ನವದೆಹಲಿ: ಆರ್ಥಿಕವಾಗಿ ದಿವಾಳಿಯಾಗಿರುವ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಎಸ್ಬಿಐ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ ಕೂಡ ಕೇಂದ್ರ ಸರ್ಕಾರದ ಜತೆ ಕೈಜೋಡಿಸಿದೆ. ಒಂದು ಸಾವಿರ ಕೋಟಿ ರೂ. ಹೂಡಿಕೆ ಯೋಜನೆಗೆ ಐಸಿಐಸಿಐ ಬ್ಯಾಂಕ್ ಅನುಮೋದನೆಯನ್ನು ನೀಡಿದೆ.
ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹೂಡಿಕೆಯಿಂದಾಗಿ ಯೆಸ್ ಬ್ಯಾಂಕ್ನಲ್ಲಿ ಐಸಿಐಸಿಐ ಬ್ಯಾಂಕ್ ಷೇರು ಶೇ. 5ಕ್ಕಿಂತ ಹೆಚ್ಚಾಗಲಿದೆ ಎಂದು ಬ್ಯಾಂಕ್ ಗೊತ್ತುವಳಿಯಲ್ಲಿ ತಿಳಿಸಿದೆ.
ಯೆಸ್ ಬ್ಯಾಂಕ್ನ ಶೇ. 49 ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಎಸ್ಬಿಐ ನಿರ್ಧಾರದ ಅಡಿಯಲ್ಲಿ ಇಂದು ಬೆಳಗ್ಗೆಯಷ್ಟೇ ಕೇಂದ್ರ ಸಂಪುಟ ಯೆಸ್ ಬ್ಯಾಂಕ್ ಮರುಸ್ಥಾಪನಾ ಯೋಜನೆಗೆ ಅನುಮೋದನೆಯನ್ನು ನೀಡಿತು. ಇದೇ ವೇಳೆ ಎಸ್ಬಿಐ 7,250 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಯೆಸ್ ಬ್ಯಾಂಕ್ನ ಷೇರುಗಳು 2ರಷ್ಟು ಏರಿಕೆ ಕಂಡು ಧನಾತ್ಮಕ ಫಲಿತಾಂಶ ತೋರಿತು.
ಎಸ್ಬಿಐ ಆರಂಭದಲ್ಲಿ 2,450 ಕೋಟಿ ರೂ. ಹೂಡುವುದಾಗಿ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ, 7,250 ಕೋಟಿ ರೂ. ಬೃಹತ್ ಮೊತ್ತವನ್ನು ಹೂಡುವುದಾಗಿ ಘೋಷಿಸಿರುವುದು ಹಳಿತಪ್ಪಿರುವ ಯೆಸ್ ಬ್ಯಾಂಕ್ ಮರಳಿ ತನ್ನ ಹಾದಿಯನ್ನು ಹಿಡಿಯಲು ನೆರವಾಗಲಿದೆ. (ಏಜೆನ್ಸೀಸ್)