ವಾಣಿಜ್ಯ

ಗುಡ್​ನ್ಯೂಸ್​ ಬೆನ್ನಲ್ಲೇ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್​ ನೀಡಿದ ಎಸ್​ಬಿಐ!

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್​ ಎಸ್​ಬಿಐ(ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ) ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ನಿಶ್ಚಿತ ಠೇವಣಿ(ಎಫ್​ಡಿ) ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಉಳಿತಾಯ ಖಾತೆಗೆ ಇದುವರೆಗೆ ಇದ್ದ ಮಿನಿಮಂ ಬ್ಯಾಲೆನ್ಸ್ ಮೊತ್ತವನ್ನು​ ರದ್ದುಗೊಳಿಸಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದ ಬ್ಯಾಂಕ್​, ಇದೀಗ ಬಡ್ಡಿದರವನ್ನು ಕಡಿತಗೊಳಿಸಿ ನಿಶ್ಚಿತ ಠೇವಣಿದಾರರಿಗೆ ಕಹಿ ಸುದ್ದಿ ನೀಡಿದೆ.

ಪರಿಷ್ಕೃತ ದರ ಮಾರ್ಚ್​ 10ರಿಂದಲೇ ಜಾರಿಗೆ ಬಂದಿದೆ. ಕಳೆದ ಫೆಬ್ರವರಿ 10ರಂದು ಎಸ್​ಬಿಐ ಎಫ್​ಡಿ ಮೇಲಿನ ಬಡ್ಡಿದರ ಕಡಿತಗೊಳಿಸಿತ್ತು. ಪರಿಷ್ಕೃತ ದರದ ಪ್ರಕಾರ 7 ರಿಂದ 45 ದಿನದವರೆಗಿನ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರ ಶೇ. 4.5 ರಿಂದ 4ಕ್ಕೆ ಇಳಿಸಿದೆ. ಅದೇ ರೀತಿಯಾಗಿ 5 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ. 6 ರಿಂದ 5.9ಕ್ಕೆ ಇಳಿಸಿದೆ. 5 ವರ್ಷದಿಂದ 10 ವರ್ಷಗಳವರೆಗೂ ಕೂಡ ಶೇ. 6 ರಿಂದ 5.9ಕ್ಕೆ ಇಳಿಸಿದೆ.

ಹಿರಿಯ ನಾಗರಿಕರು ಸಾಮಾನ್ಯ ಜನರಿಗೆ ನೀಡುವುದಕ್ಕಿಂತಲೂ 50 ಮೂಲ ಅಂಕಗಳೊಂದಿಗೆ ಹೆಚ್ಚಿನ ಬಡ್ಡಿದರ ಪಡೆಯುವುದನ್ನು ಮುಂದುವರಿಸಲಾಗುವುದು ಎಂದು ಎಸ್‌ಬಿಐ ತಿಳಿಸಿದೆ. ಆದರೆ, ಈ ದರ 2 ಕೋಟಿ ರೂ. ಗಿಂತ ಕಡಿಮೆ ನಿಶ್ಚಿತ ಠೇವಣಿಗೆ ಅನ್ವಯವಾಗಲಿದೆ ಎಂದು ಎಸ್​​ಬಿಐ ಹೇಳಿದೆ.

1. ಎಸ್​​ಬಿಐ ಪ್ರಸ್ತುತ ನಿಶ್ಚಿತ ಠೇವಣಿ ದರ(ಸಾಮಾನ್ಯರಿಗೆ)

  • 7 ದಿನದಿಂದ 45 ದಿನ- 4%
  • 46 ದಿನದಿಂದ 179 ದಿನ- 5%
  • 180 ದಿನದಿಂದ 210 ದಿನ- 5.5%
  • 211 ದಿನದಿಂದ 1 ವರ್ಷದೊಳಗೆ - 5.5%
  • 1 ವರ್ಷದಿಂದ 2 ವರ್ಷದೊಳಗೆ- 5.9%
  • 2 ವರ್ಷದಿಂದ 3 ವರ್ಷದೊಳಗೆ- 5.9%
  • 3 ವರ್ಷದಿಂದ 5 ವರ್ಷದೊಳಗೆ - 5.9%
  • 5 ವರ್ಷದಿಂದ 10 ವರ್ಷಗಳವರೆಗೆ- 5.9%

2. ಎಸ್​​ಬಿಐ ಪ್ರಸ್ತುತ ನಿಶ್ಚಿತ ಠೇವಣಿ ದರ(ಹಿರಿಯ ನಾಗರಿಕರಿಗೆ)

  • 7 ದಿನದಿಂದ 45 ದಿನ- 4.5%
  • 46 ದಿನದಿಂದ 179 ದಿನ- 5.5%
  • 180 ದಿನದಿಂದ 210 ದಿನ- 6%
  • 211 ದಿನದಿಂದ 1 ವರ್ಷದೊಳಗೆ- 6%
  • 1 ವರ್ಷದಿಂದ 2 ವರ್ಷದೊಳಗೆ- 6.4%
  • 2 ವರ್ಷದಿಂದ 3 ವರ್ಷದೊಳಗೆ - 6.4%
  • 3 ವರ್ಷದಿಂದ 5 ವರ್ಷದೊಳಗೆ - 6.4%
  • 5 ವರ್ಷದಿಂದ 10 ವರ್ಷಗಳವರೆಗೆ- 6.4%

ಎಸ್​ಬಿಐ ಪ್ರಸ್ತುತ ಪರಿಷ್ಕರಿಸಿರುವ ಬಡ್ಡಿದರ ಹೊಸ ಠೇವಣಿ ಮತ್ತು ನವೀಕೃತ ಮೆಚ್ಯುರಿಂಗ್​ ಠೇವಣಿಗಳಿಗೆ ಅನ್ವಯವಾಗಲಿದೆ ಎಂದು ಎಸ್​ಬಿಐ ತಿಳಿಸಿದೆ.

ಇದೀಗ ಎಸ್​ಬಿಐ ಬಡ್ಡಿ ದರವನ್ನು ಕಡಿತಗೊಳಿಸಿರುವುದರಿಂದ ಇತರೆ ಬ್ಯಾಂಕ್​ಗಳು ಕೂಡ ಇದೇ ಹಾದಿಯನ್ನು ತುಳಿಯಲಿವೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)