ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ( Actor Suriya ) ತಮ್ಮ ವಿಶಿಷ್ಟ ಅಭಿನಯ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಿನಿಮಾಗಳ ಜತೆಗೆ ತಮ್ಮ ವೈಯಕ್ತಿಕ ಜೀವನದ ಶಿಸ್ತು ಮತ್ತು ಪತ್ನಿ ಜ್ಯೋತಿಕಾ ಜತೆಗಿನ ಅನ್ಯೋನ್ಯತೆಗೆ ಹೆಸರಾಗಿರುವ ಸೂರ್ಯ, ಇದೀಗ ನವದಂಪತಿಗಳಿಗೆ ನೀಡಿರುವ ಸರಳ ಸಲಹೆಯೊಂದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸೂರ್ಯ ಅವರು ನೀಡಿದ ಶಾಪಿಂಗ್ ಸಲಹೆಯ ವಿಡಿಯೋ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಹೇಳಿಕೆಯನ್ನು ವಿಭಿನ್ನವಾಗಿ ವಿಶ್ಲೇಷಿಸುತ್ತಿದ್ದಾರೆ. ಕೆಲವರು ಸೂರ್ಯ ಅವರ ಮಾತಿಗೆ ಸಂಪೂರ್ಣ ಬೆಂಬಲ ಸೂಚಿಸಿದರೆ, ಇನ್ನು ಕೆಲವರು ಇದನ್ನು ಟೀಕಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ದೊಡ್ಡ ಅಲೆಯನ್ನೇ ಎಬ್ಬಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಸೂರ್ಯ, ನೀವು ನಿಮ್ಮ ಹೆಂಡತಿಯೊಂದಿಗೆ ಶಾಪಿಂಗ್ಗೆ ಹೋಗುವಾಗ, ಮೊದಲು ನಿಮ್ಮ ಕೈಯಲ್ಲಿರುವ ವಾಚ್ ಅನ್ನು ಕಳಚಿಡಬೇಕು. ಏಕೆಂದರೆ, ಸಮಯದ ಬಗ್ಗೆ ಕಿಂಚಿತ್ತೂ ಚಿಂತಿಸಬಾರದು. ಇದಾದ ನಂತರ ಸುಮ್ಮನೆ ಹೋಗಿ ಕ್ಯಾಶ್ ಕೌಂಟರ್ ಬಳಿ ನಿಂತುಕೊಳ್ಳಿ. ಆಕೆ ತನಗೆ ಬೇಕಾದ ವಸ್ತುಗಳನ್ನೆಲ್ಲ ಆಯ್ಕೆ ಮಾಡಿಕೊಂಡು ಶಾಪಿಂಗ್ ಮುಗಿಸಿ ನಿಮ್ಮ ಬಳಿ ಬರುತ್ತಾಳೆ. ಆ ಸಮಯದಲ್ಲಿ ಯಾವುದೇ ಗೊಣಗಾಟವಿಲ್ಲದೆ, ಮೌನವಾಗಿ ಹಾಗೂ ಪ್ರೀತಿಯಿಂದ ಅವಳು ತಂದ ಎಲ್ಲಾ ವಸ್ತುಗಳಿಗೂ ಬಿಲ್ ಪಾವತಿಸಬೇಕು ಎಂದಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಸೂರ್ಯ ಅವರು ದಾಂಪತ್ಯ ಜೀವನದಲ್ಲಿ ಇರಬೇಕಾದ ಅಪಾರ ತಾಳ್ಮೆ, ಸೌಹಾರ್ದತೆ ಮತ್ತು ಪರಸ್ಪರ ತಿಳುವಳಿಕೆಯನ್ನು ಹಾಸ್ಯದ ಧಾಟಿಯಲ್ಲಿ ಹೇಳಿದ್ದಾರೆ ಎಂದು ಅವರ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮತ್ತೊಂದೆಡೆ ಸೂರ್ಯ ಅವರ ಈ ಹೇಳಿಕೆಯನ್ನು ಕೆಲವರು ಕಠಿಣವಾಗಿ ಟೀಕಿಸಿದ್ದಾರೆ. "ಸೂರ್ಯ ಅವರಿಗೆ ಹೈ-ಕ್ಲಾಸ್ ಅಥವಾ ಗಣ್ಯರ ಜೀವನಶೈಲಿ ಮಾತ್ರ ಗೊತ್ತು, ಮಧ್ಯಮ ವರ್ಗದ ಕುಟುಂಬಗಳ ನೈಜ ಜೀವನದ ಕಷ್ಟ-ನಷ್ಟಗಳ ಕಲ್ಪನೆ ಅವರಿಗಿಲ್ಲ. ಪ್ರತಿಯೊಬ್ಬರಿಗೂ ಸೂರ್ಯ ಅವರಂತೆ ಅಪರಿಮಿತ ಹಣ ಖರ್ಚು ಮಾಡುವ ಆರ್ಥಿಕ ಸ್ಥಿತಿ ಇರುವುದಿಲ್ಲ ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗೆ ತೆರೆಕಂಡ ಅವರ 'ವಿಶ್ವನಾಥ್ ಆಂಡ್ ಸನ್ಸ್' ಮತ್ತು 'ಕರುಪ್ಪು' ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುವುದರ ಜತೆಗೆ ಪ್ರೇಕ್ಷಕರಿಂದ ಭಾರಿ ಪ್ರಶಂಸೆ ಪಡೆದುಕೊಂಡಿದ್ದವು. ಕಥೆಗಳ ಆಯ್ಕೆಯಲ್ಲಿ ಸದಾ ಹೊಸತನ ಬಯಸುವ ಸೂರ್ಯ, ಪ್ರಸ್ತುತ ತಮ್ಮ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.
ಸದ್ಯ ಸೂರ್ಯ ಅವರು ಜೀತು ಮಾಧವನ್ ನಿರ್ದೇಶನದ 'ಸೀನ್' (Scene) ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸೂರ್ಯ ಅತ್ಯಂತ ಮಾಸ್ ಹಾಗೂ ಸ್ಟೈಲಿಶ್ ಲುಕ್ನಲ್ಲಿ ಕಂಗೊಳಿಸಲಿದ್ದು, ಎಂದಿನ ಪೋಲಿಸ್ ಪಾತ್ರಗಳಿಗಿಂತ ಭಿನ್ನವಾದ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಜ್ರಿಯಾ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ನಸ್ಲೆನ್ ಖಳನಾಯಕನ (ವಿಲನ್) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಆಕ್ಷನ್ ಮತ್ತು ಕಾಮಿಡಿ ಸಮ್ಮಿಶ್ರಣದ ಈ ಸಿನಿಮಾ ಸೂರ್ಯ ಅವರ ವೃತ್ತಿಜೀವನದಲ್ಲೇ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ, (ಏಜೆನ್ಸೀಸ್).