ನವದೆಹಲಿ: ಕರೊನಾ ವೈರಸ್ ನಿರ್ಮೂಲನೆಗಾಗಿ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿರುವುದರಿಂದ ವಾಹನ ಸಂಚಾರ ಸೇರಿದಂತೆ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿರುವುದರಿಂದ ರಾಷ್ಟ್ರದಲ್ಲಿ ಇಂಧನ ಬಳಕೆ ಹಾಗೂ ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ.
ಎಲ್ಪಿಜಿ ಹೊರತುಪಡಿಸಿ ಪೆಟ್ರೋಲಿಯಂ ಉತ್ಪನ್ನದಲ್ಲಿ ಏಪ್ರಿಲ್ ಮೊದಲಾರ್ಧದಲ್ಲಿ ಶೇ 50 ರಷ್ಟು ದಾಖಲೆ ಕುಸಿತಕಂಡಿದೆ. ಪ್ರಾವಿಸನಲ್ ಇಂಡಸ್ಟ್ರಿ ಡಾಟಾ ಪ್ರಕಾರ ಏಪ್ರಿಲ್ ಮೊದಲಾರ್ಧದಲ್ಲಿ ಪೆಟ್ರೋಲ್ ಬಳಕೆಯಲ್ಲಿ ಶೇ. 64 ಹಾಗೂ ಡೀಸೆಲ್ನಲ್ಲಿ 61 ರಷ್ಟು ಇಳಿಕೆಯಾಗಿದೆ.
ಅವಿಯೇಶನ್ ಟರ್ಬೈನ್ ಫ್ಯುಯೆಲ್(ಎಟಿಎಫ್) ಅಥವಾ ವಿಮಾನಯಾನ ಇಂಧನ ಬಳಕೆಯಲ್ಲಿ ಬರೋಬ್ಬರಿ 94 ರಷ್ಟು ದಾಖಲೆ ಕುಸಿತ ಕಂಡಿದೆ. ವಿದೇಶಗಳಿಂದಲೇ ಕರೊನಾ ಜಾಗತಿಕವಾಗಿ ಹರಡಿರುವುದರಿಂದ ಲಾಕ್ಡೌನ್ಗೂ ಮುಂಚಿತವಾಗಿಯೇ ಎಲ್ಲ ವಾಯಯಾನಗಳನ್ನು ಸ್ಥಗಿತಗೊಳಿಸಿರುವುದರ ಪರಿಣಾಮ ದಾಖಲೆ ಪ್ರಮಾಣದಲ್ಲಿ ಇಂಧನ ಬಳಕೆ ಕಡಿಮೆಯಾಗಿದೆ.
ಇವುಗಳಿಗೆ ಎಲ್ಪಿಜಿ ಬಳಕೆ ಪ್ರಮಾಣ ತದ್ವಿರುದ್ಧವಾಗಿದ್ದು, ಎಲ್ಪಿಜಿ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಲಾಕ್ಡೌನ್ನಿಂದ ಎಲ್ಲರೂ ಮನೆಯಲ್ಲೇ ಉಳಿದಿರುವುದರಿಂದ ಬಡವರಿಗಾಗಿ ಉಚಿತ ಸಿಲಿಂಡರ್ ಸೌಲಭ್ಯವನ್ನು ಸರ್ಕಾರ ಒದಗಿಸಿದ್ದು, ಏಪ್ರಿಲ್ 1 ರಿಂದ 15ರವರೆಗೆ ಎಲ್ಪಿಜಿ ಬಳಕೆಯಲ್ಲಿ 21 ರಷ್ಟು ಏರಿಕೆಯಾಗಿದೆ.
ಒಟ್ಟಾರೆ ಪೆಟ್ರೋಲಿಯಂ ಉತ್ಪನ್ನ ಮಾರಾಟ 50 ರಷ್ಟು ಕುಸಿದಿದೆ ಎಂದು ಪ್ರಾವಿಸನಲ್ ಇಂಡಸ್ಟ್ರಿ ಡಾಟಾ ತಿಳಿಸಿದೆ. ಡಾಟಾವೂ ಮೂರು ಸಾರ್ವಜನಿಕ ವಲಯದ ಇಂಧನ ಮಾರುಕಟ್ಟೆ ಕಂಪನಿಗಳಿಗೆ ಸಂಬಂಧಿಸಿದ್ದಾಗಿದೆ.
ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಭಾರತವು 2.4 ಮಿಲಿಯನ್ ಟನ್ ಪೆಟ್ರೋಲ್ ಮತ್ತು 7.3 ಮಿಲಿಯನ್ ಟನ್ ಡೀಸೆಲ್ ಹಾಗೂ 6,45,000 ಟನ್ ಎಟಿಎಫ್ ಅನ್ನು ಬಳಕೆ ಮಾಡಿತ್ತು. ಕಳೆದ ಮಾರ್ಚ್(2020) ತಿಂಗಳಲ್ಲಿ ಶೇ. 17.79 ರೊಂದಿಗೆ 16.08 ಮಿಲಿಯನ್ಸ್ ಟನ್ ಪೆಟ್ರೋಲಿಯಂ ಉತ್ಪನ್ನ ಬಳಕೆ ಮಾಡಿತ್ತು. (ಏಜೆನ್ಸೀಸ್)