ಸಿನಿವಾಣಿ

ರಿಲೀಸ್ ಖುಷಿಯಲ್ಲಿ ನೇಹಾ-ನಭಾ; ಪರಭಾಷೆಯಲ್ಲಿ ಕನ್ನಡತಿಯರ ಕಮಾಲ್

ಬೆಂಗಳೂರು: ಸ್ಯಾಂಡಲ್​ವುಡ್ ನಟಿಯರಾದ ನೇಹಾ ಶೆಟ್ಟಿ ಮತ್ತು ನಭಾ ನಟೇಶ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ತೆಲುಗಿನಲ್ಲಿ ಈ ಇಬ್ಬರು ನಟಿಯರ ಸಿನಿಮಾಗಳು ಈ ಶುಕ್ರವಾರ ಸದ್ದಿಲ್ಲದೆ ತೆರೆಕಂಡಿವೆ. ಆ ಚಿತ್ರಗಳಿಗೆ ಮೆಚ್ಚುಗೆಯೂ ಸಿಕ್ಕಿರುವುದರಿಂದ ಸಹಜ ಖುಷಿಯಲ್ಲಿದ್ದಾರೆ. ನೇಹಾ ಶೆಟ್ಟಿ ಕನ್ನಡದಲ್ಲಿ ಕಾಣಿಸದೇ ತುಂಬ ವರ್ಷಗಳೇ ಕಳೆದಿವೆ. 2016ರಲ್ಲಿ ತೆರೆಗೆ ಬಂದಿದ್ದ ‘ಮುಂಗಾರು ಮಳೆ 2’ ಚಿತ್ರದಲ್ಲಿ ನಟಿಸಿದ್ದನ್ನು ಬಿಟ್ಟರೆ, ಕನ್ನಡದಲ್ಲಿ ಅವರು ಖಾತೆ ತೆರೆದಿಲ್ಲ. ಟಾಲಿವುಡ್​ನಲ್ಲಿಯೇ ಸೆಟಲ್ ಆಗಿ ‘ಮೆಹಬೂಬ’ ಸಿನಿಮಾದಲ್ಲಿ ನಟಿಸಿದರು. ಇದೀಗ ‘ಗಲ್ಲಿ ರೌಡಿ’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸಂದೀಪ್ ಕಿಶನ್ ನಾಯಕನಾಗಿ ನಟಿಸಿರುವ ಈ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕನ್ನಡದ ಹಲವು ಕಥೆಗಳನ್ನು ಕೇಳಿದ್ದು, ಶೀಘ್ರದಲ್ಲಿ ಕಮ್್ಯಾಕ್ ಮಾಡುತ್ತಾರಂತೆ.

ಇದು ನೇಹಾ ಕಥೆಯಾದರೆ, ಡಿಸ್ನಿ ಹಾಟ್​ಸ್ಟಾರ್​ನಲ್ಲಿ ನಭಾ ನಟೇಶ್ ಅಭಿನಯದ ‘ಮ್ಯಾಸ್ಟ್ರೋ’ ಸಿನಿಮಾ ಬಿಡುಗಡೆಯಾಗಿದೆ. ಟಾಲಿವುಡ್​ನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ನಭಾಗಿದು ಮೊದಲ ಒಟಿಟಿ ಸಿನಿಮಾ. ಹಿಂದಿಯಲ್ಲಿ ತೆರೆಕಂಡು ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದ ‘ಅಂಧಾಧುನ್’ ಚಿತ್ರವನ್ನೇ ತೆಲುಗಿನಲ್ಲಿ ರಿಮೇಕ್ ಮಾಡಲಾಗಿದೆ. ನಿತಿನ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಪೆರ್ಲಪಕ ಗಾಂಧಿ ನಿರ್ದೇಶನ ಮಾಡಿದ್ದಾರೆ.