ಡಾಲರ್ ಎದುರು ಜಿಗಿದ ರೂಪಾಯಿ: ಇರಾನ್-ಅಮೆರಿಕ ಶಾಂತಿ ಮಾತುಕತೆ ಬೆನ್ನಲ್ಲೇ 40 ಪೈಸೆ ಏರಿಕೆ! Indian Rupee
- ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡುವ ಪ್ರಮುಖ ಆಶಾವಾದ ಬೆಳವಣಿಗೆ
- ಸೋಮವಾರದ ಆರಂಭಿಕ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯ ಏರಿಕೆ
- ಯುಎಸ್ ಡಾಲರ್ ಎದುರು ಭರ್ಜರಿ 40 ಪೈಸೆ ಏರಿಕೆ ಕಂಡು 95.20ಕ್ಕೆ ತಲುಪಿದ ರೂಪಾಯಿ ಮೌಲ್ಯ
- ಎರಡೂ ಕಡೆಯವರು ಸಮಯ ತೆಗೆದುಕೊಂಡು ಸರಿಯಾದ ತೀರ್ಮಾನಕ್ಕೆ ಬನ್ನಿ ಎಂದು ಸೂಚನೆ ನೀಡಿರುವ ಟ್ರಂಪ್
ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡುವ ಪ್ರಮುಖ ಆಶಾವಾದ ಬೆಳವಣಿಗೆ ಹಿನ್ನೆಲೆಯಲ್ಲಿ, ಸೋಮವಾರದ ಆರಂಭಿಕ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಭಾರತೀಯ ರೂಪಾಯಿ ( Indian Rupee ) ಮೌಲ್ಯವು ಯುಎಸ್ ಡಾಲರ್ ಎದುರು ಭರ್ಜರಿ 40 ಪೈಸೆ ಏರಿಕೆ ಕಂಡು 95.20 ರೂಪಾಯಿಗೆ ತಲುಪಿದೆ.
ಜಗತ್ತಿನ ಇಂಧನ ಸರಬರಾಜಿಗೆ ಪ್ರಮುಖ ಕೊಂಡಿಯಾಗಿರುವ ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಇನ್ನೂ ಭಿನ್ನಾಭಿಪ್ರಾಯಗಳು ಜೀವಂತವಾಗಿದ್ದರೂ ಸಹ, ಜಾಗತಿಕ ಮಟ್ಟದ ಸಕಾರಾತ್ಮಕ ಬೆಳವಣಿಗೆಗಳು ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿಗೆ ಹೊಸ ಶಕ್ತಿ ತುಂಬಿವೆ. ಇದರ ಪರಿಣಾಮ ಶುಕ್ರವಾರ 95.60 ರಲ್ಲಿ ಅಂತ್ಯವಾಗಿದ್ದ ರೂಪಾಯಿ ಮೌಲ್ಯ, ಇಂದು 40 ಪೈಸೆಗಳ ಚೇತರಿಕೆಯೊಂದಿಗೆ ಬಲಿಷ್ಠ ಆರಂಭವನ್ನು ಪಡೆದುಕೊಂಡಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸುಮಾರು ಮೂರು ತಿಂಗಳ ಯುದ್ಧಕ್ಕೆ ಅಂತ್ಯಹಾಡಲು ಶಾಂತಿ ಒಪ್ಪಂದದ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿರುವುದು ಅಂತರ್ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಗೆ ಭಾರಿ ಬಲ ತಂದಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು 95.36 ರೂಪಾಯಿ ಮಟ್ಟದಲ್ಲಿ ಮುಕ್ತಾಯಗೊಂಡಿದ್ದ ರೂಪಾಯಿ, ಕಳೆದೆರಡು ದಿನಗಳ ಮುಕ್ತಾಯದ ಮೌಲ್ಯವಾಗಿದ್ದ 95.60 ಕ್ಕೆ ಹೋಲಿಸಿದರೆ 40 ಪೈಸೆ ಏರಿಕೆ ಕಂಡು 95.20 ರ ಮಟ್ಟವನ್ನು ಮುಟ್ಟಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತುಕತೆಕಾರರಿಗೆ "ಒಪ್ಪಂದಕ್ಕೆ ಆತುರಪಡಬೇಡಿ, ಎರಡೂ ಕಡೆಯವರು ಸಮಯ ತೆಗೆದುಕೊಂಡು ಸರಿಯಾದ ತೀರ್ಮಾನಕ್ಕೆ ಬನ್ನಿ" ಎಂದು ಸೂಚಿಸಿದ್ದು ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಚಲನೆಗೆ ಕಾರಣವಾಗಿದೆ. ಇನ್ನು ಇಂದು ಅಮೆರಿಕದಲ್ಲಿ ರಜೆ ಇರುವುದರಿಂದ ನಗದು ಬೇಡಿಕೆ ಕಡಿಮೆ ಇರಲಿದ್ದು, ತಿಂಗಳಾಂತ್ಯದ ಬೇಡಿಕೆಯನ್ನು ನಿಭಾಯಿಸಲು ಆರ್‌ಬಿಐ ಡಾಲರ್ ಮೌಲ್ಯದ ಮೇಲೆ ನಿಗಾ ಇರಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ವ್ಯಾಪಾರ, ನಿರ್ಣಾಯಕ ಖನಿಜಗಳು, ಇಂಧನ ಮತ್ತು ರಕ್ಷಣಾ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಕುರಿತು ವ್ಯಾಪಕ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ನಂತರ ಭಾನುವಾರ ಜಂಟಿ ಹೇಳಿಕೆ ನೀಡಿರುವ ರೂಬಿಯೋ, ಭಾರತ ಮತ್ತು ಅಮೆರಿಕ ದೇಶಗಳು ಪರಸ್ಪರ ಹಿತಾಸಕ್ತಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುವಂತಹ ಬಹುನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದವನ್ನು (Trade Agreement) ಶೀಘ್ರದಲ್ಲೇ ಅಂತಿಮಗೊಳಿಸಲಿವೆ ಮತ್ತು ಅಮೆರಿಕದ ವ್ಯಾಪಾರ ಪ್ರತಿನಿಧಿಗಳು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಒಪ್ಪಂದವು ಉಭಯ ದೇಶಗಳ ಆರ್ಥಿಕತೆಗೆ ಅತ್ಯಂತ ಪ್ರಯೋಜನಕಾರಿಯಾಗಲಿದ್ದು, ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಫಿನ್ರೆಕ್ಸ್ ಟ್ರೆಜರಿ ಅಡ್ವೈಸರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಭನ್ಸಾಲಿ ವಿಶ್ಲೇಷಿಸಿದ್ದಾರೆ.
ಜಾಗತಿಕ ಮಾರುಕಟ್ಟೆಯ ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳ ನೇರ ಪರಿಣಾಮ ದೇಶೀಯ ಷೇರು ಮಾರುಕಟ್ಟೆಯ ಮೇಲೂ ಉಂಟಾಗಿದ್ದು, ಹೂಡಿಕೆದಾರರಲ್ಲಿ ಭಾರಿ ಉತ್ಸಾಹ ಕಂಡುಬಂದಿದೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಬರೋಬ್ಬರಿ 908.98 ಅಂಕಗಳ ಜಿಗಿತ ಕಂಡು 76,317.85 ಮಟ್ಟ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 262.65 ಅಂಕಗಳ ಭರ್ಜರಿ ಏರಿಕೆಯೊಂದಿಗೆ 23,977.70 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇದರೊಂದಿಗೆ, ವಿಶ್ವದ ಪ್ರಮುಖ ಆರು ಕರೆನ್ಸಿಗಳ ಎದುರು ಡಾಲರ್‌ನ ಬಲವನ್ನು ಅಳೆಯುವ 'ಡಾಲರ್ ಸೂಚ್ಯಂಕ' (Dollar Index) ಶೇ. 0.20 ರಷ್ಟು ಕುಸಿತ ಕಂಡು 99.04 ಕ್ಕೆ ಇಳಿದಿದೆ. ಇತ್ತ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Brent Crude) ಬೆಲೆಯು ಶೇ. 5.43 ರಷ್ಟು ಭಾರಿ ಕುಸಿತ ದಾಖಲಿಸಿದ್ದು, ಪ್ರತಿ ಬ್ಯಾರೆಲ್‌ಗೆ 97.92 ಡಾಲರ್ ತಲುಪಿರುವುದು ಭಾರತದಂತಹ ಆಮದು ಅವಲಂಬಿತ ದೇಶಕ್ಕೆ ದೊಡ್ಡ ಸಮಾಧಾನ ತಂದಿದೆ.
ವಿನಿಮಯ ಮಾರುಕಟ್ಟೆಯ ಅಧಿಕೃತ ದತ್ತಾಂಶಗಳ ಪ್ರಕಾರ, ಕಳೆದ ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) 4,440.47 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹಣ ಹಿಂಪಡೆದಿದ್ದಾರೆ. ಇದೇ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಮೇ 15 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ನಿಧಿ 8.094 ಬಿಲಿಯನ್ ಡಾಲರ್‌ನಷ್ಟು ಕುಸಿತ ಕಂಡು 688.894 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದಕ್ಕೂ ಹಿಂದಿನ ವಾರ ಅಂದರೆ ಮೇ 8 ಕ್ಕೆ ಕೊನೆಗೊಂಡಿದ್ದ ಅವಧಿಯಲ್ಲಿ ದೇಶದ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯು 6.295 ಬಿಲಿಯನ್ ಡಾಲರ್‌ನಷ್ಟು ದಾಖಲೆಯ ಜಿಗಿತ ಕಂಡು 696.988 ಬಿಲಿಯನ್ ಡಾಲರ್ ತಲುಪಿತ್ತು ಎಂಬುದು ಗಮನಾರ್ಹ, (ಏಜೆನ್ಸೀಸ್).