ನವದೆಹಲಿ: ಕೋವಿಡ್ 19 ಲಾಕ್ಡೌನ್ ನಂತರದಲ್ಲಿ ಅನೇಕ ಕ್ಷೇತ್ರಗಳ ಉದ್ಯೋಗಿಗಳ ವೇತನ ಕಡಿತಗೊಂಡು ತೊಂದರೆ ಅನುಭವಿಸುತ್ತಿದ್ದರೆ, ಈ ಬ್ಯಾಂಕುಗಳ ಉದ್ಯೋಗಿಗಳ ವೇತನ ದುಪ್ಪಟ್ಟಾಗಿದೆ!. ಇದು ಈ ತಿಂಗಳ ಮೊದಲ ದಿನದಿಂದಲೇ ಅನ್ವಯವಾಗಿದ್ದು, ಆಗಸ್ಟ್ನಲ್ಲಿ ಕೈ ಸೇರಲಿದೆ ದುಪ್ಪಟ್ಟಾದ ವೇತನ.
ಹೌದು ಇದು ರಾಜಸ್ಥಾನ ಕೋ ಆಪರೇಟಿವ್ ಬ್ಯಾಂಕುಗಳ ಉದ್ಯೋಗಿಗಳಿಗೆ ಖುಲಾಯಿಸಿದ ಅದೃಷ್ಟ. ರಾಜಸ್ಥಾನ ಸಹಕಾರ ಸಚಿವ ಉದಯಾಲಾ ಅಂಜನಾ ಈ ವಿಷಯವನ್ನು ಖಚಿತಪಡಿಸಿದ್ದು, ಅಧಿಸೂಚನೆಯೂ ಪ್ರಕಟವಾಗಿದೆ. ಬ್ಯಾಂಕಿಗೆ ನೇರವಾಗಿ ನೇಮಕವಾಗಿರುವ ಎಲ್ಲ ಉದ್ಯೋಗಿಗಳಿಗೆ ಅಂದರೆ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಈ ತಿಂಗಳಿಂದ ದುಪ್ಪಟ್ಟು ವೇತನ ಪಡೆಯಲಿದ್ದಾರೆ. ರಾಜಸ್ಥಾನ ಸ್ಟೇಟ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಅಪೆಕ್ಸ್ ಬ್ಯಾಂಕ್), ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಉದ್ಯೋಗಿಗಳು ಇದರ ಫಲಾನುಭವಿಗಳು. ಪ್ರೊಬೆಷನರಿ ಅವಧಿಯಲ್ಲಿರುವವರಿಗೂ ಇದು ಅನ್ವಯವಾಗಲಿದೆ. ಸಹಾನುಭೂತಿಯ ನೆಲೆಯಲ್ಲಿ ಸರ್ಕಾರ ಈ ವೇತನ ಹೆಚ್ಚಳ ಮಾಡಿದೆ.
ಇದನ್ನೂ ಓದಿ: ಚರ್ಚೆಗೆ ಗ್ರಾಸವಾದ ಬಾಲಕಿ ಬಿಡುಗಡೆ ಪ್ರಕರಣ
ರಾಜಸ್ಥಾನ ಕೋ ಆಪರೇಟಿವ್ ಬ್ಯಾಂಕಿನ ಎಲ್ಲ ಸೀನಿಯರ್ ಮ್ಯಾನೇಜರ್ಗಳು 22,180 ರೂಪಾಯಿ ಪಡೆಯುತ್ತಿದ್ದವರು ಇನ್ನು 30,680 ರೂಪಾಯಿ, ಎಲ್ಲ ಮ್ಯಾನೇಜರ್ಗಳು 14,660 ರೂಪಾಯಿ ಪಡೆಯುತ್ತಿದ್ದವರು 23,860 ರೂಪಾಯಿ, ಎಲ್ಲ ಬ್ಯಾಂಕ್ ಅಸಿಸ್ಟೆಂಟ್ಗಳು 8,910 ರೂಪಾಯಿ ಪಡೆಯುತ್ತಿದ್ದವರು 11,950 ರೂಪಾಯಿ, ಪ್ರತಿಯೊಬ್ಬ ಕ್ಲಾಸ್ 4 ಕೆಟಗರಿಯ ಉದ್ಯೋಗಿಗಳು 4,850 ರೂಪಾಯಿ ಪಡೆಯುತ್ತಿದ್ದವರು 10,640 ರೂಪಾಯಿ ವೇತನ ಪಡೆಯಲಿದ್ದಾರೆ. (ಏಜೆನ್ಸೀಸ್)