ಪ್ರಸ್ತುತ ಸಕ್ಕರೆ, ಬೆಲ್ಲ ಉತ್ಪಾದನೆ ದೊಡ್ಡ ಉದ್ಯಮವಾಗಿ ಬೆಳೆದಿದೆ. ಇದಕ್ಕೆ ಪೂರಕವಾಗಿ ಕಬ್ಬು ಬೆಳೆಗಾರರ ಸಂಖ್ಯೆಯೂ ವೃದ್ಧಿಸುತ್ತಿದೆ. ಆದರೆ ಬಿತ್ತನೆಯಿಂದ ಕಟಾವಿನವರೆಗೂ ಖರ್ಚು ಬಾಧಿಸುತ್ತಿದೆ. ಕಟಾವು ಸಮಯದಲ್ಲಿ ಎದುರಾಗುವ ಕೂಲಿಯಾಳುಗಳ ಕೊರತೆ ರೈತರಿಗೆ ದೊಡ್ಡ ಹೊಡೆತವನ್ನೇ ನೀಡುತ್ತದೆ. ಪರಿಣಾಮ ಅವಧಿ ಮುಗಿದರೂ ಬೆಳೆ ಕೊಳೆಯುವಂತಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆಗಾರರಿಗೆ ವರವಾಗುತ್ತಿರುವುದು ‘ಯಾಂತ್ರೀಕರಣ’.
ಕಬ್ಬು ಬೇಸಾಯದಲ್ಲಿ ಸಾಂಪ್ರದಾಯಿಕ ಪದ್ಧತಿ ಅನುಸರಿಸುತ್ತಿರುವುದರಿಂದ ಖರ್ಚು ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾಂತ್ರೀಕೃತ ಬೇಸಾಯ ಪದ್ಧತಿ ಅನುಷ್ಠಾನಕ್ಕೆ ಆದ್ಯತೆ ನೀಡುತ್ತಿದ್ದು, ಇದು ರೈತರಿಗೆ ವರವಾಗಲಿದೆ. ಮಹಾರಾಷ್ಟ್ರದಿಂದ ಬರುತ್ತಿರುವ ಕಾರ್ವಿುಕರು: ಮಂಡ್ಯ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಚಾಮರಾಜನಗರ, ಮೈಸೂರು ಸೇರಿ 16 ಜಿಲ್ಲೆಯಲ್ಲಿ ಕಬ್ಬು ಬೆಳೆಯಲಾಗುತ್ತದೆ. ಹಿಂದೆಲ್ಲ ರೈತರು ಭೂಮಿ ಸಿದ್ಧತೆ, ಬಿತ್ತನೆ ಸೇರಿ ಸಣ್ಣ-ಪುಟ್ಟ ಕೆಲಸಕ್ಕೆ ಸ್ಥಳೀಯ ಕೂಲಿ ಕಾರ್ವಿುಕರನ್ನು ಬಳಸಿಕೊಳ್ಳುತ್ತಿದ್ದರು. ಆದರೆ ವರ್ಷದಿಂದ ವರ್ಷಕ್ಕೆ ಕಾರ್ವಿುಕರ ಕೊರತೆ ಕಾಡಲಾರಂಭಿಸಿತು.
ಪರಿಣಾಮ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಕಾರ್ವಿುಕರನ್ನು ಕರೆಸಿ ಕಟಾವು ಮಾಡಿಸಲಾಗುತ್ತಿತ್ತು. ಈಗ ಅದಕ್ಕೂ ಸಮಸ್ಯೆ ಎದುರಾಗಿದೆ. ಸಕ್ಕರೆ ಕಾರ್ಖಾನೆಗಳಿಗೂ ಕಾರ್ವಿುಕರ ಕೊರತೆ ಬಿಸಿ ತಟ್ಟಿದೆ. ಈ ವರ್ಷ ಪರಿಸ್ಥಿತಿ ನಿರೀಕ್ಷೆಗೂ ಮೀರಿ ಬಿಗಡಾಯಿಸಿದ್ದರಿಂದ ಮಹಾರಾಷ್ಟ್ರದಿಂದ ಕಾರ್ವಿುಕರನ್ನು ಕರೆಸಿಕೊಳ್ಳಲಾಗಿದೆ. ಇದು ಭವಿಷ್ಯದ ಪರಿಸ್ಥಿತಿಯನ್ನು ಅವಲೋಕಿಸುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಯಾಂತ್ರೀಕೃತ ಬೇಸಾಯ ಪದ್ಧತಿ ಕಬ್ಬು ಬೆಳೆಗಾರರಿಗೆ ವರದಾನವಾಗುವುದರಲ್ಲಿ ಅನುಮಾನವಿಲ್ಲ.
ಮಂಡ್ಯ ಜಿಲ್ಲೆಗೆ ಮೊದಲ ಬಾರಿಗೆ ಕಬ್ಬು ಕಟಾವು ಯಂತ್ರ ಬಂದಿದೆ. ಮದ್ದೂರು ತಾಲೂಕಿನ ಬೆಳತೂರು ಗ್ರಾಮದ ಶಂಕರ್ ಎಂಬುವರಿಗೆ ನ.18ರಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿತರಣೆ ಮಾಡಲಿದ್ದಾರೆ. ಇದರ ಬಗ್ಗೆ ಬೆಳತೂರಿನಲ್ಲಿ ಪ್ರಾತ್ಯಕ್ಷಿತೆ ಇರಲಿದೆ. ಈ ಯಂತ್ರ ಕಬ್ಬು ಬೆಳೆಯನ್ನು ಬುಡಸಹಿತ ಕಟಾವು ಮಾಡುವುದರಿಂದ ತರಗು ನಿರ್ವಹಣೆ ಸುಲಭ. ಬೆಂಕಿ ಹಚ್ಚಬೇಕಾದ ತೊಂದರೆ ಇರುವುದಿಲ್ಲ. ಕಟಾವಾದ ಕಬ್ಬನ್ನು ನೇರವಾಗಿ ಕಾರ್ಖಾನೆಗೆ ಸಾಗಿಸುವುದರಿಂದ ದಿನಗಟ್ಟಲೆ ರೈತರು ಕಾಯಬೇಕಿಲ್ಲ. ಇದಕ್ಕೆ ಪೂರಕವಾಗಿ ಯಂತ್ರಗಳಿಂದ ಕಟಾವು ಮಾಡಿಸಿ ನುರಿಸಲು ಅನುಕೂಲವಾಗುವಂತೆ ಕಾರ್ಖಾನೆಗಳು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಿದೆ. ಈ ಹಿನ್ನೆಲೆಯಲ್ಲಿ ಯಂತ್ರಕ್ಕೆ ಡಿಮಾಂಡ್ ಬರುತ್ತಿದ್ದು, ಮಂಡ್ಯದಲ್ಲಿ ಐವರು ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ಕೃಷಿ ಇಲಾಖೆ ಮೂಲಕ ‘ಹೈಟೆಕ್ ಹಾರ್ವೆಸ್ಟರ್ ಹಬ್’ ಯೋಜನೆ ಜಾರಿಗೊಳಿಸಿದೆ. ಇದಕ್ಕಾಗಿ ಸಹಾಯಧನ ನೀಡುತ್ತಿದೆ. ಯೋಜನೆಯಲ್ಲಿ ಭತ್ತ ಹಾಗೂ ಕಬ್ಬು ಬೆಳೆಗೆ ಯಂತ್ರಗಳನ್ನು ನೀಡಲಾಗುತ್ತಿದೆ. ಕಬ್ಬಿಗೆ ನೀಡಲಾಗುತ್ತಿರುವ ಯಂತ್ರದಿಂದ ಬಿತ್ತನೆ, ಹನಿ ನೀರಾವರಿ ಪೈಪ್ ಅಳವಡಿಕೆ, ತರಗು ನಿರ್ವಹಣೆ ಹಾಗೂ ಕಟಾವು ಮಾಡಬಹುದು. ಕಟಾವು ಯಂತ್ರ ಕನಿಷ್ಠ 96 ಲಕ್ಷ ರೂ.ನಿಂದ ಪ್ರಾರಂಭವಾಗಲಿದ್ದು, ಕಂಪನಿಗಳ ಬ್ರ್ಯಾಂಡ್ ಮೇಲೆ ದರದಲ್ಲಿ ಏರಿಳಿತವಿರಲಿದೆ. ಇದಕ್ಕೆ ಸರ್ಕಾರದಿಂದ 40 ಲಕ್ಷ ರೂ. ಸಹಾಯಧನ ಸಿಗಲಿದೆ. ಇದಕ್ಕೆ ಪೂರಕವಾಗಿ ಎರಡು ಫೀಡರ್ ಅವಶ್ಯಕತೆ ಇದ್ದು, ಒಂದಕ್ಕೆ 10.5 ಲಕ್ಷ ರೂ. ಇರಲಿದೆ. ಅಂತೆಯೇ ಎರಡು ಟ್ರ್ಯಾಕ್ಟರ್ ಬೇಕಾಗುತ್ತದೆ. ಬಿತ್ತನೆ ಯಂತ್ರದ ದರ 2 ಲಕ್ಷ ರೂ. ಇದ್ದು, ಸರ್ಕಾರದಿಂದ 1 ಲಕ್ಷ ರೂ. ನೆರವು ಸಿಗುತ್ತದೆ. ಇದೇ ಯಂತ್ರದಲ್ಲಿ ಹನಿ ನೀರಾವರಿ ಪೈಪ್ ಅಳವಡಿಸುವ ಸೌಲಭ್ಯವಿದೆ. ಹನಿ ನೀರಾವರಿ ಪದ್ಧತಿ ಅನುಷ್ಠಾನ ಮಾಡಿಕೊಂಡರೆ ಕೃಷಿ ಇಲಾಖೆಯಿಂದ ಶೇ.90 ಸಹಾಯಧನ ಸಿಗಲಿದೆ.
ಸಾಂಪ್ರದಾಯಿಕ ಪದ್ಧತಿಗೆ ಹೋಲಿಸಿದರೆ ಯಾಂತ್ರೀಕೃತ ಪದ್ಧತಿ ಅನುಷ್ಠಾನದಿಂದ ಪ್ರತಿ ಎಕರೆಗೆ 32,300 ರೂ. ಉಳಿತಾಯವಾಗಲಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಭೂಮಿ ಸಿದ್ಧತೆ ಉಳುಮೆ, ಸಾಲು ತೆಗೆಯುವುದು, ನಾಟಿ, ಕಳೆ ನಿರ್ವಹಣೆ, ಮುರಿ ಮಾಡುವುದು ಹಾಗೂ ಕಬ್ಬು ಕಟಾವು ಮಾಡಲು ಸಾಮಾನ್ಯವಾಗಿ 80,500 ರೂ. ವೆಚ್ಚ ತಗಲುತ್ತದೆ. ಇಷ್ಟೇ ಪ್ರಕ್ರಿಯೆಯನ್ನು ಯಾಂತ್ರೀಕೃತವಾಗಿ ಅನುಸರಿಸಿದರೆ 48,200 ರೂ. ತಗುಲುತ್ತದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಮುಖ್ಯವಾಗಿ ಏಕಕಾಲದಲ್ಲಿ ಕಟಾವು ಮಾಡುತ್ತದೆ. ಗರಿ ಮತ್ತು ತರಗನ್ನು ಪುಡಿ ಮಾಡಿ ಭೂಮಿಗೆ ಹರಡುತ್ತದೆ. ತೊಂಡೆಯನ್ನು ಕತ್ತರಿಸುತ್ತದೆ. ಕಬ್ಬನ್ನು ಸಣ್ಣ-ಸಣ್ಣ ತುಂಡುಗಳನ್ನಾಗಿಸುತ್ತದೆ. ಬಳಿಕ ಇನ್ಫಿಲ್ಟರ್ ಟ್ರ್ಯಾಕ್ಟರ್ಗೆ ತುಂಬುತ್ತದೆ. ಮುಖ್ಯವಾಗಿ ಯಂತ್ರದಿಂದ ಕಬ್ಬು ಕಟಾವು ಮಾಡಿಸಬೇಕಾದರೆ ಅದಕ್ಕೆ ತಕ್ಕಂತೆ 4 ರಿಂದ ನಾಲ್ಕೂವರೆ ಪಟದ ಅಂತರದಲ್ಲಿ ಬಿತ್ತನೆ ಮಾಡಿರಬೇಕು.