ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: 3ನೇ ದಿನವೂ ಕುಸಿದ ಸೆನ್ಸೆಕ್ಸ್, ನಿಫ್ಟಿ...ಕರಗಿತು ಹೂಡಿಕೆದಾರರ 10 ಲಕ್ಷ ಕೋಟಿ ಸಂಪತ್ತು! Share Market
- ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಸಾರಿರುವ ಯುದ್ಧದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕದನ ಕಾರ್ಮೋಡ
- ಜಾಗತಿಕ ಹಾಗೂ ಭಾರತದ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧ
- ಸತತ ಮೂರನೇ ದಿನವೂ ಭಾರತೀಯ ಷೇರುಪೇಟೆಯಲ್ಲಿ ತಲ್ಲಣ ಮತ್ತು ಕರಗಿದ ಹೂಡಿಕೆದಾರರ ಸಂಪತ್ತು
ನವದೆಹಲಿ: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಸಾರಿರುವ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ಸುಪ್ರೀಂ ಲೀಡರ್ ಅಯತೊಲ್ಲಾ ಖಮೇನಿ ಅವರನ್ನು ಅಮೆರಿಕ ಮತ್ತು ಇಸ್ರೇಲ್ ಹತ್ಯೆ ಮಾಡಿದ ಬೆನ್ನಲ್ಲೇ ಕೆರಳಿದ ಸಿಂಹದಂತಾಗಿರುವ ಇರಾನ್, ತನ್ನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದ್ದು, ನಿರಂತರವಾಗಿ ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಇದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭಯದ ಭೀತಿ ಮುಂದುವರಿದಿದ್ದು, ಇದರ ಪರಿಣಾಮ ಜಾಗತಿಕ ಹಾಗೂ ಭಾರತದ ಷೇರು ಮಾರುಕಟ್ಟೆಯ ( Share Market ) ಮೇಲೂ ಬೀರಿದೆ. ಬುಧವಾರ (ಮಾರ್ಚ್ 04) ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿತದೊಂದಿಗೆ ವಹಿವಾಟು ಆರಂಭಿಸಿದವೆ. ಸತತ ಮೂರನೇ ದಿನವೂ ಷೇರುಪೇಟೆ ಹಳಿತಪ್ಪಿದೆ.
ಇಂದು ಬೆಳಗ್ಗೆ 9.30ರ ಸುಮಾರಿಗೆ ಬಿಎಸ್ಇ ಸೆನ್ಸೆಕ್ಸ್ ಸುಮಾರು 1,730.03 ಪಾಯಿಂಟ್‌ಗಳಷ್ಟು ಅಥವಾ ಶೇ.2.16ರಷ್ಟು ಕುಸಿದು 78,508.82 ಕ್ಕೆ ತಲುಪಿದರೆ, ನಿಫ್ಟಿ 50 ಕೂಡ ಶೇ. 2.09 ರಷ್ಟು ಅಂದರೆ, 520.30 ಪಾಯಿಂಟ್‌ಗಳಷ್ಟು ಕುಸಿದು 24,345.10 ಕ್ಕೆ ತಲುಪಿತು. ಸದ್ಯ ಮಾರುಕಟ್ಟೆಯ ಎಲ್ಲಾ ಸೆಕ್ಟರ್‌ಗಳೂ ಕುಸಿತಕಂಡಿದೆ.
ಎನ್ಎಸ್ಇಯಲ್ಲಿ ಸುಮಾರು 457 ಷೇರುಗಳು ಏರಿಕೆ ಕಂಡರೆ, 2,551 ಷೇರುಗಳು ಇಳಿಕೆ ಕಂಡಿವೆ ಮತ್ತು 75 ಷೇರುಗಳು ಯಾವುದೇ ಬದಲಾವಣೆ ಇಲ್ಲದೆ ಹಾಗೇ ಉಳಿದಿವೆ. ಇನ್ನೂ ಬಿಎಸ್ಇಯಲ್ಲಿ 859 ಷೇರುಗಳು ಏರಿಕೆ ಕಂಡರೆ, 3,114 ಇಳಿಕೆ ಕಂಡಿವೆ ಮತ್ತು 168 ಬದಲಾವಣೆ ಇಲ್ಲದೆ ಹಾಗೇ ಉಳಿದಿದೆ. ಒಟ್ಟಾರೆಯಾಗಿ ಏರಿಕೆಗಿಂತ ಇಳಿಕೆಯ ಟ್ರೆಂಡ್ ಹೆಚ್ಚಾಗಿರುವುದರಿಂದ ಮಾರುಕಟ್ಟೆಯ ಭಾರಿ ದುರ್ಬಲತೆಯನ್ನು ಇದು ಸೂಚಿಸುತ್ತದೆ.
ಬಹುತೇಕ ವಲಯ ನಷ್ಟ
ಇಂದಿನ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಬಹುತೇಕ ವಲಯಗಳು ನಷ್ಟದ ಹಾದಿಯನ್ನು ಹಿಡಿದಿವೆ. ಆಟೋ ಮೊಬೈಲ್ (-2.72%), ಬ್ಯಾಂಕ್ (-2.16%), ಫೈನಾನ್ಷಿಯಲ್ ಸರ್ವಿಸಸ್ (-2.32%), FMCG (-1.47%) ಮತ್ತು ಇತರ ಸೈಕ್ಲಿಕಲ್ ವಲಯಗಳು ಗಣನೀಯ ಇಳಿಕೆಯನ್ನು ತೋರಿಸಿವೆ. ಆದರೆ, ಐಟಿ ಕ್ಷೇತ್ರ ಮಾತ್ರ ಸ್ವಲ್ಪ ಲಾಭದಲ್ಲಿದ್ದು (+0.03%) ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.
10 ಲಕ್ಷ ಕೋಟಿ ನಷ್ಟ
ಇಂದಿನ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಒಟ್ಟು ಸುಮಾರು 10 ಲಕ್ಷ ಕೋಟಿ ರೂ.ಗಿಂತ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎನ್ಎಸ್ಇ ಮತ್ತು ಬಿಎಸ್ಇಯಲ್ಲಿ ಭಾರಿ ಕುಸಿತ ಕಂಡಿರುವ ಪರಿಣಾಮ‘ ಆರಂಭದ ಕೆಲವೇ ಗಂಟೆಗಳಲ್ಲಿ ವ್ಯಾಪಕ ಮಾರುಕಟ್ಟೆ ಇಳಿಕೆಯೊಂದಿಗೆ ಹೂಡಿಕೆದಾರರ ಸಂಪತ್ತು ಸಾಕಷ್ಟು ಕರಗಿದೆ. ವಿಶೇಷವಾಗಿ ಬ್ಯಾಂಕಿಂಗ್, ಆಟೋ ಮೊಬೈಲ್, ಮೆಟಲ್‌ಗಳು ಮತ್ತು ಇತರ ಸೈಕ್ಲಿಕಲ್ ವಲಯಗಳಲ್ಲಿ ಭಾರಿ ಇಳಿಕೆ ಕಂಡಿದ್ದು, ಇದು ಮಾರುಕಟ್ಟೆಯ ದುರ್ಬಲತೆಯನ್ನು ತೀವ್ರಗೊಳಿಸಿದೆ.
ಕುಸಿತಕ್ಕೆ ಕಾರಣವೇನು?
ಅಂದಹಾಗೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಭವಿಸಿರುವ ಉದ್ವಿಗ್ನತೆ ಹಾಗೂ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆ ಕಾಣುತ್ತಿರುವುದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಭಾರಿ ಇಳಿಕೆ ಕಾಣುತ್ತಿವೆ. ಕಚ್ಚಾ ತೈಲವು ಶೇ.8 ಕ್ಕಿಂತ ಹೆಚ್ಚು ಏರಿಕೆಯಾಗಿ ತಿಂಗಳುಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತಾರಕ್ಕೇರಿದ್ದು, ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೆನಿಯನ್ನು ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಕೊಂದ ನಂತರ ಇರಾನ್ ಪ್ರತೀಕಾರ ದಾಳಿಗಳು ನಡೆಸಿದ್ದು, ಇದರಿಂದ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಗಳ ಮೇಲೆ ಬೀರಿದೆ. ಅಲ್ಲದೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸತತವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ರೂಪಾಯಿ ಮೌಲ್ಯದಲ್ಲಿನ ಇಳಿಕೆ ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ, (ಏಜೆನ್ಸೀಸ್).