ಬೆಂಗಳೂರು: ಇ-ವಹಿವಾಟು ನಡೆಸುವ ಫ್ಲಿಪ್ಕಾರ್ಟ್ ಸಹಯೋಗದಲ್ಲಿ ಆನ್ಲೈನ್ ಮೂಲಕ ಮಾವು ಮಾರಾಟ ಮಾಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ನಾರಾಯಣ ಗೌಡ ಸಮ್ಮುಖದಲ್ಲಿ ಮಾವು ಮಂಡಳಿ ಹಾಗೂ ಫ್ಲಿಪ್ಕಾರ್ಟ್ ನಡುವೆ ಒಡಂಬಡಿಕೆ ನಡೆಯಿತು. ಮುಂದಿನ 45 ದಿನಗಳಲ್ಲಿ ಪ್ರಾಯೋಗಿಕವಾಗಿ ರೈತರ ಮಾವಿನ ಹಣ್ಣನ್ನು ಫ್ಲಿಪ್ಕಾರ್ಟ್ ಮಾರಾಟ ಮಾಡಲಿದೆ.
ರಾಜ್ಯದ 1.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಈ ವರ್ಷ 8 ಲಕ್ಷ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ. ಲಾಕ್ಡೌನ್ ಕಾರಣದಿಂದ ಮಾರುಕಟ್ಟೆ ಸಮಸ್ಯೆಯಾಗಿದ್ದು, ರೈತರಿಗೆ ನೆರವಾಗುವ ಉದ್ದೇಶದಿಂದ ಇ-ಕಾಮರ್ಸ್ ವೇದಿಕೆ ಬಳಸಿಕೊಳ್ಳಲು ಪ್ರಯೋಗ ಮಾಡಲಾಗಿದೆ. | ರಾಜೇಂದ್ರ ಕುಮಾರ್ ಕಠಾರಿಯಾ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ
ನಾರಾಯಣಗೌಡ ಮಾತನಾಡಿ, ಈ ವ್ಯಾಪಾರ ಸೂತ್ರದಲ್ಲಿ ಬೆಳೆಗಾರನೇ ಬೆಲೆ ನಿಗದಿಮಾಡುತ್ತಾನೆ. ಮಧ್ಯವರ್ತಿಗಳ ಪಾತ್ರ ಇರುವುದಿಲ್ಲ, ಇತಿಹಾಸದಲ್ಲೆ ಮೊದಲ ಬಾರಿಗೆ ಇಂತಹ ಅವಕಾಶ ರೈತರಿಗೆ ಒದಗಿಸಲಾಗಿದೆ. ಇದು ಪ್ರಾಯೋಗಿಕ. ಇದರಲ್ಲಿ ಇರುವ ನ್ಯೂನತೆ ಸರಿಪಡಿಸಿ ಸುಧಾರಣೆ ಮಾಡುತ್ತೇವೆ ಎಂದರು. ರೈತರಿಗೆ ಅನುಕೂಲವಾಗುವ ಪಲ್ಪ್ (ಮಾವು ತಿರುಳು) ಮಾರುಕಟ್ಟೆ ನಿರ್ವಿುಸುವ ಬಗ್ಗೆಯೂ ಚಿಂತನೆ ಇದೆ. ಕೃಷಿ ಉತ್ಪನ್ನ ಹಾಳಾಗದಂತೆ ಕಾಪಾಡಲು ಶೈತ್ಯಾಗಾರ ಸ್ಥಾಪನೆಗೆ ಸಿಎಂ ಮಂಜೂರಾತಿ ನೀಡಿದ್ದಾರೆ ಎಂದು ಹೇಳಿದರು.
ಉಚಿತ ಸೇವೆ ನೀಡಬೇಕೆಂದು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯ ಪ್ರಸ್ತಾಪಿಸಿದರಾದರೂ ಪ್ಲಿಪ್ಕಾರ್ಟ್ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಕನಿಷ್ಠ ಸೇವಾ ಶುಲ್ಕದೊಂದಿಗೆ ಗ್ರಾಹರಿಕೆ ಮಾವು ತಲುಪಿಸಲಾಗುತ್ತದೆ ಎಂದು ಫ್ಲಿಪ್ಕಾರ್ಟ್ ಪ್ರಮುಖ ಹೇಳಿದರು.
5 ಪ್ರಮುಖ ತಳಿ ಗ್ರಾಹಕರಿಗೆ ಲಭ್ಯ: ಪ್ರಾರಂಭಿಕವಾಗಿ ಹತ್ತು ರೈತ ಉತ್ಪಾದಕ ಸಂಸ್ಥೆಗಳನ್ನು ಗುರುತಿಸಲಾಗಿದೆ. ಬೆಳೆಗಾರರೂ ಸಹ ಪ್ಲಿಪ್ಕಾರ್ಟ್ ಪೋರ್ಟಲ್ನಲ್ಲಿ ಹೆಸರು ನೊಂದಾಯಿಸಿ, ಉತ್ಪನ್ನದ ವಿವರ ನಮೂದಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ಲಿಪ್ಕಾರ್ಟ್ ಮುಖ್ಯ ಕಾರ್ಪೆರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್ ಹೇಳಿದರು.ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದಂತೆ ಮಾವಿನ ಹಣ್ಣಿನ ಬಾಕ್ಸ್ಗಳನ್ನು ಅಂಚೆ ಮೂಲಕ ಗ್ರಾಹಕರಿಗೆ ಕಳುಹಿಸಲಾಗುತ್ತದೆ. ಸದ್ಯಕ್ಕೆ ಬೆಂಗಳೂರು, ಕೋಲಾರ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ರೈತ ಉತ್ಪಾದಕ ಸಂಸ್ಥೆಗಳು (ಎಫ್ಪಿಒ) ಮಾರಾಟಗಾರರಾಗಿ ಪ್ಲಿಪ್ಕಾರ್ಡ್ ವೇದಿಕೆಯಲ್ಲಿ ಗುರುತಿಸಲಾಗಿದ್ದು, ಐದು ಪ್ರಮುಖ ತಳಿಯ ಹಣ್ಣು ಮೂರು ಕೆಜಿ ಪ್ಯಾಕ್ನಲ್ಲಿ ಗ್ರಾಹಕರಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.