ಹಳಿಯಾಳ: ಲಾಕ್ಡೌನ್ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದ ತಾಲೂಕಾಡಳಿತವು ಈ ಕ್ರಮವನ್ನು ಸೋಮವಾರ ಮುಂದುವರಿಸದ ಪರಿಣಾಮ ಮಾರ್ಕೆಟ್ನಲ್ಲಿ ಹೆಚ್ಚು ಜನಸಂದಣಿ ಉಂಟಾಯಿತು. ಇದರಿಂದ ತಾಲೂಕಿನಲ್ಲಿ ಲಾಕ್ಡೌನ್ ಸಡಿಲಗೊಳಿಸಿದಂತೆ ಕಂಡುಬಂತು.
ಲಾಕ್ಡೌನ್ ಘೊಷಣೆಯಾದ ದಿನದಿಂದ ಪಟ್ಟಣಕ್ಕೆ ಕಾಲಿಡದ ಹಳ್ಳಿಗಳ ಜನರಂತೂ ಖಾಸಗಿ ವಾಹನಗಳಲ್ಲಿ ಹಿಂಡು ಹಿಂಡಾಗಿ ಲಗ್ಗೆಯಿಟ್ಟಿದ್ದರಿಂದ ಮಾರ್ಕೆಟ್ ಭಾನುವಾರದ ಸಂತೆಯಾಗಿ ಕಂಡುಬಂತು. ಇತ್ತ ಶಾಲೆಗಳಲ್ಲಿಯೂ ಬಿಸಿಯೂಟದ ಪಡಿತರ ವಿತರಣೆ ಕಾರ್ಯ ಆರಂಭಗೊಂಡಿದ್ದರಿಂದ ಮಕ್ಕಳು, ಅವರ ಪಾಲಕರು ಶಾಲೆಗೆ ತೆರಳುತ್ತಿರುವುದರಿಂದ ಜನಸಂಚಾರ ಇನ್ನಷ್ಟು ಹೆಚ್ಚಾಯಿತು.
ಬೈಕ್ ಸವಾರರ ಹಾವಳಿ ಹೆಚ್ಚಾಗುತ್ತಿದ್ದರೂ ಬೀದಿಗಿಳಿಯದ ಪೊಲೀಸರು ಲಾಠಿಗೆ ಕೊಂಚ ವಿರಾಮ ನೀಡಿದ್ದರು. ಮಧ್ಯಾಹ್ನ ಒಂದು ಗಂಟೆ ರಸ್ತೆಗಿಳಿದು ಜನಸಂಚಾರ ನಿಯಂತ್ರಿಸಿದರು.
ವರ್ತಕರ ಸಭೆ: ಭಾನುವಾರ ಸಂಜೆ ಪಟ್ಟಣದ ಕಿರಾಣಿ ವರ್ತಕರು, ತಾಲೂಕಾಡಳಿತದ ಸಭೆ ಜರುಗಿತು. ಸಭೆಯಲ್ಲಿ ಕೈಗೊಂಡ ತೀರ್ವನದಂತೆ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಕಿರಾಣಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಈ ಕುರಿತು ಭಾನುವಾರ ರಾತ್ರಿಯೇ ರಿಕ್ಷಾ ಮೂಲಕ ಪಟ್ಟಣದೆಲ್ಲೆಡೆ ಘೊಷಣೆ ಮಾಡಲಾಗಿತ್ತು. ತಾಲೂಕಾಡಳಿತದ ಘೊಷಣೆಯನ್ನು ಕೇಳಿ ಸಾರ್ವಜನಿಕರು ಹಾಗೂ ಇಲ್ಲಿನ ಜನಪ್ರತಿನಿಧಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರೂ ನಿರ್ಧಾರದಿಂದ ಹಿಂದಕ್ಕೆ ಸರಿಯದ ವರ್ತಕರು ಸೋಮವಾರ ಅಂಗಡಿಗಳನ್ನು ತೆರೆದು ವ್ಯಾಪಾರ-ವಹಿವಾಟು ಆರಂಭಿಸಿದ್ದರು.
ವರ್ತಕರಿಗೆ ಹಿಡಿಶಾಪ: ವರ್ತಕರ ನಿಲುವು ಹಾಗೂ ಮಾರ್ಕೆಟ್ಗೆ ಧಾವಿಸುತ್ತಿರುವ ಜನಸಾಗರವನ್ನು ಕಂಡು ಪಟ್ಟಣದ ಜನಸೇವಕರು, ಪುರಸಭೆ ಸದಸ್ಯರ ನಿಯೋಗ ಮಿನಿವಿಧಾನ ಸೌಧಕ್ಕೆ ಆಗಮಿಸಿ ತಾಲೂಕಾಡಳಿತದ ಕ್ರಮವನ್ನು ಬಲವಾಗಿ ಖಂಡಿಸಿತು. ತಹಸೀಲ್ದಾರರೊಂದಿಗೆ ಸಭೆ ನಡೆಸಿದ ಸದಸ್ಯರು ಕರೊನಾ ಮೂರನೇ ಹಂತಕ್ಕೆ ತಲುಪುತ್ತಿರುವುದರಿಂದ ಜನಸಂಚಾರ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಬದಲು ತಾಲೂಕಾಡಳಿತ ನಿಯಮ ಸಡಿಲಗೊಳಿಸುತ್ತಿರುವುದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಇನ್ಮುಂದೆ ಲಾಕ್ಡೌನ್ ಮುಗಿಯುವರೆಗೂ ದಿನಸಿ ಹಾಗೂ ತರಕಾರಿ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಪುರಸಭೆಯಿಂದಲೇ ಮನೆ-ಮನೆಗೆ ದಿನಸಿ ಸಾಮಗ್ರಿ ಪೂರೈಸಬೇಕು ಎಂದು ಆಗ್ರಹಿಸಿದರು.
ಮಾರ್ಕೆಟ್ ಬಂದ್: ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ ಕಾರವಾರ ಎಸಿ ಎಂ. ಪ್ರಿಯಾಂಗಾ ತಾಲೂಕಿನಲ್ಲಿ ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಆರೋಗ್ಯ ರಕ್ಷಣಾ ಕಾರ್ಯಗಳು ಐಸೊಲೇಷನ್ ವಾರ್ಡ್ ಇತ್ಯಾದಿಗಳನ್ನು ಪರಿಶೀಲಿಸಿ, ತಾಲೂಕಾಡಳಿತದೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಮುಗಿಯುವವರೆಗೆ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಾರ್ಕೆಟ್ ಅನ್ನು ಕಡ್ಡಾಯವಾಗಿ ಬಂದ್ ಮಾಡಲಾಗುವುದು. ಕಿರಾಣಿ ವರ್ತಕರು ಮನೆಗಳಿಗೆ ದಿನಸಿ ಪೂರೈಸಲು ಮುಂದಾದರೆ ಅವರಿಗೆ ಪರವಾನಗಿ ನೀಡಲಾಗುವುದು. ಪುರಸಭೆ ಹಾಗೂ ಗ್ರಾ.ಪಂ. ಗಳ ಮೂಲಕ ಅಗತ್ಯದ ದಿನಸಿ ಸಾಮಗ್ರಿಯನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಕರೊನಾ ಮುಂಜಾಗ್ರತೆ ಕ್ರಮಕ್ಕಾಗಿ ಸರ್ಕಾರಿ ಆಸ್ಪತ್ರೆ, ಯಾತ್ರಿ ನಿವಾಸ, ಬಿ.ಸಿ.ಎಂ. ಇಲಾಖೆಯ ವಸತಿ ನಿಲಯದಲ್ಲಿ ರೋಗಪೀಡಿತರಿಗಾಗಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.