ಸಿನಿವಾಣಿ

ಡೈಲಾಗ್ ಟೀಸರ್​ಗೆ ಪ್ರೇಕ್ಷಕರ ಮೆಚ್ಚುಗೆ: ನಾಲ್ಕು ದಿನಗಳಲ್ಲಿ ಎರಡು ಮಿಲಿಯನ್ ಹಿಟ್ಸ್ ಕಂಡ ‘ಯುವರತ್ನ’

lakshmihegde

ಬೆಂಗಳೂರು: ನಾಲ್ಕು ದಿನಗಳ ಹಿಂದೆ ಬಿಡುಗಡೆಯಾದ ಪುನೀತ್ ಅಭಿನಯದ ‘ಯುವರತ್ನ’ ಚಿತ್ರದ ಡೈಲಾಗ್ ಟೀಸರ್​ಗೆ ಪ್ರೇಕ್ಷಕರಿಂದ ಸಖತ್ ಮೆಚ್ಚುಗೆ ವ್ಯಕ್ತವಾಗಿದ್ದು, ಯೂಟ್ಯೂಬ್​ನಲ್ಲಿ ಎರಡು ಮಿಲಿಯನ್ ಹಿಟ್ಸ್ ಕಂಡಿದೆ.

ಪುನೀತ್ ಹುಟ್ಟುಹಬ್ಬದ (ಮಾರ್ಚ್ 17) ಮುನ್ನಾ ದಿನ ಸಂಜೆ ಆರಕ್ಕೆ ‘ಯುವರತ್ನ’ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿದೆ. ಪುನೀತ್ ಅವರ ಪವರ್​ಫುಲ್ ಸಂಭಾಷಣೆಗಳನ್ನು ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಇದರ ಪರಿಣಾಮ, ಆ ಟೀಸರ್ ನಾಲ್ಕು ದಿನಗಳ ಅಂತರದಲ್ಲಿ 27 ಲಕ್ಷ ಹಿಟ್ಸ್ ಪಡೆದಿದೆ.

‘ಕೆಜಿಎಫ್’ ನಂತರ ಹೊಂಬಾಳೆ ಫಿಲಂಸ್​ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ವಿುಸುತ್ತಿರುವ ‘ಯುವರತ್ನ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಸಂತೋಷ್ ಆನಂದರಾಮ್ ಚಿತ್ರದಲ್ಲಿ ಪುನೀತ್ ಜತೆಗೆ ಸಯೇಷಾ, ಧನಂಜಯ್, ದಿಗಂತ್, ಸೋನು, ಪ್ರಕಾಶ್ ರೈ ಮುಂತಾದವರು ನಟಿಸಿದ್ದು, ಎಸ್.ಎಸ್. ಥಮನ್ ಸಂಗೀತ ಸಂಯೋಜಿಸಿದ್ದಾರೆ.

ಎರಡು ಹಾಡುಗಳ ಹೊರತಾಗಿ, ಮಿಕ್ಕಂತೆ ಚಿತ್ರೀಕರಣ ಸಂಪೂರ್ಣವಾಗಿದೆ. ಹಾಡುಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಬೇಕಿದ್ದು, ಕರೊನಾ ಭೀತಿಯಿಂದ ಕ್ಯಾನ್ಸಲ್ ಆಗಿದೆ. ಭಯದ ವಾತಾವರಣ ಕಡಿಮೆಯಾಗುತ್ತಿದ್ದಂತೆಯೇ, ಚಿತ್ರೀಕರಣ ಮುಗಿದು, ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.