ಬೆಂಗಳೂರು : ಕರೊನಾ ಸಂಕಷ್ಟದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರಿಗೆ ಇದೀಗ ಮತ್ತೊಂದು ಶಾಕ್ ಕಾದಿದೆ. ಪೆಟ್ರೋಲ್-ಡೀಸೆಲ್ಗಳ ನಿಯಮಿತ ಬೆಲೆ ಏರಿಕೆಗಳಿಂದ ಅಗತ್ಯವಸ್ತುಗಳ ಬೆಲೆ ಏರುವ ಸಮಸ್ಯೆ ಉಂಟಾಗಿರುವುದರೊಂದಿಗೆ ಇದೀಗ ವಿದ್ಯುತ್ ದರಲ್ಲೂ ಏರಿಕೆಯಾಗಿದೆ.
2021-22 ಸಾಲಿನ ವಿದ್ಯುತ್ ದರ ಪರಿಷ್ಕರಣೆಯ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಇಂದು ಮಾಹಿತಿ ನೀಡಿದೆ. ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವ್ಯಾಪ್ತಿಯ ಗ್ರಾಹಕರಿಗೆ ಅನ್ವಯಿಸುವಂತೆ ಪ್ರತಿ ಯುನಿಟ್ಗೆ 30 ಪೈಸೆಯಂತೆ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ.
ಈ ಪರಿಷ್ಕೃತ ದರವು 2021 ರ ಏಪ್ರಿಲ್ 1 ರಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿದೆ. ಆದಾಗ್ಯೂ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಏಪ್ರಿಲ್ ಮತ್ತು ಮೇ ತಿಂಗಳ ಹೆಚ್ಚುವರಿ ಬಿಲ್ ಮೊತ್ತವನ್ನು ಬಡ್ಡಿ ವಿಧಿಸದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ವಸೂಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಆರ್ಥಿಕ ವರ್ಷ 2022ಕ್ಕೆ ಆದಾಯ ಕೊರತೆಯಿರುವುದರಿಂದ ಈ ಬಾರಿ ಪ್ರತಿ ಯುನಿಟ್ಗೆ 83 ಪೈಸೆಯಿಂದ 168 ಪೈಸೆವರೆಗೂ ದರ ಏರಿಕೆ ಕೋರಿ ವಿವಿಧ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅಂದರೆ ಸರಾಸರಿ 135 ಪೈಸೆಯಷ್ಟು ಹೆಚ್ಚಳಕ್ಕೆ(ಸರಾಸರಿ ಶೇ. 17.31 ಏರಿಕೆಗೆ) ಈ ವಿದ್ಯುತ್ ಸರಬರಾಜು ಕಂಪನಿಗಳು ಬೇಡಿಕೆ ಇಟ್ಟಿದ್ದವು. ಆದರೆ ಆಯೋಗವು ಅದನ್ನು ಶೇ. 3.84 ರಷ್ಟಕ್ಕೆ ಮಾತ್ರ ಮಿತಗೊಳಿಸಿದೆ. ತನ್ಮೂಲಕ ಪ್ರತಿ ಯುನಿಟ್ಗೆ 30 ಪೈಸೆ ಏರಿಸಿ ಆದೇಶ ಹೊರಡಿಸಿದೆ ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ: ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ
ಒಳ್ಳೆಯ ಅಂಶವೆಂದರೆ ಕಡಿಮೆ ಮತ್ತು ಮಧ್ಯಮ ವರ್ಗದ ಗೃಹ ಬಳಕೆ ಗ್ರಾಹಕರ ವಿದ್ಯುಚ್ಛಕ್ತಿ ಬಳಕೆಯನ್ನು ಉತ್ತೇಜಿಸಲು ಗೃಹ ಬಳಕೆಯ ಮೊದಲ ಸ್ಲಾಟ್ಅನ್ನು 30 ಯೂನಿಟ್ಗಳಿಂದ 50 ಯೂನಿಟ್ಗಳಿಗೆ ಏರಿಸಲಾಗಿದೆ. ಅಂದರೆ ಆರಂಭಿಕ ದರವು ಈ ಮುನ್ನ 0-30 ಯೂನಿಟ್ಗಳವರೆಗೆ ಅನ್ವಯವಾಗುತ್ತಿದ್ದುದು ಈಗ 0-50 ಯೂನಿಟ್ಗಳವರೆಗೆ ಅನ್ವಯಿಸಲಿದೆ.