ವಾಣಿಜ್ಯ

ಆರ್ಥಿಕ ಪ್ಯಾಕೇಜ್​ಗೆ ನಿನ್ನೆ ಚೇತರಿಸಿದ್ದ ಸೆನ್ಸೆಕ್ಸ್​ ಇಂದು 600 ಅಂಶ ಕುಸಿತ

ಮುಂಬೈ: ಕೇಂದ್ರ ಸರ್ಕಾರ ಕರೊನಾ ಸಂಕಷ್ಟ ಪರಿಹಾರಕ್ಕಾಗಿ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್​ ಘೋಷಿಸಿದ ಬೆನ್ನಿಗೇ ಆರಂಭಿಕ ವಹಿವಾಟಿನಲ್ಲಿ 1,400ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದ್ದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಕುಸಿದಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ ಕುಸಿತ ಕಂಡಿದೆ.

ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ 600ಕ್ಕೂ ಹೆಚ್ಚು ಅಂಶಗಳ ಕುಸಿತ ದಾಖಲಿಸಿದರೆ, ನಿಫ್ಟಿ 9,300ರ ಕೆಳಕ್ಕೆ ಜಾರಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಘೋಷಿಸಿದ ಆತ್ಮನಿರ್ಭರ ಭಾರತ್ ಅಭಿಯಾನದ ಪ್ಯಾಕೇಜ್​ಗಳ ಮೊದಲ ಹಂತದ ವಿವರಣೆಯ ನಂತರ ವಿಶ್ಲೇಷಣೆಗಳು ಆರಂಭವಾಗಿದ್ದು ಅದರ ಪರಿಣಾಮ ಮಾರುಕಟ್ಟೆಯ ಮೇಲೂ ಆಗಿದೆ. ಭಾರಿ ಉತ್ತೇಜನ ನಿರೀಕ್ಷಿಸಿದ್ದ ಷೇರುಪೇಟೆಗೆ ನಿರಾಶೆಯಾಗಿರುವುದು ಸೆನ್ಸೆಕ್ಸ್ ಮತ್ತು ನಿಫ್ಟಿ ಮೂಲಕ ವ್ಯಕ್ತವಾಗಿದೆ. ಗುರುವಾರ ಬೆಳಗ್ಗೆ ಸೆನ್ಸೆಕ್ಸ್​ 31,344.50 ಅಂಶಕ್ಕೆ ಕುಸಿದು ನಂತರ 410.12 ಅಂಶ ಕುಸಿತದೊಂದಿಗೆ 31,598.49ರಲ್ಲಿ ವಹಿವಾಟು ಮುಂದುವರಿಸಿದೆ. ಇದೇ ವೇಳೆ, ನಿಫ್ಟಿ 115.55 ಕುಸಿತ ಕಂಡು 9,268 ಅಂಶದಲ್ಲಿ ವಹಿವಾಟು ಮುಂದುವರಿಸಿದೆ.

ಸೆನ್ಸೆಕ್ಸ್​ ಪಟ್ಟಿಯಲ್ಲಿ ಎನ್​ಟಿಪಿಸಿ ಷೇರು ಗರಿಷ್ಠ 4 ಶೇಕಡ ನಷ್ಟ ಅನುಭವಿಸಿದರೆ, ಇನ್​ಫೋಸಿಸ್​, ಪವರ್​ಗ್ರಿಡ್​, ಟೆಕ್​ಮಹೀಂದ್ರಾ, ಎಂಆ್ಯಂಡ್ಎಂ, ಇಂಡಸ್​ಇಂಡ್ ಬ್ಯಾಂಕ್ ಮತ್ತು ಒಎನ್​ಜಿಸಿ ಷೇರುಗಳು ಕೂಡ ನಷ್ಟ ಅನುಭವಿಸಿವೆ.ಇನ್ನೊಂದೆಡೆ, ಬಜಾಜ್ ಫೈನಾನ್ಸ್​, ನೆಸ್ಟ್ಲೆ ಇಂಡಿಯಾ, ಕೊಟಾಕ್ ಬ್ಯಾಂಕ್​, ಸನ್ ಫಾರ್ಮಾ, ಅಲ್ಟ್ರಾ ಟೆಕ್​ ಸಿಮೆಂಟ್ ಷೇರುಗಳು ಲಾಭ ಗಿಟ್ಟಿಸಿಕೊಂಡು ವಹಿವಾಟು ಮುಂದುವರಿಸಿವೆ.

ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ ಆರಂಭಿಕ 1,400 ಅಂಶಗಳ ಏರಿಕೆಯೊಂದಿಗೆ ವಹಿವಾಟು ಶುರುಮಾಡಿತ್ತಾದರೂ, ದಿನದ ಅಂತ್ಯಕ್ಕೆ 637.49 ಅಂಶ ಏರಿಕೆ ದಾಖಲಿಸಿ 32,008.61ರಲ್ಲಿ ವಹಿವಾಟು ಮುಗಿಸಿತ್ತು. ಇದೇ ರೀತಿ, ನಿಫ್ಟಿ 187 ಅಂಶ ಏರಿ 9,383.55 ಅಂಶದಲ್ಲಿ ದಿನದ ವಹಿವಾಟು ಮುಗಿಸಿತ್ತು.ಇನ್ನು, ಮಾರುಕಟ್ಟೆಯ ತಾತ್ಕಾಲಿಕ ಡೇಟಾ ಪ್ರಕಾರ, ಫಾರಿನ್​ ಪೋರ್ಟ್​ಫೋಲಿಯೋ ಇನ್​ವೆಸ್ಟರ್​​ಗಳು 282.43 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. (ಏಜೆನ್ಸೀಸ್)