ವಾಣಿಜ್ಯ

VIDEO|ಥಾರ್ ಹೊಸ ಅವತಾರ:​ ಅಕ್ಟೋಬರ್ 2ರಂದು ಮಾರುಕಟ್ಟೆಗೆ

ಮುಂಬೈ: ಮಹಿಂದ್ರಾ ಥಾರ್​ ನ ಸುಧಾರಿತ ಹೊಸ ಅವತಾರದ ರೂಪವನ್ನು ಮಹಿಂದ್ರಾ ಆ್ಯಂಡ್ ಮಹಿಂದ್ರಾ ಕಂಪನಿ ಶನಿವಾರ ಅನಾವರಣಗೊಳಿಸಿದೆ. ಹೊಸ ವಿನ್ಯಾಸ, ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಹೊಚ್ಚ ಹೊಸ ಲುಕ್​ನೊಂದಿಗೆ ಥಾರ್ ಗಮನಸೆಳೆದಿದೆ. ಈ ಹೊಸ ವಾಹನ ಬಿಎಸ್​-6 ಮಾದರಿಯದಾಗಿದ್ದು, 2.0 ಲೀಟರ್​ ಎಂಸ್ಟಾಲಿಯನ್​ ಟಿಜಿಡಿಐ ಪೆಟ್ರೋಲ್ ಇಂಜಿನ್ ಹಾಗೂ 2.2 ಲೀಟರ್ ಎಂಹಾಕ್​ ಡೀಸೆಲ್ ಇಂಜಿನ್​ ನಲ್ಲಿ ಲಭ್ಯವಿದೆ. ಹೊಸ ಥಾರ್ ಅಕ್ಟೋಬರ್ ಎರಡರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಅತ್ಯಾಧುನಿಕ ಥಾರ್​ ಅನ್ನು ಅನಾವರಣಗೊಳಿಸುವ ಮೂಲಕ ನಾವು ಇತಿಹಾಸವನ್ನು ಮರುಸೃಷ್ಟಿಸಲು ಹೊರಟಿದ್ದೇವೆ. ವಾಹನ ಕ್ಷೇತ್ರದಲ್ಲಿ ಈ ಮಾಡೆಲ್ ಬಲವಾದ ಛಾಪು ಮೂಡಿಸಿದ್ದು, ಮಹಿಂದ್ರಾದ ಹೆಸರನ್ನು ಎತ್ತಿಹಿಡಿದಿದೆ. ಇದೀಗ ಮತ್ತೊಮ್ಮೆ ಅದನ್ನು ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಪವನ್ ಗೋಯೆಂಕಾ ತಿಳಿಸಿದ್ದಾರೆ.

ಈ ಎಸ್​ಯುವಿಯ ಸಂಪೂರ್ಣ ವಿನ್ಯಾಸ ಭಾರತದ್ದೇ ಆಗಿದ್ದು, ಇಲ್ಲೇ ಉತ್ಪಾದನೆಯನ್ನೂ ಹೊಂದಿದೆ. ಬಹುತೇಕ ಬಿಡಿಭಾಗಗಳು ಕೂಡ ಸ್ಥಳೀಯವಾಗಿ ಉತ್ಪಾದಿಸಿದ್ದೇ ಆಗಿದೆ. ಈ ಮಾಡೆಲ್​ ಅನ್ನು ಕಂಪನಿಯ ನಾಶಿಕ್ ಘಟಕದಲ್ಲಿ ಸಿದ್ಧಗೊಳಿಸಲಾಗಿದ್ದು, ಐಕಾನಿಕ್ ಮಾಡೆಲ್​ ಸದ್ಯದಲ್ಲೇ ಎಸ್​ಯುವಿ ಸೆಕ್ಟರ್​ನಲ್ಲಿ ಸದ್ದುಮಾಡಲಿದೆ ಎಂದು ಗೋಯೆಂಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರ ವಿನ್ಯಾಸದ ಲುಕ್​ಗೆ ಮೇಲಿನ ವಿಡಿಯೋ ಗಮನಿಸಬಹುದು. (ಏಜೆನ್ಸೀಸ್)