ನವದೆಹಲಿ: ಬೆಂಗಳೂರು ಮೂಲದ ಗ್ರಾಸರಿ ಇ-ಕಾಮರ್ಸ್ ತಾಣ ಬಿಗ್ಬಾಸ್ಕೆಟ್ನ 2 ಕೋಟಿ ಬಳಕೆದಾರರ ಡೇಟಾ ಡಾರ್ಕ್ವೆಬ್ನಲ್ಲಿ ಅಂದಾಜು 30 ಲಕ್ಷ ರೂಪಾಯಿಗೆ ಬಿಕರಿಗೆ ಇರಿಸಲಾಗಿದೆ ಎಂಬ ಸ್ಪೋಟಕ ಮಾಹಿತಿಯನ್ನು ಸೈಬಲ್ ಎಂಬ ಸೈಬರ್ ಇಂಟೆಲಿಜೆನ್ಸ್ ಸಂಸ್ಥೆ ಬಹಿರಂಗಪಡಿಸಿದೆ. ಇದೇ ವೇಳೆ, ಬಿಗ್ಬಾಸ್ಕೆಟ್ ಕೂಡ ಈ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಂ ಸೆಲ್ಗೆ ದೂರು ಸಲ್ಲಿಸಿದೆ. ಸೈಬಲ್ ಮಾಹಿತಿಯ ಸತ್ಯಾಸತ್ಯ ಪರಿಶೀಲನೆಯನ್ನೂ ಪರಿಣತರು ಆರಂಭಿಸಿದ್ದಾರೆ.
ನಿತ್ಯದ ವೆಬ್ ಮಾನಿಟರಿಂಗ್ ಕೆಲಸದ ನಡುವೆ ಸೈಬರ್ ಕ್ರೈಮ್ ಮಾರ್ಕೆಟ್ನಲ್ಲಿ ಹ್ಯಾಕರ್ ಬಿಗ್ಬಾಸ್ಕೆಟ್ ಡೇಟಾ ಇಟ್ಟಿರುವುದು ಕಂಡುಬಂತು. ಅದರಲ್ಲಿ 40,000 ಅಮೆರಿಕನ್ ಡಾಲರ್ ದರವನ್ನೂ ಟ್ಯಾಗ್ ಮಾಡಲಾಗಿತ್ತು. ಲೀಕ್ ಆಗಿರುವ ಡೇಟಾ ಬೇಸ್ನ ಮಾಹಿತಿಯ ಟೇಬಲ್ ನೇಮ್ 'member_member' ಎಂದಿದೆ. ಇದು ಎಸ್ಕ್ಯೂಎಲ್ ಫೈಲ್ ಆಗಿದ್ದು ಗಾತ್ರ 15 ಜಿಬಿ ಇರಬಹುದು. ಅಂದಾಜು 2 ಕೋಟಿ ಬಳಕೆದಾರರ ಮಾಹಿತಿ ಅದರಲ್ಲಿದೆ. ಡೇಟಾದಲ್ಲಿ ಬಳಕೆದಾರರ ಹೆಸರು, ಇಮೇಲ್ ಐಡಿ, ಪಾಸ್ವರ್ಡ್ ಹ್ಯಾಷ್ಗಳು, ಮೊಬೈಲ್/ದೂರವಾಣಿ ಸಂಖ್ಯೆ, ವಿಳಾಸ, ಜನ್ಮದಿನಾಂಕ, ಸ್ಥಳ ಮತ್ತು ಐಪಿ ಅಡ್ರೆಸ್ಗಳಿವೆ ಎಂದು ಸೈಬಲ್ ತನ್ನ ಬ್ಲಾಗ್ನಲ್ಲಿ ಹೇಳಿಕೊಂಡಿದೆ.
ಡೇಟಾ ಸೋರಿಕೆ ಆಗಿರುವ ಸಾಧ್ಯತೆಯ ಬಗ್ಗೆ ಕೆಲವು ದಿನಗಳ ಹಿಂದೆ ಮಾಹಿತಿ ಸಿಕ್ಕಿದೆ. ಬಳಕೆದಾರರ ಪ್ರೈವೆಸಿ ನಮ್ಮ ಆದ್ಯತೆಯಾಗಿದೆ. ಇದಕ್ಕೆ ಧಕ್ಕೆಯಾಗುವ ಯಾವುದನ್ನೂ ಸಹಿಸಲಾಗದು. ಇಂತಹ ಸೋರಿಕೆ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರ ಪರಿಣಾಮದ ವ್ಯಾಪ್ತಿಯನ್ನು ನಾವು ಪರಿಶೀಲಿಸುತ್ತಿದ್ದೇವೆ. ಈಗಾಗಲೇ ದೂರು ಕೂಡ ಕೊಟ್ಟಿದ್ದೇವೆ ಎಂದು ಬಿಗ್ಬಾಸ್ಕೆಟ್ ಹೇಳಿಕೆ ನೀಡಿದೆ. (ಏಜೆನ್ಸೀಸ್)