‘ಪುಷ್ಪ’, ‘ಆರ್ಆರ್ಆರ್’, ‘ಕೆಜಿಎಫ್ 2’... ಹೀಗೆ ದಕ್ಷಿಣದ ಸಿನಿಮಾಗಳು ಉತ್ತರ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಇದರಿಂದಾಗಿ ಹಿಂದಿ ಮಂದಿಯೂ ಬಾಲಿವುಡ್ ಅಂದರೆ ಮೂಗು ಮುರಿಯುವಂತಾಗಿದೆ. ಅದಕ್ಕೆ ಶಾರುಖ್ ಖಾನ್ ಒಂದು ಪರಿಹಾರ ಹುಡುಕಿಕೊಂಡಿದ್ದಾರೆ. ದಕ್ಷಿಣದ ಸ್ಟಾರ್ ನಿರ್ದೇಶಕರ ಜತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾ ಹೆಸರು ‘ಜವಾನ್’.
ಈ ಚಿತ್ರಕ್ಕೆ ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳಲಿದ್ದಾರೆ. ಕಳೆದ ಒಂಭತ್ತು ವರ್ಷಗಳಲ್ಲಿ ಶಾರುಖ್ ಖಾನ್ ನಾಯಕನಾಗಿ ನಟಿಸಿರುವ ಆರೂ ಚಿತ್ರಗಳು ಕಲೆಕ್ಷನ್ನಲ್ಲಿ ಹಿಂದೆ ಬಿದ್ದಿವೆ. ಈ ಬಾರಿ ಶತಾಯ ಗತಾಯ ಬಾಕ್ಸಾಫೀಸ್ ಲೂಟಿ ಮಾಡಲೇಬೇಕು ಎಂಬ ಉದ್ದೇಶದೊಂದಿಗೆ ಸಾಕಷ್ಟು ತಯಾರಿ ಮಾಡಿಕೊಂಡೇ ಶಾರುಖ್ ಬರುತ್ತಿದ್ದಾರೆ. ಶುಕ್ರವಾರವಷ್ಟೇ ‘ಜವಾನ್’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಬ್ಯಾಂಡೇಜ್ ಮುಖಕ್ಕೆ ಸುತ್ತಿಕೊಂಡಿರುವ ಶಾರುಖ್ ಲುಕ್ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
‘ಜವಾನ್’ ಚಿತ್ರವು ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 2023ರ ಜೂನ್ 2ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಇದರ ಜತೆಗೆ ‘ಡಂಕಿ’ ಹಾಗೂ ‘ಪಠಾಣ್’ ಚಿತ್ರಗಳಲ್ಲೂ ಶಾರುಖ್ ಬಿಜಿಯಾಗಿದ್ದಾರೆ. - ಏಜೆನ್ಸೀಸ್