ಮುಂಬೈ: ವಾಣಿಜ್ಯ ಕ್ಷೇತ್ರದಲ್ಲಿ 2021ರಲ್ಲಿ ದಾಖಲಾದ ಮೊದಲ ಬ್ರೇಕ್ ಅಪ್ ಸ್ಟೋರಿ ಇದು. ದೇಶದ ಪ್ರಮುಖ ವಾಹನ ಉತ್ಪಾದಕ ಕಂಪನಿ ಮಹಿಂದ್ರಾ ಲಿಮಿಟೆಡ್ ಜತೆಗಿನ ಪ್ರಸ್ತಾವಿತ ಜಂಟಿ ಪಾಲುದಾರಿಕೆಯಿಂದ ಫೋರ್ಡ್ ಮೋಟಾರ್ ಕಂಪನಿ ಹಿಂದೆ ಸರಿದಿದೆ.
ಕರೊನಾ ಸಂಕಷ್ಟದ ಕಾರಣ ಜಂಟಿ ಪಾಲುದಾರಿಕೆಯ ವ್ಯವಹಾರಗಳ ಮರುಪರಿಶೀಲನೆ ಮಾಡುತ್ತಿರುವುದಾಗಿ ನಿನ್ನೆಯಷ್ಟೇ ಎರಡೂ ಕಂಪನಿಗಳು ತಿಳಿಸಿದ್ದವು. ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಕ್ಷೇತ್ರದಲ್ಲಿ ದೇಶದ ಮುಂಚೂಣಿ ಉತ್ಪಾದಕ ಸಂಸ್ಥೆ ಮಹೀಂದ್ರಾ ಜತೆಗೆ ಜಂಟಿ ಪಾಲುದಾರಿಕೆಯಲ್ಲಿ ಸ್ಥಳೀಯವಾಗಿ ಎರಡು ಫ್ಯಾಕ್ಟರಿಗಳನ್ನು ಸ್ಥಾಪಿಸಿ ತನ್ನ ಸ್ಥಳೀಯ ಕಾರ್ಯಾಚರಣೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಒಂದು ವರ್ಷದ ಹಿಂದೆ ಮಾಡಿಕೊಂಡ ಒಪ್ಪಂದ ಇದಾಗಿತ್ತು. ನಿನ್ನೆಯ ಮರುಪರಿಶೀಲನಾ ಸಭೆಯ ನಂತರದಲ್ಲಿ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಫೋರ್ಡ್ ಘೋಷಿಸಿದೆ.
ಜಗತ್ತಿನ ನಾಲ್ಕನೇ ಅತಿದೊಡ್ಡ ಕಂಪನಿ ವಾಹನ ಮಾರುಕಟ್ಟೆಯಾಗಿರುವ ಭಾರತದಲ್ಲಿ ಛಾಪು ಮೂಡಿಸುವುದಕ್ಕೆ ಕಳೆದ ಎರಡು ದಶಕಗಳಿಂದ ಒದ್ದಾಡುತ್ತಿದ್ದ ಫೋರ್ಡ್ ಕಂಪನಿಯ ಭವಿಷ್ಯದ ಚಿತ್ರಣ ಅಸ್ಪಷ್ಟವಾಗಿದೆ. ಈ ನಡುವೆ, ಭಾರತವೂ ಸೇರಿ ಜಗತ್ತಿನಾದ್ಯಂತ ಇರುವ ವಾಹನ ಮಾರುಕಟ್ಟೆಯಲ್ಲಿ ಕಂಪನಿ ಸಾಧನೆಯ ಮೌಲ್ಯಮಾಪನ ನಡೆಸುತ್ತಿರುವುದಾಗಿ ಫೋರ್ಡ್ ಹೇಳಿಕೊಂಡಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..