ಲಂಡನ್: ಮೇಡ್ ಇನ್ ಇಂಡಿಯಾ ಉತ್ಪನ್ನ ಒಂದು ಈಗ ಜಗತ್ತಿನ ಗಮನಸೆಳೆದಿದೆ. ಫಿಟ್ ಇಂಡಿಯಾ ಕಾನ್ಸೆಪ್ಟ್ ನ ಪ್ರೇರಣೆಯೋ ಎಂಬಂತೆ ಇರುವ ಫಿಟ್ ಇಂಗ್ಲೆಂಡ್ಗೆ ಭಾರತದ ಹೀರೋ ಸೈಕಲ್ ಪಾಲುದಾರಿಕೆ! ಇಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಸುದ್ದಿ ಇದು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಟ್ವೀಟ್ ಇದಕ್ಕೆ ಕಾರಣ.
ಅವರು ನಾಟಿಂಗ್ಹ್ಯಾಂನಲ್ಲಿ ಹೀರೋ ವಿಕಿಂಗ್ ಪ್ರೋ ಬೈಕ್ ಸವಾರಿ ಮಾಡುತ್ತ ಸರ್ಕಾರದ ಕೋವಿಡ್19 ವಿರುದ್ಧ ಸಮರಕ್ಕೆ ಪೂರಕವಾಗಿ ಆ್ಯಂಟಿ ಒಬೆಸಿಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಅದರ ವಿಡಿಯೋ ಮತ್ತು ಫೋಟೋವನ್ನು ಅವರು ಟ್ವಿಟರ್ ನಲ್ಲಿ ಮಂಗಳವಾರ ಅಪ್ಲೋಡ್ ಮಾಡಿದ್ದಾರೆ. ಈ ಅಭಿಯಾನವು 2 ಶತಕೋಟಿ ಪೌಂಡ್ ಮೌಲ್ಯದ್ದಾಗಿದೆ. ಸೈಕ್ಲಿಂಗ್ಗೆ ಉತ್ತೇಜನ ನೀಡುವುದಕ್ಕಾಗಿ ಪ್ರತ್ಯೇಕ ಸೈಕ್ಲಿಂಗ್ ಪಥವನ್ನೂ ನಿರ್ಮಿಸುವುದಾಗಿ ಅವರು ಘೋಷಿಸಿದ್ದಾರೆ.
ಹೀರೋ ವಿಕಿಂಗ್ ಪ್ರೋ ಬೈಕ್ ಇನ್ಸಿಂಕ್ ಬ್ರ್ಯಾಂಡ್ನಲ್ಲಿ ಅಲ್ಲಿ ಮಾರಾಟವಾಗಿತ್ತಿದೆ. ಈ ಬ್ರ್ಯಾಂಡ್ನ ಮಾಲೀಕತ್ವ ಭಾರತದ ಹೀರೋ ಮೋಟಾರ್ಸ್ ಕಂಪನಿಯದ್ದು. ಇದರ ವಿನ್ಯಾಸ ಮ್ಯಾಂಚೆಸ್ಟರ್ನಲ್ಲಾಗಿದ್ದು, ಭಾರತದ ಹೀರೋ ಸೈಕಲ್ಸ್ ಇದನ್ನು ಉತ್ಪಾದಿಸುತ್ತಿದೆ. ಹೀರೋ ಸೈಕಲ್ಸ್ ಕಂಪನಿಯು ವಿಕಿಂಗ್, ರಿಡ್ಡಿಕ್, ರಿಡಲೆ ಮುಂತಾದ ಬ್ರಾಂಡ್ಗಳನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದು, ಅವುಗಳನ್ನು ಮರುವಿನ್ಯಾಸದೊಂದಿಗೆ ಇನ್ಸಿಂಕ್ ಬ್ರ್ಯಾಂಡ್ನಲ್ಲಿ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: ಅಂತಿಮ ವರ್ಷದ ಪದವಿ ಪರೀಕ್ಷೆ ಬಗ್ಗೆ ಸುಪ್ರೀಂ ಕೋರ್ಟ್ಗೆ ಯುಜಿಸಿ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಏನಿದೆ?
ವಿಕಿಂಗ್ ಬೈಕ್ಗಳ ಪೈಕಿ ಇನ್ಸಿಂಗ್ ಸೈಕಲನ್ನು ಬ್ರಿಟನ್ ಪ್ರಧಾನಿ ತುಂಬಾ ಮೆಚ್ಚಿಕೊಂಡಿದ್ದಾರೆ. ಸೈಕ್ಲಿಂಗ್ ಗೆ ಇದು ಬೆಸ್ಟ್ ಎಂಬ ಪ್ರಶಂಸೆ ಸಿಕ್ಕಿರುವುದು ಈ ಬ್ರ್ಯಾಂಡ್ ಮಟ್ಟಿಗೆ ಮಹತ್ವದ ಮೈಲಿಗಲ್ಲು ಎಂದು ಹೀರೋ ಮೋಟಾರ್ಸ್ ಕಂಪನಿಯ ಸಿಎಂಡಿ ಪಂಕಜ್ ಮುಂಜಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)