ವಾಣಿಜ್ಯ

ಆರಂಭಿಕ ವಹಿವಾಟಿನಲ್ಲಿ 600ಕ್ಕೂ ಹೆಚ್ಚು ಅಂಶ ಏರಿತು ಸೆನ್ಸೆಕ್ಸ್​, ನಿಫ್ಟಿಯೂ 9,300ಕ್ಕಿಂತ ಮೇಲಕ್ಕೆ..

ಮುಂಬೈ: ಕೊರನಾ ಕರಿಛಾಯೆ ಇಡಿ ಜಗತ್ತನ್ನೇ ಆವರಿಸಿದ್ದು, ಷೇರುಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲೇ ಇದೆ. ಆದಾಗ್ಯೂ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 600ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ 9,300 ಅಂಶದ ಮೇಲೇರಿದೆ.

ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್​ 31,977.82 ಅಂಶಕ್ಕೆ ಏರಿಕೆಯಾಗಿದ್ದು, 632.65 ಅಂಶ ಹೆಚ್ಚಳ ದಾಖಲಿಸಿತ್ತು. ಬಳಿಕ 31,959.87ರಲ್ಲಿ ವಹಿವಾಟು ಮುಂದುವರಿಸಿದೆ. ಇದೇ ರೀತಿ ನಿಫ್ಟಿ 174.20 ಅಂಶ ಏರಿಕೆಯಾಗಿದ್ದು, 9,328.60 ಅಂಶ ಏರಿ ವಹಿವಾಟು ಮುಂದುವರಿಸಿದೆ.

ಸೆನ್ಸೆಕ್ಸ್​ ಪಟ್ಟಿಯಲ್ಲಿ ಬಜಾಜ್​ ಆಟೋ ಟಾಪ್ ಗೇನರ್ ಆಗಿ ಮೂಡಿದ್ದು ಇದರ ಷೇರುಗಳು ಶೇಕಡ 4 ಲಾಭಾಂಶ ಕಂಡಿವೆ. ಸನ್​ಫಾರ್ಮಾ, ಇಂಡಸ್​ಇಂಡ್​ ಬ್ಯಾಂಕ್​, ಮಾರುತಿ, ಎಚ್​ಡಿಎಫ್​ಸಿ, ಏಕ್ಸಿಸ್​ ಬ್ಯಾಂಕ್​, ರಿಲಯನ್ಸ್ ಇಂಡಸ್ಟ್ರೀಸ್​, ಕೊಟಾಕ್ ಬ್ಯಾಂಕ್​ ಷೇರುಗಳು ಕೂಡ ಲಾಭ ಗಳಿಸಿವೆ. ಇನ್ನೊಂದೆಡೆ ಎನ್​ಟಿಪಿಸಿ, ಪವರ್​ಗ್ರಿಡ್​, ಏಷ್ಯನ್​ಪೇಂಟ್ಸ್​ ಷೇರುಗಳು ನಷ್ಟ ಅನುಭವಿಸಿವೆ.

ಈ ಹಿಂದಿನ ದಿನ ವಹಿವಾಟಿನಲ್ಲಿ ಸೆನ್ಸೆಕ್ಸ್​ 535.86 ಅಂಶ ಇಳಿಕೆಯಾಗಿ 31,327.22 ರಲ್ಲೂ, ನಿಫ್ಟಿ 159.50 ಅಂಶ ಇಳಿಕೆಯಾಗಿ 9,154.40ರಲ್ಲಿ ದಿನದ ವಹಿವಾಟು ಕೊನೆಗೊಳಿಸಿದ್ದವು. ಶುಕ್ರವಾರದ ಡೇಟಾ ಪ್ರಕಾರ, ಕ್ಯಾಪಿಟಲ್ ಮಾರುಕಟ್ಟೆಯಲ್ಲಿ 207.29 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಫಾರಿನ್ ಪೋರ್ಟ್​ಫೋಲಿಯೋ ಇನ್​ವೆಸ್ಟರ್​​ಗಳು ಮಾರಾಟ ಮಾಡಿದ್ದಾರೆ. (ಏಜೆನ್ಸೀಸ್)