ಸಿನಿವಾಣಿ

ಹಾಲಿವುಡ್ ಪ್ರಾಜೆಕ್ಟ್ ಪೂರ್ಣ; ನಿರ್ಮಾಣಕ್ಕೂ ಸೈ ಎಂದ ನಟಿ

ಕಳೆದ ತಿಂಗಳಷ್ಟೇ ಆಲಿಯಾ ಭಟ್ ತಮ್ಮ ಮೊದಲ ಹಾಲಿವುಡ್ ಚಿತ್ರದ ಚಿತ್ರೀಕರಣಕ್ಕಾಗಿ ಯೂರೋಪ್​ಗೆ ಹಾರಿದ್ದರು. ಈಗ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿ ಮತ್ತೆ ಭಾರತಕ್ಕೆ ವಾಪಸ್ಸಾಗಿದ್ದಾರೆ. ಈ ಬಗ್ಗೆ ಸಂಭ್ರಮದಿಂದ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಟಾಮ್ ಹಾರ್ಪರ್ ನಿರ್ದೇಶನದ ‘ಹಾರ್ಟ್ ಆಫ್ ಸ್ಟೋನ್’, ಗೂಢಾಚಾರಿ ಕಥಾಹಂದರದ ಚಿತ್ರ.

ಈ ಚಿತ್ರದಲ್ಲಿ ‘ವಂಡರ್ ವುಮನ್’ ನಟಿ ಗಾಲ್ ಗಡೋಟ್ ಜತೆ ಆಲಿಯಾ ಭಟ್ ಕೂಡ ಗೂಢಾಚಾರಿ ಪಾತ್ರದಲ್ಲಿ ನಟಿಸಿದ್ದಾರೆ. ಜೇಮಿ ಡೊರ್ನಾನ್, ಸೋಫಿ ಒಕೊನೆಡೊ, ಮಾಥಿಯಾಸ್ ಶ್ವೀಘೋಫರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಲಿಯಾ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಗಾಲ್ ಗಡೋಟ್ ಕೂಡ, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಜೂನ್ ಅಂತ್ಯದಲ್ಲಿ ಗರ್ಭಿಣಿಯಾಗಿರುವ ಬಗ್ಗೆ ಹೇಳಿಕೊಂಡಿದ್ದ ಆಲಿಯಾ ಕೆಲವು ತಿಂಗಳುಗಳ ಕಾಲ ನಟನೆಯಿಂದ ದೂರ ಉಳಿಯಲಿದ್ದಾರೆ. ನಿರ್ವಣದಲ್ಲಿ ಒಲವು ತೋರಿರುವ ಆಲಿಯಾ, ‘ಡಾರ್ಲಿಂಗ್ಸ್’ ಎಂಬ ಚಿತ್ರವನ್ನು ಸದ್ದಿಲ್ಲದೆ ನಿರ್ವಿುಸಿದ್ದಾರೆ. ಈ ಚಿತ್ರ ಇದೇ ಆಗಸ್ಟ್​ನಲ್ಲಿ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿರುವ ‘ಬ್ರಹ್ಮಾಸ್ತ್ರ’ ಸರಣಿಯ ಮೊದಲ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. -ಏಜೆನ್ಸೀಸ್