ವಾಣಿಜ್ಯ

ಯೆಸ್ ಬ್ಯಾಂಕ್​ನ 7,250 ಕೋಟಿ ರೂ. ಷೇರು ಖರೀದಿಗೆ ಎಸ್​ಬಿಐ ನಿರ್ಧಾರ

ನವದೆಹಲಿ: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕ್​ನ 7250 ಕೋಟಿ ರೂ. ಷೇರುಗಳನ್ನು ತಲಾ ಹತ್ತು ರೂಪಾಯಿನಂತೆ ಖರೀದಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ನಿರ್ಧರಿಸಿದೆ. ಇದರಿಂದ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ 7,250 ಕೋಟಿ ರೂಪಾಯಿ ಬಂಡವಾಳ ಸಿಗಲಿದೆ.

ಎಸ್​ಬಿಐನ ಕೇಂದ್ರ ಮಂಡಳಿಯ ಕಾರ್ಯಕಾರಿ ಸಮಿತಿ ಬುಧವಾರ ನಡೆದ ಸಭೆಯಲ್ಲಿ ಷೇರು ಖರೀದಿಗೆ ಸಮ್ಮತಿ ನೀಡಿತು. ಷೇರು ಖರೀದಿಯು ಆರ್​ಬಿಐ ನಿಯಂತ್ರಣ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಎಸ್​ಬಿಐನ ಷೇರು ಯೆಸ್ ಬ್ಯಾಂಕ್​ನ ಪೇಯ್್ಡ ಅಪ್ ಬಂಡವಾಳದ ಶೇ. 49 ಇರಲಿದೆ. ಈ ಬಗ್ಗೆ ಬ್ಯಾಂಕ್ ಕಳೆದ ವಾರ ಒಂದು ಕರಡು ಯೋಜನೆ ಪ್ರಕಟಿಸಿತ್ತು. ಎಸ್​ಬಿಐ ಅನ್ನು ‘ಹೂಡಿಕೆ ಬ್ಯಾಂಕ್’ ಎಂದು ಕರಡಿನಲ್ಲಿ ನಮೂದಿಸಲಾಗಿತ್ತು. ಕರಡು ಯೋಜನೆ ಬಗ್ಗೆ ಸಾರ್ವಜನಿಕರು, ಬ್ಯಾಂಕ್​ನ ಷೇರುದಾರರು, ಠೇವಣಿದಾರರು ಮತ್ತು ಸಾಲದಾತರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸಲಹೆಗಳನ್ನು ಆಹ್ವಾನಿಸಿತ್ತು.

ಭ್ರಷ್ಟಾಚಾರ ಹಾಗೂ ಹಣ ದುರುಪಯೋಗ ಆರೋಪಗಳ ಮೇಲೆ ಜಾರಿ ನಿರ್ದೇಶನಾಲಯ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್​ನನ್ನು ಬಂಧಿಸಿದೆ. ಅವರ ಪತ್ನಿ, ಮೂವರು ಪುತ್ರಿಯರಲ್ಲದೆ ಇತರ ಹಲವರ ಮೇಲೆಯೂ ಇ.ಡಿ. ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಮೊಕದ್ದಮೆಗಳನ್ನು ದಾಖಲಿಸಿದೆ.