ಮಾಜಿ ಪ್ರಿಯಕರ ಅನಿಯನ್ ಚಿತ್ರದ ಹೀರೋ ರೀತಿ ಆಡ್ತಿದ್ದ ಅದಕ್ಕೆ ದೂರಾದೆ ಅಂದ ಅನುಪಮಾ: ಕೊನೆಗೂ ಮೌನ ಮುರಿದ ಧ್ರುವ ವಿಕ್ರಮ್! Anupama Parameswaran
- ನಟಿ ಅನುಪಮಾ ಪರಮೇಶ್ವರನ್ ಪ್ರೀತಿಯ ಸಂಬಂಧದಲ್ಲಿ ಮಾನಸಿಕ ಹಿಂಸೆ ಅನುಭವಿಸಿರುವುದಾಗಿ ಬಹಿರಂಗ
- ಮಾಜಿ ಬಾಯ್ಫ್ರೆಂಡ್ ಯಾರೆಂದು ಹೆಸರಿಸದಿದ್ದರೂ ತಮಿಳು ನಟ ಧ್ರುವ ವಿಕ್ರಮ್ ಕಡೆಗೆ ಬೆರಳು ಮಾಡಿದ ನೆಟ್ಟಿಗರು
- ಮೌನವೇ ಉತ್ತರ ಎಂಬಂತೆ ಕಡಲತೀರದ ವಿಡಿಯೋ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ನಟ ಧ್ರುವ ವಿಕ್ರಮ್
- ಬಟ್ಟೆ ಆಯ್ಕೆ ಹಾಗೂ ವೃತ್ತಿಜೀವನದಲ್ಲೂ ಮಾಜಿ ಪ್ರೇಮಿ ಹಸ್ತಕ್ಷೇಪ ಮಾಡುತ್ತಿದ್ದ ಎಂದು ನಟಿ ಗಂಭೀರ ಆರೋಪ
- ಮೂರು ತಿಂಗಳಿಗೆ ನಿಶ್ಚಿತಾರ್ಥಕ್ಕೆ ಒತ್ತಡ ಹೇರಿದ್ದರಿಂದಲೇ ಆ ಸಂಬಂಧದಿಂದ ಹೊರಬಂದೆ ಎಂದು ಸ್ಪಷ್ಟನೆ
Anupama Parameswaran : ಸೌತ್ ಸಿನಿ ಇಂಡಸ್ಟ್ರಿಯ ಟ್ಯಾಲೆಂಟೆಡ್ ನಟಿ ಅನುಪಮಾ ಪರಮೇಶ್ವರನ್ ಅವರು ತಮ್ಮ ಹಿಂದಿನ ಪ್ರೀತಿಯ ಸಂಬಂಧದಲ್ಲಿ ಅನುಭವಿಸಿದ 'ನಾರ್ಸಿಸಿಸ್ಟಿಕ್ ಅಬ್ಯೂಸ್' (ಅಹಂಕಾರಿ ಹಾಗೂ ಮಾನಸಿಕ ಹಿಂಸೆ) ಮತ್ತು ಮಾನಸಿಕ ಆಘಾತದ ಕುರಿತು ಬಹಿರಂಗವಾಗಿ ಮಾತನಾಡಿರುವುದು ತೆಲುಗು, ತಮಿಳು ಹಾಗೂ ಮಲಯಾಳಂ ಚಲನಚಿತ್ರ ರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅನುಪಮಾ ಅವರು ತಮ್ಮ ಮಾಜಿ ಬಾಯ್ಫ್ರೆಂಡ್ ಯಾರು ಎಂಬುದನ್ನು ನೇರವಾಗಿ ಹೆಸರಿಸದಿದ್ದರೂ, ಅವರು ತಮಿಳು ನಟ ಧ್ರುವ ವಿಕ್ರಮ್ ಅವರೊಂದಿಗೆ ಸಂಬಂಧದಲ್ಲಿದ್ದರು ಎಂಬ ಹಿಂದಿನ ಗಾಸಿಪ್‌ಗಳ ಆಧಾರದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಧ್ರುವ ವಿಕ್ರಮ್ ಅವರತ್ತ ಬೆರಳು ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಹರಿದಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯೆ ಎಂಬಂತೆ ಧ್ರುವ ವಿಕ್ರಮ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸ್ಟೋರಿ ಸದ್ಯ ಸಿನಿಮಾ ರಂಗದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ವಿವಾದಗಳಿಗೆ ನಟ ಧ್ರುವ ವಿಕ್ರಮ್ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ, ಸಂಜೆಯ ವೇಳೆ ಕಡಲತೀರದಲ್ಲಿ ಅಲೆಗಳು ಅಪ್ಪಳಿಸುತ್ತಿರುವ ಮತ್ತು ಮಕ್ಕಳು ಆಟವಾಡುತ್ತಿರುವ ಮೌನವಾದ ವಿಡಿಯಯೋವೊಂದನ್ನು ಯಾವುದೇ ಕ್ಯಾಪ್ಶನ್ ಅಥವಾ ವಿವರಣೆ ನೀಡದೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಧ್ರುವ ಮೌನವೇ ಉತ್ತರ ಎಂಬಂತಿದ್ದಾರೆ.
ಕಳೆದ ಒಂದು ವರ್ಷದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿಲ್ಲದ ಧ್ರುವ, ಕೊನೆಯದಾಗಿ ಕಳೆದ ಅಕ್ಟೋಬರ್‌ನಲ್ಲಿ 'ಬೈಸನ್' ಸಿನಿಮಾದ ಶೂಟಿಂಗ್ ವಿಡಿಯೋ ಹಂಚಿಕೊಂಡಿದ್ದರು. ಸದ್ಯ ಧ್ರುವ ವಿಕ್ರಮ್ ಅವರು ಚೊಚ್ಚಲ ನಿರ್ದೇಶಕ ಕರಣ್ ಅರವಿಂದ್ ಕುಮಾರ್ ಅವರ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದು, ಈ ವೈಯಕ್ತಿಕ ವಿವಾದದ ನಡುವೆಯೂ ತಮ್ಮ ವೃತ್ತಿಜೀವನದ ಕಡೆಗೆ ಗಮನ ಹರಿಸುತ್ತಿದ್ದಾರೆ.
ಅನುಪಮಾ ಹಾಗೂ ಧ್ರುವ ವಿಕ್ರಮ್ ಪರಸ್ಪರ ಪ್ರೀತಿಯಲ್ಲಿದ್ದರು ಎಂಬ ವರದಿಗಳಿದ್ದವು. ಆದರೆ, ಅನುಪಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತಿ-ದ್ವೇಷದ ಸಂಬಂಧದ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಧ್ರುವ ಅವರನ್ನು ಅನ್‌ಫಾಲೋ ಮಾಡಿದ್ದೂ ಸೇರಿದಂತೆ ಹಲವು ಸಂಗತಿಗಳು ಈ ಊಹಾಪೋಹಗಳಿಗೆ ಪುಷ್ಟಿ ನೀಡಿದ್ದವು. ದೀರ್ಘ ವಿರಾಮದ ಬಳಿಕ ಅಭಿಮಾನಿಗಳೊಂದಿಗೆ ಮಾತನಾಡಿದ ಅನುಪಮಾ, ಸ್ವಾತಂತ್ರ್ಯವಿಲ್ಲದ ಆ ಬಂಧನದಿಂದ ಮುಕ್ತಳಾಗಿರುವುದಕ್ಕೆ ತಮಗೆ ಖುಷಿಯಾಗಿದೆ ಎಂದು ತಿಳಿಸಿದ್ದರು.
ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅನುಪಮಾ, ತಮ್ಮ ಮಾಜಿ ಬಾಯ್ಫ್ರೆಂಡ್ನಿಂದ ತಾನು ಅನುಭವಿಸಿದ ಮಾನಸಿಕ ಹಿಂಸೆಯನ್ನು 'ಅನಿಯನ್' ಸಿನಿಮಾದ ಪಾತ್ರಗಳಿಗೆ ಹೋಲಿಸಿ ವಿವರಿಸಿದ್ದರು. ಒಂದು ದಿನ 'ರೆಮೋ' ನಂತೆ ಅತಿಯಾದ ಪ್ರೀತಿ ತೋರಿ, ಮರುದಿನವೇ 'ಅನಿಯನ್' ನಂತೆ ಕ್ರೂರವಾಗಿ ವರ್ತಿಸಿ, ಕೊನೆಗೆ 'ಅಂಬಿ'ಯಂತೆ ಅಳುತ್ತಾ ಕ್ಷಮೆಯಾಚಿಸಿ ಮತ್ತೆ ಪ್ರೇಮದ ನಾಟಕವಾಡುತ್ತಿದ್ದ ವ್ಯಕ್ತಿಯ ನಡವಳಿಕೆಯಿಂದ ತಾನು ಮಾನಸಿಕವಾಗಿ ನೊಂದಿದ್ದಾಗಿ ಅವರು ಕಣ್ಣೀರಿಟ್ಟಿದ್ದಾರೆ.
ತನ್ನ ಬಟ್ಟೆಗಳ ಆಯ್ಕೆ, ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಹಾಗೂ ವೃತ್ತಿಜೀವನದ ಮೇಲೂ ಆ ವ್ಯಕ್ತಿ ಮತ್ತು ಆತನ ಕುಟುಂಬದವರು ನೇರ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಅನುಪಮಾ ಆರೋಪಿಸಿದ್ದಾರೆ. ತಮ್ಮ ವೃತ್ತಿಜೀವನದ ಅತಿ ದೊಡ್ಡ ಹಿಟ್ ಚಿತ್ರವಾದ 'ಡ್ರ್ಯಾಗನ್' ಪ್ರಮೋಷನ್‌ನಲ್ಲೂ ಭಾಗವಹಿಸದಂತೆ ತಡೆಯಲಾಗಿತ್ತು. ಅಲ್ಲದೆ, ಸಂಬಂಧ ಆರಂಭವಾದ ಮೂರೇ ತಿಂಗಳಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಂತೆ ತೀವ್ರ ಒತ್ತಡ ಹೇರಲಾಗಿತ್ತು ಎಂದು ಅನುಪಮಾ ಹೇಳಿದ್ದಾರೆ.
ತನ್ನ ವೃತ್ತಿಜೀವನವನ್ನು ಅಂತ್ಯಗೊಳಿಸಿ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಳ್ಳುವ ಹುನ್ನಾರವನ್ನೇ ನಿಶ್ಚಿತಾರ್ಥದ ಮೂಲಕ ಮಾಡಲು ಹೊರಟಿದ್ದರು ಎಂಬುದನ್ನು ಅರಿತು ತಾನೇ ಆ ಮದುವೆ-ನಿಶ್ಚಿತಾರ್ಥವನ್ನು ಮುಂದೂಡಿದ್ದಾಗಿ ಅನುಪಮಾ ಸ್ಪಷ್ಟಪಡಿಸಿದ್ದಾರೆ. ಹಣಕ್ಕಾಗಿ ಆ ಸಂಬಂಧದಲ್ಲಿದ್ದೆ ಎಂಬ ಟೀಕೆಗಳಿಗೆ ತಕ್ಕೇಟು ನೀಡಿರುವ ಅವರು, "ಅನುಮತಿ ಅಥವಾ ಭಯವಿಲ್ಲದೆ ನಾನು ನನ್ನ ಜೀವನವನ್ನು ಮರಳಿ ಪಡೆಯುತ್ತಿದ್ದೇನೆ" ಎಂದು ಈ ಮೂಲಕ ತಮ್ಮ ಬದುಕಿನ ಕರಾಳ ಅಧ್ಯಾಯವನ್ನು ಮೆಟ್ಟಿನಿಂತು ಹೊರಬಂದಿರುವುದಾಗಿ ಧೈರ್ಯದಿಂದ ತಿಳಿಸಿದ್ದಾರೆ, (ಏಜೆನ್ಸೀಸ್).