ರುದ್ರಣ್ಣ ಹರ್ತಿಕೋಟೆ
ಯಾವ ಕ್ಷೇತ್ರದಲ್ಲಿ ನವೋದ್ಯಮ * ಕೃಷಿ ಯಂತ್ರೋಪಕರಣ * ಕೃಷಿ ಉತ್ಪನ್ನಗಳ ಆನ್ಲೈನ್ ಮಾರಾಟ * ಸೂಕ್ಷ್ಮ ನೀರಾವರಿ * ತಂತ್ರಜ್ಞಾನ ಒದಗಿಸುವುದು * ಸಾವಯವ ಕೃಷಿ * ಸಿರಿಧಾನ್ಯಗಳು * ಮಾರುಕಟ್ಟೆ ತಂತ್ರಜ್ಞಾನ * ಡಾಟಾ ವಿಶ್ಲೇಷನೆ ಮೂಲಕ ಅನುಕೂಲ * ತರಕಾರಿ, ಹಣ್ಣು, ಮಾಂಸ ಸರಬರಾಜು * ರಾಸಾಯನಿಕ ಸರಬರಾಜು * ಹೈನುಗಾರಿಕೆ * ಸ್ಮಾರ್ಟ್ ಪೌಲ್ಟ್ರಿ * ಆಹಾರ ಸಂಸ್ಕರಣೆ * ತೋಟದ ಬೆಳೆಗಳು * ಇತ್ಯಾದಿ
ಬೆಂಗಳೂರು: ಭೂ ಸುಧಾರಣೆ, ಎಪಿಎಂಸಿ ವಿಧೇಯಕಗಳ ತಿದ್ದುಪಡಿ ಬಗ್ಗೆ ಅನ್ನದಾತರ ಆಕ್ರೋಶ ಭುಗಿಲೆದ್ದಿರುವ ಸಂದರ್ಭದಲ್ಲೇ ರೈತರನ್ನು ರೈತೋದ್ಯಮಿಗಳನ್ನಾಗಿಸುವ ಹೊಸ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೃಷಿ ಕ್ಷೇತ್ರದಲ್ಲೂ ನವೋದ್ಯಮಗಳ ಸ್ಥಾಪನೆಗೆ ಯೋಜನೆ ರೂಪಿಸುತ್ತಿರುವ ಸರ್ಕಾರ ಅದಕ್ಕಾಗಿ ಪ್ರತ್ಯೇಕವಾದ ‘ಕೃಷಿ ನವೋದ್ಯಮ ನೀತಿ’ಯನ್ನು ಸಾಕಷ್ಟು ಆಶಾದಾಯಕ ಅಂಶಗಳೊಂದಿಗೆ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
2014ರಿಂದ ಇಡೀ ದೇಶದಲ್ಲಿ ನವೋದ್ಯಮ ಯುಗ ಆರಂಭವಾಯಿತು. ದೇಶದಲ್ಲಿ 28 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳು ನವೋದ್ಯಮ ನೀತಿ ರೂಪಿಸಿಕೊಂಡಿವೆ. ದೇಶಾದ್ಯಂತ ಒಟ್ಟಾರೆ 59300 ಸ್ಟಾರ್ಟಪ್ಗಳಿವೆ. ಆದರೆ, ಅದರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದವು 474 ಮಾತ್ರ.
ಬೆಂಗಳೂರಿನಲ್ಲೇ 1000ಕ್ಕೂ ಅಧಿಕ ಸ್ಟಾರ್ಟಪ್ಗಳಿವೆ. ಆದರೆ, ರಾಜ್ಯ ಸರ್ಕಾರ 100 ನವೋದ್ಯಮಗಳಿಗೆ ಅನುಮತಿ ಕೊಟ್ಟರೆ ಅದರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತೂ ಸಹ ಸ್ಥಾಪನೆಯಾಗುತ್ತಿಲ್ಲ. ಆದ್ದರಿಂದಲೇ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಶೇಷ ಆಸಕ್ತಿ ವಹಿಸಿ ಕೃಷಿ ನವೋದ್ಯಮ ನೀತಿ ಸ್ಥಾಪನೆಗೆ ಮುಂದಾಗಿದ್ದಾರೆ. ಪ್ರತ್ಯೇಕ ಕೃಷಿ ಸ್ಟಾರ್ಟಪ್ ನೀತಿ ರಾಜ್ಯದಲ್ಲೇ ಮೊದಲು ರಚನೆಯಾಗುತ್ತಿರುವುದು ವಿಶೇಷ.
ಎಲ್ಲೆಲ್ಲಿ ಸ್ಥಾಪನೆ? 2ನೇ ಹಂತದ ನಗರಗಳಾದ ಮೈಸೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಬೆಳಗಾವಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ 2ನೇ ಹಂತದ ನಗರಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಗುರಿ ಇದೆ.
ಏನಿದು ನೀತಿ? ಕೃಷಿಕರಿಗೆ ಅನುಕೂಲವಾಗುವ ಜತೆಗೆ ಕೃಷಿ ಕ್ಷೇತ್ರದಲ್ಲೂ ಉದ್ಯೋಗಗಳು ಸ್ಥಾಪನೆಯಾಗಬೇಕು. ಕರೊನಾದಿಂದ ಉದ್ಯೋಗ ಕಳೆದುಕೊಂಡ ಯುವ ಸಮುದಾಯ ಕೃಷಿಯ ಮೂಲಕ ಹೊಸ ಬದುಕು ಕಟ್ಟಿಕೊಳ್ಳಬೇಕೆಂಬ ಕಾರಣ ಹಾಗೂ ಈ ವಲಯದಲ್ಲಿ ಹೆಚ್ಚಿನ ಉದ್ಯಮಗಳು ಸ್ಥಾಪನೆಯಾಗಬೇಕು ಎಂಬ ಉದ್ದೇಶದಿಂದ ಕೃಷಿ ನವೋದ್ಯಮ ನೀತಿ ರಚಿಸಲಾಗುತ್ತಿದೆ. ‘ಪ್ರಯೋಗಾಲಯದಿಂದ ಜಮೀನಿಗೆ’ ಎಂಬ ಪರಿಕಲ್ಪನೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಉದ್ಯಮಗಳ ಸ್ಥಾಪನೆಗೆ ಪೂರಕ ಪರಿಸರ ನಿರ್ಮಾಣ ಮಾಡುವುದು ಹಾಗೂ ಅದಕ್ಕೆ ಪೂರಕವಾಗಿ ಅಗ್ರಿ ಇನ್ಕ್ಯೂಬೇಷನ್ ಕೇಂದ್ರಗಳನ್ನು ಸ್ಥಾಪನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಇನ್ಕ್ಯೂಬೇಷನ್ ಕೇಂದ್ರಗಳಲ್ಲಿ ಹೊಸದಾಗಿ ನವೋದ್ಯಮ ಸ್ಥಾಪಿಸುವವರಿಗೆ ತಾಂತ್ರಿಕ ನೆರವು ನೀಡಿಕೆ ಸೇರಿ ಎಲ್ಲ ಸೌಲಭ್ಯ ನೀಡಲಾಗುತ್ತದೆ. ರಾಜ್ಯದಲ್ಲಿ ತಜ್ಞರು, ಯುವಕರು, ಆಸಕ್ತ ಕೃಷಿಕರನ್ನು ತಮ್ಮದೇ ಆದ ಆವಿಷ್ಕಾರ ಹಾಗೂ ಕ್ರಿಯಾತ್ಮಕ ಪರಿಕಲ್ಪನೆಯೊಂದಿಗೆ ಉದ್ಯಮಿಗಳಾಗಿ ಮಾಡಬೇಕೆಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ಗುರಿ ಮತ್ತು ಉದ್ದೇಶ ನೂತನ ಉತ್ಪನ್ನಗಳ ಉತ್ಪಾದನೆಗೆ ಅವಕಾಶ ರೂಪಿಸುವುದು, ಹೆಚ್ಚಿನ ಉದ್ಯಮಗಳು ಬಂದು ಉದ್ಯೋಗ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದು.
ಸಮಿತಿ ರಚನೆ ಕೃಷಿ ನವೋದ್ಯಮ ನೀತಿ ರಚನೆಗಾಗಿ ಸರ್ಕಾರ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್. ಅಯ್ಯಪ್ಪನ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಬೆಂಗಳೂರು ಕೃಷಿ ವಿವಿಯ ನಿವೃತ್ತ ಕುಲಸಚಿವ ಡಾ. ಎ.ಬಿ. ಪಾಟೀಲ್ ಸಂಚಾಲಕರಾಗಿರುವ ಸಮಿತಿಯಲ್ಲಿ 11 ಸದಸ್ಯರಿದ್ದಾರೆ. ಈ ಸಮಿತಿಗೆ 2 ತಿಂಗಳ ಕಾಲಾವಕಾಶ ನೀಡಲಾಗಿದೆ.
ಸಮಿತಿಯ ಕರ್ತವ್ಯ
* 2020-25ರ ಅವಧಿಯ ಕೃಷಿ ನವೋದ್ಯಮ ನೀತಿಯನ್ನು ರೂಪಿಸುವುದು
* ನೀತಿಯ ಕಾರ್ಯಾಚರಣೆಗೆ ಮಾರ್ಗಸೂಚಿಗಳನ್ನು ನಿಗದಿ ಮಾಡುವುದು
* ಸರ್ಕಾರದಿಂದ ಪ್ರತಿ ಉದ್ಯಮಕ್ಕೆ ಎಷ್ಟು ಸೀಡ್ ಮನಿ ನೀಡಬೇಕೆಂಬುದನ್ನು ನಿರ್ಧರಿಸುವುದು
* ತಂತ್ರಜ್ಞಾನ ಹೇಗೆ ಬಳಸಬೇಕೆಂಬುದರ ಬಗ್ಗೆ ಗಮನ ಹರಿಸುವುದು
* ನೂತನ ಉತ್ಪನ್ನ, ಮಾರುಕಟ್ಟೆ ಬಗ್ಗೆಯೂ ಗಮನ ಹರಿಸುವುದು
ಉದ್ಯೋಗ ಸೃಷ್ಟಿ ಎಷ್ಟು?
* ರಾಜ್ಯದಲ್ಲಿ 20 ಸಾವಿರ ಸ್ಟಾರ್ಟಪ್ಗಳ ಮೂಲಕ 6 ಲಕ್ಷ ನೇರ ಹಾಗೂ 12 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದೆ. ಅದರಲ್ಲಿ ಕೃಷಿ ಸ್ಟಾರ್ಟಪ್ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳು ಸ್ಥಾಪನೆಯಾಗಬೇಕೆಂಬ ಉದ್ದೇಶ ಸರ್ಕಾರದ್ದಾಗಿದೆ.
ಸವಾಲುಗಳ ನಿರ್ವಹಣೆ: ಕೃಷಿ ಕ್ಷೇತ್ರದಲ್ಲಿ ಅನೇಕ ಸವಾಲುಗಳಿವೆ. ತ್ವರಿತವಾಗಿ ಮಣ್ಣು, ರೋಗ, ಕೀಟಬಾಧೆಯ ಪರೀಕ್ಷೆಗಳು ನಡೆಯುತ್ತಿಲ್ಲ. ತ್ವರಿತವಾಗಿ ಗ್ರೇಡಿಂಗ್ ಆಗುತ್ತಿಲ್ಲ. ಇ ಮಾರುಕಟ್ಟೆ ವ್ಯವಸ್ಥೆ ಸರಿಯಾಗುತ್ತಿಲ್ಲ. ನವೋದ್ಯಮಗಳ ಸ್ಥಾಪನೆಯಿಂದ ಪರಿಹಾರ ಸಾಧ್ಯವಿದೆ.