ವಾಣಿಜ್ಯ

17 ವರ್ಷದ ಹಿಂದಿನ ಮಟ್ಟಕ್ಕೆ ತೈಲ ದರ

ಕರೊನಾ ವೈರಸ್ ಕಾರಣ ತೈಲ ಬೇಡಿಕೆ ಕುಸಿತದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್​ಡೌನ್ ಘೋಷಿಸಿರುವುದರಿಂದ ಇಂಧನ ಬೇಡಿಕೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿರುವ ಹಿನ್ನೆಲೆ ತೈಲ ಉತ್ಪಾದಕ ರಾಷ್ಟ್ರಗಳು ತೀವ್ರ ನಷ್ಟ ಅನುಭವಿಸುತ್ತಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬ್ರೆಂಟ್ ತೈಲ ಬೆಲೆ ಶೇ.6.62ರಷ್ಟು ಇಳಿಕೆಯಾಗಿದ್ದು, 23.28 ಡಾಲರ್​ಗೆ ಕುಸಿದಿದೆ. ಅಮೆರಿಕ ಮಾರುಕಟ್ಟೆಯಲ್ಲೂ ಕಚ್ಚಾತೈಲ ಬೆಲೆ ಶೇ.5 ಇಳಿಕೆ ಕಂಡು ಪ್ರತಿ ಬ್ಯಾರೆಲ್​ಗೆ 20 ಡಾಲರ್ ತಲುಪಿದೆ. ಅಲ್ಲದೇ ಸೌದಿ ಅರೇಬಿಯಾ ಹಾಗೂ ರಷ್ಯಾ ಮಧ್ಯೆ ನಡೆಯುತ್ತಿರುವ ಬೆಲೆ ಸಮರದಿಂದಾಗಿಯೂ ಕಚ್ಚಾತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿದೆ.

ಕಚ್ಚಾತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್, ಉತ್ಪಾದನೆಯನ್ನು ಕಡಿತಗೊಳಿಸುವಂತೆ ಮಾಡಿದ್ದ ಪ್ರಸ್ತಾವನೆ ತಿರಸ್ಕರಿಸಿದ್ದ ಸೌದಿ ಅರೇಬಿಯಾ ತನ್ನ ಕಚ್ಚಾತೈಲ ಆಮದುದಾರರಿಗೆ ಭಾರಿ ರಿಯಾಯಿತಿಯನ್ನು ಘೋಷಿಸಿ, ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಬದಲಿಗೆ ಹೆಚ್ಚಿಸಿತ್ತು. ಇದರಿಂದಾಗಿ ಮಾರ್ಚ್ ಆರಂಭದ ವೇಳೆಯೆ ಕಚ್ಚಾತೈಲ ಬೆಲೆ ಶೇ.8ರಷ್ಟು ಇಳಿಕೆ ಕಂಡು ಮಾರುಕಟ್ಟೆಯಲ್ಲಿ ಅಂತಂತ್ರ ಸ್ಥಿತಿ ಸೃಷ್ಟಿಸಿತ್ತು.

ಭಾರತಕ್ಕೆ ವರದಾನ

ಭಾರತದಲ್ಲಿ ಫೆಬ್ರವರಿ ಮಧ್ಯದಿಂದಲೇ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಇಳಿಕೆ ಕಾಣುತ್ತಿರುವ ಹಿನ್ನೆಲೆ ಕಳೆದ ಮಾ.16ರಿಂದ ಬೆಲೆಯನ್ನು ಸ್ಥಿರವಾಗಿಡಲಾಗಿದೆ. ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್​ಗೆ ಹೆಚ್ಚಿಸಿರುವ -ಠಿ; 3 ಅಬಕಾರಿ ಸುಂಕವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸರಿದೂಗಿಸಿಕೊಂಡಿರುವ ಕಾರಣ ಗ್ರಾಹಕರಿಗೆ ತೆರಿಗೆ ಏರಿಕೆ ಬಿಸಿ ಸದ್ಯ ತಟ್ಟಿಲ್ಲ.