ ಪೂರಕವಾಗಿ ಮುಂದುವರಿಸಬೇಕಾಗುತ್ತದೆ. ಅದು ಹಣಕಾಸು ಸಚಿವಾಲಯ ಕೇಂದ್ರ ಸರ್ಕಾರದ ಸರಹದ್ದಿನೊಳಗೆ ಭಾರತೀಯ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆಯೊಂದಿಗೆ ಉಳಿದ ಹಲವಾರು ರೀತಿಯ ಆಡಳಿತ ಮಂಡಳಿಯ ಹತೋಟಿಯಲ್ಲಿ audit statutory, audits Internal inspections, RBI inspection, surprise inspection, periodical inspection, vigilance and CBI interference ಮುಂತಾದ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಬ್ಯಾಂಕುಗಳಲ್ಲಿ ಪಾಲಿಸುವುದು ಸ್ವಾಭಾವಿಕ.

ಅದರೊಂದಿಗೆ ಆಡಳಿತ ಹಿತದೃಷ್ಟಿಯಲ್ಲಿ ಆಡಳಿತ ಮಂಡಳಿಯವರು ಸಂಸ್ಥೆಯನ್ನು ಹತೋಟಿಯಲ್ಲಿ ಇಡುವ ಉದ್ದೇಶದಿಂದ ಶಾಖೆ ಸರ್ಕಲ್ ಆಫೀಸು, ರೀಜನಲ್ ಆಫೀಸು, ಜೋನಲ್ ಆಫೀಸು, ಹೆಡ್​ಆಫೀಸ್ ಮುಂತಾದ ವಿವಿಧ ವಲಯಗಳನ್ನು ಸ್ಥಾಪಿಸಿ ಮುಂದುವರಿಸಿಕೊಂಡು ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಸಹಾಯದಿಂದ ಸಂಸ್ಥೆಯ ಉತ್ತಮ ಆಡಳಿತದ ಕಾರ್ಯರೂಪಕ್ಕಾಗಿ ಅದರ ಕೇಂದ್ರ ಆಡಳಿತ ನಿರ್ದೇಶಕರ ಮಂಡಳಿ ಅದನ್ನು ಬೇರೆ ಬೇರೆ ಆಡಳಿತ ನಿರ್ದೇಶಕರ ಸಹಾಯದಿಂದ ಪರಿಶೀಲಿಸುತ್ತದೆ. ನಿರ್ದೇಶಕ ಮಂಡಳಿಯಲ್ಲೂ ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕುಗಳು ನೇಮಿಸಿದ ಬೇರೆ ಬೇರೆ ನಿರ್ದೇಶಕರಿರುತ್ತಾರೆ. ಪ್ರಮುಖವಾಗಿ ಬ್ಯಾಂಕಿನ ಚೇರ್ಮನ್ ವ್ಯವಸ್ಥಾಪಕ ನಿರ್ದೇಶಕ, ಕಾರ್ಯನಿರ್ವಾಹಕ ನಿರ್ದೇಶಕರನ್ನು ಕೇಂದ್ರ ಸರ್ಕಾರವೇ ನೇಮಿಸುತ್ತದೆ. ಅದರೊಂದಿಗೆ ಸಾರ್ವಜನಿಕ ಬ್ಯಾಂಕುಗಳಲ್ಲಿ ಅಧಿಕಾರಿಗಳ ಹಾಗೂ ಕಾರ್ವಿುಕ ಪ್ರತಿನಿಧಿಗಳ ನೇಮಕಾತಿಯನ್ನು ನಿಲ್ಲಿಸಿರುವುದು ಬೇಸರದ ವಿಚಾರವಾಗಿದೆ. ಸಂಸ್ಥೆಯ ಹಿತದೃಷ್ಟಿಯನ್ನು ಕಾಪಾಡಲು ಇಂತಹ ನಿರ್ದೇಶಕರ ಪ್ರಾಮಾಣಿಕ ಕಾರ್ಯನಿರ್ವಹಣೆ ಬಹಳ ಮುಖ್ಯ.

ಈ ಎಲ್ಲ ಬ್ಯಾಂಕಿಂಗ್ ವ್ಯವಹಾರದ ನಡವಳಿಕೆಗಳು ಕೇಂದ್ರ ಸರ್ಕಾರದ ‘ಬ್ಯಾಂಕಿಂಗ್ ರೆಗ್ಯುಲೇಶನ್ 1949 ಕಾಯಿದೆ’ಯ ಪ್ರಕಾರ ನಡೆಯಬೇಕಾಗುತ್ತದೆ. ಯಾವುದೇ ರೀತಿಯ ಕಾಯಿದೆ ನಿಯಮಗಳ ಬಾಹಿರವಾಗಿ ಕಾನೂನು ಉಲ್ಲಂಘಿಸಿ ವ್ಯವಹರಿಸಿದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು ಶಿಕ್ಷೆಗೆ ಒಳಪಡಬೇಕಾಗುತ್ತದೆ. ಅದರಂತೆಯೆ ಖಾಸಗಿ ಹಣಕಾಸು ಸಂಸ್ಥೆಗಳು ಕೂಡ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕು ಕಾಯಿದೆಗಳ ಅಧಿನಿಯಮದಲ್ಲಿಯೇ ವ್ಯವಹರಿಸಬೇಕಾಗುತ್ತದೆ. ಆದರೆ ಖಾಸಗಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಭಾರತಿಯ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಿಕೆಯಡಿ ಆಡಳಿತ ಮಂಡಳಿಯ ಮೇಲಧಿಕಾರಿಗಳ ಸರ್ವಾಧಿಕಾರಿ ಧೊರಣೆಯಿಂದಾಗಿ ಕಾನೂನು ಉಲ್ಲಂಘಿಸಿ ದಾರಿ ತಪ್ಪಿದ ಅನೇಕ ಸಂದರ್ಭಗಳಿವೆ. ಇದಕ್ಕೆ ಇತ್ತೀಚಿನ ಹಲವು ಬ್ಯಾಂಕುಗಳ ಹಗರಣಗಳೇ ನಿದರ್ಶನಗಳು. ಇಂತಹ ಹಗರಣಗಳಿಂದಾಗಿ ಹೆಚ್ಚಾಗಿ ಹಿರಿಯ ನಾಗರಿಕರು, ಮಹಿಳೆಯರು, ಸಾಮಾನ್ಯ ಠೇವಣಿದಾರರು ಬಹಳಷ್ಟು ಮಾನಸಿಕ ಒತ್ತಡಕ್ಕೊಳಗಾಗುತ್ತಾರೆ. ಜೀವನಪೂರ್ತಿ ದುಡಿದು ಸಂಪಾದಿಸಿ ಕೂಡಿಟ್ಟ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟಲ್ಲಿ ಆಕಸ್ಮಿಕವಾಗಿ ಬ್ಯಾಂಕು ದಿವಾಳಿಯಾದರೆ ಅವರ ಗತಿ ಏನು?

ಕೇಂದ್ರ ಸರ್ಕಾರ ಇತ್ತೀಚೆಗೆ ರೂ.1 ಲಕ್ಷದಿಂದ 5 ಲಕ್ಷದವರೆಗೆ ಠೇವಣಿದಾರರಿಗೆ ಗ್ಯಾರೆಂಟಿಯನ್ನು ಹೆಚ್ಚಿಸಿರುವುದು ಸಂತೋಷದ ವಿಷಯ. ಆದರೆ ಸಾಮಾನ್ಯವಾಗಿ ಠೇವಣಿದಾರರ ಹಿತದೃಷ್ಟಿಯನ್ನು ಕಾಪಾಡಲು ಬ್ಯಾಂಕುಗಳ ದೃಢತೆ ಮತ್ತು ಗುಣಮಟ್ಟ ಮುಖ್ಯ. ಆದರೆ ಕೆಲ ಮಾಧ್ಯಮಗಳು ಠೇವಣಿದಾರರು ಗಲಿಬಿಲಿಯಾಗುವಂತೆ ಮಾಡುತ್ತವೆ. ಟಿವಿ ಮಾಧ್ಯಮದಲ್ಲಿ ಕೆಲ ದಿನಗಳ ಹಿಂದೆ ಬಿತ್ತರಿಸಿದ ಪ್ರಕಾರ ಬ್ಯಾಂಕಿನ ಷೇರು ಮಾರ್ಕೆಟ್ ಕ್ಯಾಪಿಟಲೈಸೇಷನ್​ನೊಂದಿಗೆ ಬ್ಯಾಂಕಿನ ಠೇವಣೆಯೊಂದಿಗೆ ವಿಭಜಿಸಿ ಎಮ್ೇಪ ಮಾದರಿಯಲ್ಲಿ ಬ್ಯಾಂಕಿನ ದೃಢತೆಯನ್ನು ತಿಳಿಯಲಾಗುತ್ತದೆ ಎಂದಿದ್ದರು.

ಆದರೆ ರಿಸರ್ವ್ ಬ್ಯಾಂಕಿನ ಮಾರ್ಗದರ್ಶನ ಪ್ರಕಾರ ಬ್ಯಾಂಕಿನ ಸದೃಢತೆಯನ್ನು ಅಂದಾಜು ಮಾಡಲು-ಸಂಗ್ರಹಿಸುವ ಠೇವಣಿ, ಅದರ ಆಸ್ತಿ, ಸ್ವತ್ತಿನ ಗುಣಮಟ್ಟ ಹಾಗೂ ಅದರ ಬೆಲೆ ಸಾಲಗಳ ಗುಣಮಟ್ಟ, ನಿಖರವಾದ ಸುಸ್ತಿ ಸಾಲಗಳ ವಿವರ, ನಿಖರವಾದ ಲಾಭಾಂಶ, ಆಡಳಿತ ಮಂಡಳಿಯ ಗುಣಮಟ್ಟ ಮುಂತಾದ ಹಲವಾರು ಮಾನದಂಡಗಳಿವೆ. ಈ ಎಲ್ಲ ಮಾನದಂಡಗಳು ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆಯಲ್ಲಿ ಮುಂದುವರಿಯಬೇಕಾಗುತ್ತದೆ. ಆದರೆ ಕೆಲವೊಮ್ಮೆ ಖಾಸಗಿ ಬ್ಯಾಂಕುಗಳಲ್ಲಿ ಇಂತಹ ಮಾನದಂಡಗಳನ್ನು ಗಾಳಿಗೆ ತೂರಿ ಕೆಲವು ನಿರ್ದೇಶಕ ಮಂಡಳಿ ಹಾಗೂ ಮೇಲಧಿಕಾರಿಗಳು ತಮ್ಮ ಲಾಭಕ್ಕಾಗಿ ಬ್ಯಾಂಕಿನ ಮತ್ತು ಗ್ರಾಹಕರ ಹಿತದೃಷ್ಟಿಯನ್ನು ಬದಿಗೊತ್ತಿ ಮೋಸ ಮಾಡಲು ಹೊರಟಲ್ಲಿ ಆ ಸಂಸ್ಥೆಯು ಅಸ್ತಿತ್ವವನ್ನು ಕಳೆದುಕೊಳ್ಳುವ ಸಂದರ್ಭ ಬರುತ್ತದೆ. ಈ ಸಂದರ್ಭದಲ್ಲಿ ಆರ್​ಬಿಐ ಜಾಗರೂಕತೆ ಪರಿಶೀಲನಾ ಲೆಕ್ಕಪ್ರತಿಶೋಧಕರು ಯಾತಕ್ಕಾಗಿ ಮೂಕಸಾಕ್ಷಿಯಾಗಿ ಸುಮ್ಮನಿರುತ್ತಾರೆಂಬ ಪ್ರಶ್ನೆ ಉದ್ಭವಿಸುತ್ತದೆ.

ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಟ್ಟವರು ಚಿಂತಿತರಾಗಿದ್ದಾರೆ. ಆದರೆ ಹಣವನ್ನು ಮನೆಯಲ್ಲಿ ಇಟ್ಟುಕೊಂಡರೂ ಕೆಲವೊಮ್ಮೆ ಗಾಬರಿಪಡುತ್ತಾರೆ. ಷೇರು ಮಾರ್ಕೆಟಲ್ಲಿ ಹೂಡಿದವರು ಮಾತ್ರವಲ್ಲ ರಿಯಲ್ ಎಸ್ಟೇಟ್​ನಲ್ಲಿ ಹಾಕಿದವರೂ ಯೋಚನೆ ಮಾಡುವಂತಾಗಿದೆ. ಆದರೆ ಸಾಲ ತೆಗೆದುಕೊಂಡವರು ಮಾತ್ರ ಈ ಪರಿಸ್ಥಿತಿಯಲ್ಲಿ ನಿಟ್ಟುಸಿರು ಬಿಡುತ್ತಾರೆ.

ಹಲವಾರು ದಶಕಗಳಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು ದೇಶದ ಸರ್ವತೋಮುಖ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿವೆ. ಖಾಸಗಿ ಬ್ಯಾಂಕುಗಳಂತೆ ಕೇವಲ ಲಾಭವನ್ನು ಹೆಚ್ಚಿಸುವ ದೃಷ್ಟಿಕೋನವನ್ನಿಟ್ಟುಕೊಂಡಿಲ್ಲ. ಆದರೂ ಕೆಲವು ಬುದ್ಧಿಜೀವಿಗಳು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಶಿಫಾರಸ್ಸು ಮಾಡಿರುವುದು ಬೇಸರದ ಸಂಗತಿ.

ಜಾಗತಿಕವಾಗಿ 2000 ಹಾಗೂ 2008ರ ಸುಮಾರಿಗೆ ಆದ ಆರ್ಥಿಕ ಹಿಂಜರಿತಕ್ಕೆ ಹಲವಾರು ಮುಂದುವರಿದ ದೇಶಗಳು ತತ್ತರಿಸುವಾಗ ಭಾರತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ರಿಸರ್ವ್ ಬ್ಯಾಂಕು ಇಡೀ ಜಗತ್ತಿಗೆ ಸವಾಲಾಗಿ ಅದನ್ನು ಎದುರಿಸುವ ಶಕ್ತಿ ಪ್ರದರ್ಶಿಸಿದವು. ಆದರೆ ಇಂದಿನ ದಿನಗಳಲ್ಲಿ ಭಾರತ ಮಾತ್ರವಲ್ಲ ಇತರೆ ಹಲವಾರು ದೇಶಗಳು ಆರ್ಥಿಕ ಹಿನ್ನಡೆಯನ್ನು ಎದುರಿಸುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ, ಕೆಲವು ಖಾಸಗಿ ಬ್ಯಾಂಕುಗಳ ದಿವಾಳಿತನದಲ್ಲೂ, ಸರ್ಕಾರಿ ಬ್ಯಾಂಕುಗಳು ಠೇವಣಿದಾರರ ಹಣವನ್ನು ಕಾಪಾಡಲು ಸರ್ಕಾರದ ಹಾಗೂ ರಿಸರ್ವ್ ಬ್ಯಾಂಕಿನ ಸೂಚನೆಯಂತೆ ಆಪತ್ಬಾಂಧವರಾಗಿ ಮುಂದೆ ಬರುತ್ತಿರುವುದು ಶ್ಲಾಘನೀಯ. ಆದರೆ ಆರೋಗ್ಯವಂತ ಖಾಸಗಿ ಬ್ಯಾಂಕಿನೊಂದಿಗೆ ಅಂತಹ ದಿವಾಳಿತನದ ಬ್ಯಾಂಕನ್ನು ವಿಲೀನ ಮಾಡುವುದಿಲ್ಲವೇಕೆ? ಖಂಡಿತವಾಗಿಯೂ ಠೇವಣಿದಾರರ ಹಿತದೃಷ್ಟಿಯನ್ನು ಕಾಪಾಡುವುದು ಸರ್ಕಾರದ ಕೆಲಸ. ಆದರೆ ಹೆಚ್ಚಿನ ಬಡ್ಡಿದರ ನೀಡುವರೆಂಬ ಕೆಲವು ಖಾಸಗಿ ಬ್ಯಾಂಕು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಅನಿಶ್ಚಿತ ಪ್ರೇರೇಪಣೆಗೊಳಪಟ್ಟು ಮೋಸ ಹೋಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಮುಂದಾಗದಿದ್ದಲ್ಲಿ ಇನ್ನಷ್ಟು ಅನಾಹುತಗಳು ಉದ್ಭವಿಸುತ್ತವೆ. ಇಂಥವರು ಲಪಟಾಯಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶೀಘ್ರ ನ್ಯಾಯ ದೊರಕಿಸುವ ಕೋರ್ಟುಗಳ ಅವಶ್ಯಕತೆ ಇದೆ. ಬ್ಯಾಂಕಿನ ದಿವಾಳಿತನಕ್ಕೆ ಜವಾಬ್ದಾರರನ್ನು ಶಿಕ್ಷಿಸುವುದು ಮಾತ್ರವಲ್ಲ ಅಂಥವರನ್ನು ಸಮಾಜವೇ ದೂರವಿಡುವಂತಾಗಬೇಕು.

ಬ್ಯಾಂಕಿಂಗ್ ಕ್ಷೇತ್ರವು ದೇಶದ ಆರ್ಥಿಕತೆಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ದಿಟ್ಟ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ದೇಶದ ಜನರಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ನಂಬಿಕೆ ಹೆಚ್ಚುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಣಕಾಸು ಸಂಸ್ಥೆಗಳ ಮೇಲಿನ ನಂಬಿಕೆ ದಿನೇದಿನೆ ಕುಸಿಯುವುದರಲ್ಲಿ ಅನುಮಾನವಿಲ್ಲ. ಸಾರ್ವಜನಿಕರು ಕೂಡ ಕೇವಲ ಹೆಚ್ಚಿನ ಬಡ್ಡಿದರವನ್ನು ನೋಡಿ ಠೇವಣಿ ಇಡುವುದರ ಬದಲು ಠೇವಣಿಯ ಭದ್ರತೆಯನ್ನು ಕಾಪಾಡುವ ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಪ್ರಬಲ ಬುನಾದಿಯಲ್ಲಿರುವ ಕೆಲವು ಖಾಸಗಿ ಬ್ಯಾಂಕಿನ ದೃಢತೆಯನ್ನು ಖಚಿತಪಡಿಸಿಕೊಂಡು ಠೇವಣಿ ಇಟ್ಟಲ್ಲಿ ಯಾವುದೇ ರೀತಿಯ ಗಾಬರಿ ಪಡಬೇಕಾದ ಅಗತ್ಯವಿಲ್ಲ.