ಮುಂಬೈ: ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಹೆಸರನ್ನು ತಳುಕು ಹಾಕಿದ್ದ ಯೂಟ್ಯೂಬರ್ ವಿರುದ್ಧ ಇತ್ತೀಚೆಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಕಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನು ಯಾವುದೇ ಮಾನಹಾನಿ ರೀತಿಯ ವಿಡಿಯೋವನ್ನು ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲ 500 ಕೋಟಿಯ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯುವಂತೆ ಯೂಟ್ಯೂಬರ್ ಸಿದ್ಧಿಕಿ ಅಕ್ಷಯ್ಗೆ ತಿಳಿಸಿದ್ದು, ಇಲ್ಲವಾದಲ್ಲಿ ತಾವೂ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಹೇಳಿಕೊಂಡಿದ್ದಾರೆ. ವಕೀಲರೊಬ್ಬರನ್ನೂ ನೇಮಿಸಿಕೊಂಡಿದ್ದಾರೆ.
ಜೂನ್ 7ರಂದು ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಹೆಸರನ್ನು ರಶೀದ್ ಸೇರಿಸಿದ್ದರು. ಸುಶಾಂತ್ ಪ್ರೇಯಸಿ ರಿಯಾ ಕೆನಡಾಕ್ಕೆ ಹೋಗಲು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಉದ್ಧವ್ ಠಾಕ್ರೆ ಮತ್ತು ಪುತ್ರ ಆದಿತ್ಯಾ ಠಾಕ್ರೆ ಜತೆಗೆ ಗುಪ್ತವಾಗಿ ಮಾತುಕತೆ ನಡೆಸಿ ಈ ಕೃತ್ಯ ಎಸೆಗಿದ್ದಾರೆ ಎಂಬ ವದಂತಿಯನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಇದೆಲ್ಲ ಸುಳ್ಳು ಎಂದು ಅಕ್ಷಯ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ: ಒಂದೇ ದಿನ 113 ಬಾರಿ ಬಿಡುಗಡೆಯಾದ ರಾಜಕುಮಾರ ಪಂಚಪದಿ
’ಈ ರೀತಿಯ ಸುದ್ದಿಗಳನ್ನು ನಾನೊಬ್ಬನೇ ಬಿತ್ತರ ಮಾಡಿಲ್ಲ. ಸಾಕಷ್ಟು ಮೀಡಿಯಾ ವಾಹಿನಿಗಳು ಸೇರಿ ಸಾಕಷ್ಟು ಯೂಟ್ಯೂಬರ್ಗಳು ಸುದ್ದಿ ಮಾಡಿದ್ದಾರೆ. ಆ ಹೊತ್ತಿನ ಹರಿದಾಡಿದ ಸುದ್ದಿಯನ್ನಷ್ಟೇ ನಾನು ಬಿತ್ತರಿಸಿದ್ದೇನೆ ಹೊರತು, ಮಾನನಷ್ಟವಾಗುವಂತ ಕಂಟೆಂಟ್ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಆ ವಿಡಿಯೋವೊಂದರಿಂದಲೇ ಬರೋಬ್ಬರಿ 15 ಲಕ್ಷ ಆದಾಯ ರಶೀದ್ಗೆ ಬಂದಿತ್ತು. ಮೂಲತಃ ಬಿಹಾರದ ರಶೀದ್, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. (ಏಜೆನ್ಸಿಸ್)