ವಾಣಿಜ್ಯ

VIDEO| ಹಾರುವ ಕಾರು ಭಾರತಕ್ಕೂ ಬಂತು: ಗುಜರಾತ್​ನಲ್ಲಿ ಮೊದಲ ಉತ್ಪಾದನಾ ಘಟಕ, ಶೀಘ್ರವೇ ಶುರು!

ಅಹಮದಾಬಾದ್​: ನೆದರ್​ಲ್ಯಾಂಡ್​ ಮೂಲದ ಹಾರುವ ಕಾರು ತಯಾರಿಕಾ ಸಂಸ್ಥೆ ಪಾಲ್​-ವಿ(ಪರ್ಸನಲ್​ ಏರ್​ ಲ್ಯಾಂಡ್​ ವೆಹಿಕಲ್​) ಗುಜರಾತಿನಲ್ಲಿ ತನ್ನ ತಯಾರಿಕ ಘಟಕವನ್ನು ಶೀಘ್ರದಲ್ಲೇ ಸ್ಥಾಪನೆ ಮಾಡಲಿದೆ.

2021ರಿಂದ ಕಾರು ಉತ್ಪಾದನೆ ಮಾಡಲು ಪಾಲ್​-ವಿ ಕಂಪನಿ ಯೋಜನೆ ರೂಪಿಸಿದೆ. ಈ ಒಪ್ಪಂದ ಸಂಬಂಧ ವಿವೇಚನಾಯುಳ್ಳ ಲಿಖಿತ ದಾಖಲೆಗೆ ಗುಜರಾತಿನ ಮುಖ್ಯ ಕಾರ್ಯದರ್ಶಿ ಎಂ.ಕೆ.ದಾಸ್​ ಮತ್ತು ಪಾಲ್​-ವಿ ಕಂಪನಿಯ ಅಂತಾರಾಷ್ಟ್ರೀಯ ವ್ಯವಹಾರ ಅಭಿವೃದ್ಧಿ ವಲಯದ ಉಪಾಧ್ಯಕ್ಷ ಕಾರ್ಲೋ ಮಾಸ್ಬೊಮ್ಮೆಲ್​ ಪರಸ್ಪರ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಗುಜರಾತ್​ ಸರ್ಕಾರ ಕಂಪನಿಯು ಉತ್ಪಾದನಾ ಘಟಕ ತಯಾರಿಸಲು ಅಗತ್ಯವಾದ ಅನುಮೋದನೆಗಳಿಗೆ ನೆರವಾಗುವುದಾಗಿ ತಿಳಿಸಿದೆ.

ಮಾಸ್ಬೊಮ್ಮೆಲ್ ಪ್ರಕಾರ ವಿಶ್ವದರ್ಜೆಯ ಮೂಲಭೂತ ಸೌಕರ್ಯ ಮತ್ತು ಸರಳ ವ್ಯವಹಾರ ಹೊಂದಿರುವುದರಿಂದ ಗುಜರಾತ್​ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲದೆ, ರಾಜ್ಯವು ಉತ್ತಮವಾಗಿ ವಾಣಿಜ್ಯಾತ್ಮಕ ಬಂದರು ಮತ್ತು ಸಾರಿಗೆ ವ್ಯವಸ್ಥೆಯನ್ನು ಹೊಂದಿರುವುದರಿಂದ ಉತ್ಪಾದಿಸಿದ ಕಾರುಗಳನ್ನು ಯುನೈಟೆಡ್​ ನೇಷನ್​ ಮತ್ತು ಇತರೆ ಯೂರೋಪಿಯನ್​ ದೇಶಗಳಿಗೆ ರಫ್ತು ಮಾಡಲು ಅನುಕೂಲವಾಗಿದೆ. ಈಗಾಗಲೇ ಕಂಪನಿಯೂ 110 ಫ್ಲೈಯಿಂಗ್​ ಕಾರುಗಳ ಆರ್ಡರ್​ ಅನ್ನು ಸ್ವೀಕರಿಸಿದೆ. ಇದನ್ನು ಭಾರತದಿಂದಲೇ ರಫ್ತು ಮಾಡಲಾಗುವುದು ಎಂದು ಹೇಳಿದ್ದಾರೆ.

ಭಾರತದಲ್ಲಿ ತಯಾರಾಗುವಂತಹ ಫ್ಲೈಯಿಂಗ್​ ಕಾರುಗಳಿಗೆ ಎರಡು ಇಂಜಿನ್​ಗಳು ಇರಲಿದೆ. ರಸ್ತೆಯ ಮೇಲೆ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಅಲ್ಲದೆ, 180 ಕಿ.ಮೀ ವೇಗದಲ್ಲಿ ಹಾರಾಟ ನಡೆಸಲಿದೆ. ಕಾರು ಹಾರುವ ವಾಹನವಾಗಿ ಬದಲಾಗಲು ಮೂರು ನಿಮಿಷ ತೆಗದುಕೊಳ್ಳುತ್ತದೆ. ಇಂಧನಭರಿತ ಟ್ಯಾಂಕ್​ 500 ಕಿ.ಮೀ ಅನ್ನು ಪೂರ್ಣಗೊಳಿಸಲಿದೆ. (ಏಜೆನ್ಸೀಸ್​)