ಲಂಡನ್‌ನಲ್ಲಿ ನಡೆದ 'ಕೇ ಬ್ಯೂಟಿ' ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಡಿ ಶೇಮಿಂಗ್ ಹಾಗೂ ಆತ್ಮವಿಶ್ವಾಸದ ಕುರಿತು ಮಾತನಾಡಿದ ಕತ್ರಿನಾ ಕೈಫ್ 
ಸಿನಿವಾಣಿ

"ನಿಮ್ಮ ಮಾತು ನನ್ನ ಬೆಲೆ ನಿರ್ಧರಿಸಲ್ಲ": ಹೆರಿಗೆ ಬಳಿಕದ ಬಾಡಿ ಶೇಮಿಂಗ್‌ ಮಾಡಿದವರಿಗೆ ಕತ್ರಿನಾ ತಿರುಗೇಟು! Katrina Kaif

ಹೆರಿಗೆ ಬಳಿಕದ ತೂಕ ಹೆಚ್ಚಳಕ್ಕೆ ಬಾಡಿ ಶೇಮಿಂಗ್ ಮಾಡಿದ ಟ್ರೋಲರ್ಸ್‌ಗಳಿಗೆ ಕತ್ರಿನಾ ಕೈಫ್ ಲಂಡನ್‌ನಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ.

ಮುಂಬೈ: ಬಾಲಿವುಡ್​ನಲ್ಲಿ ತನ್ನ ಫಿಟ್​ ಫಿಗರ್​, ಮುದ್ದಾದ ಮುಖ ಹಾಗೂ ಕಾಂತೀಯುತ ಸೌಂದರ್ಯದ ಮೂಲಕವೇ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ನಟಿ ಎಂದರೆ ಅದು, ಕ್ಯಾಟ್ ಖ್ಯಾತಿಯೇ ಕತ್ರಿನಾ ಕೈಫ್​ ಆಗಿದ್ದಾರೆ.

ಆದರೆ, ಕೆಲ ದಿನಗಳ ಹಿಂದೆ, ತಾಯ್ತನದ ಸಂಭ್ರಮದಲ್ಲಿರೋ ಕತ್ರಿನಾರನ್ನು ಕೆಲ ನೆಟ್ಟಿಗರು ಬಾಡಿ ಶೇಮಿಂಗ್ ಮಾಡಿದ್ದು, ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈಗ ಕತ್ರಿನಾ ಕೈಫ್ ಆ ಎಲ್ಲಾ ಟ್ರೋಲರ್‌ಗಳಿಗೆ ಖಡಕ್ ಪ್ರತ್ಯುತ್ತರ ನೀಡಿದ್ದು, ಅವರ ಮಾತುಗಳು ಈಗ ಸಕ್ಕತ್​ ವೈರಲ್​ ಆಗಿವೆ.

ವಿವಾದ ಆರಂಭ ಎಲ್ಲಿ?

ಕಳೆದ ತಿಂಗಳು ಮುಂಬೈನಲ್ಲಿ ನಡೆದ ಅಂಬಾನಿ ಕುಟುಂಬದ ಗಣೇಶೋತ್ಸವದಲ್ಲಿ ಕತ್ರಿನಾ ಕೈಫ್ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಕತ್ರಿನಾ ಕಾಣಿಸಿಕೊಂಡ ಬೆನ್ನಲ್ಲೇ, ಕೆಲವರು ಅವರ ಹೆರಿಗೆಯ ನಂತರದ ತೂಕದ (Postpartum weight) ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಲು ಶುರುಮಾಡಿದರು. "ಕತ್ರಿನಾ ಎಷ್ಟು ದಪ್ಪ ಆಗಿದ್ದಾರೆ", "ಹಳೆಯ ಗ್ಲಾಮರ್ ಕಳೆದೊಯ್ತು" ಎಂದೆಲ್ಲಾ ಆನ್‌ಲೈನ್‌ನಲ್ಲಿ ಬಾಡಿ ಶೇಮಿಂಗ್ ಮಾಡಲಾಗಿತ್ತು.

ಕತ್ರಿನಾ ಖಡಕ್ ಉತ್ತರ!

ಅಕ್ಟೋಬರ್ 8 ರಂದು ಕತ್ರಿನಾ ಕೈಫ್ ತಮ್ಮ ಸ್ವಂತ ಮೇಕಪ್ ಬ್ರ್ಯಾಂಡ್ 'ಕೇ ಬ್ಯೂಟಿ' (Kay Beauty) ಯುಕೆಯಲ್ಲಿ ಒಂದು ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಲಂಡನ್‌ನಲ್ಲಿದ್ದರು. ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೌಂದರ್ಯ ಕ್ಷೇತ್ರದ ಪ್ರಭಾವಿಗಳ ಜೊತೆ ಮಾತನಾಡಿದ ಕತ್ರಿನಾ, ಯಾರ ಹೆಸರನ್ನೂ ಎತ್ತದೆ ಟ್ರೋಲರ್ಸ್‌ಗಳಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

"ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತೆ. ಆದರೆ, ಆ ಆನ್‌ಲೈನ್ ಕಾಮೆಂಟ್‌ಗಳು ನಮ್ಮ ಆತ್ಮಗೌರವ ಮತ್ತು ನಮ್ಮ ಬೆಲೆಯನ್ನು ನಿರ್ಧರಿಸಲು ನಾವು ಯಾವತ್ತೂ ಬಿಡಬಾರದು," ಎಂದು ಕತ್ರಿನಾ ನುಡಿದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಸೋಷಿಯಲ್ ಮೀಡಿಯಾದಲ್ಲಿ ಸಾವಿರಾರು ಮಾತುಗಳು ಬರುತ್ತವೆ. ನಾವು ಪ್ರತಿಯೊಂದಕ್ಕೂ ತಲೆಕೆಡಿಸಿಕೊಳ್ಳಲು ಶುರುಮಾಡಿದರೆ, ನಮ್ಮ ಜೀವನದ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದೇ ಕಷ್ಟವಾಗುತ್ತದೆ. ನಾನು ಪ್ರತಿಯೊಂದು ಕಾಮೆಂಟ್‌ಗೂ ಪ್ರತಿಕ್ರಿಯಿಸುತ್ತಾ ಕೂತಿದ್ದರೆ ಇವತ್ತು ಈ ಹಂತಕ್ಕೆ ತಲುಪಲು ಸಾಧ್ಯವೇ ಇರುತ್ತಿರಲಿಲ್ಲ. ಜಗತ್ತು ನಿಮ್ಮನ್ನು ಮೆಚ್ಚುವ ದಿನಗಳೂ ಬರುತ್ತವೆ, ಹಾಗೆಯೇ ಯಾರೂ ನಿಮ್ಮ ಜೊತೆಗಿಲ್ಲದಾಗ ನೀವೇ ನಿಮ್ಮ ಬೆನ್ನ ಹಿಂದೆ ನಿಂತು ಬೆಂಬಲಿಸಬೇಕಾದ ದಿನಗಳೂ ಬರುತ್ತವೆ," ಎಂದು ತುಂಬಾನೇ ಹೇಳಿದ್ದಾರೆ.

ಬೆಂಬಲಕ್ಕೆ ನಿಂತಿದ್ದ ಸಲ್ಲು ಭಾಯ್​!

ಕತ್ರಿನಾ ಕೈಫ್ ಮೇಲಿನ ಈ ಆನ್‌ಲೈನ್ ಟ್ರೋಲಿಂಗ್ ನೋಡಿ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್, ಬಿಗ್ ಬಾಸ್ 'ವೀಕೆಂಡ್ ಕಾ ವಾರ್' ಸಂಚಿಕೆಯಲ್ಲಿ ಮಾತನಾಡಿದ್ದ ಸಲ್ಲು, ಸೆಲೆಬ್ರಿಟಿಗಳ ವಯಸ್ಸು ಮತ್ತು ನೋಟದ ಬಗ್ಗೆ ಆನ್‌ಲೈನ್‌ನಲ್ಲಿ ಕೆಟ್ಟದಾಗಿ ಮಾತನಾಡುವವರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರು. ವಿಶೇಷವಾಗಿ ಹೆರಿಗೆಯ ಬಳಿಕ ಮಹಿಳೆಯರು ತೂಕ ಹೆಚ್ಚಿಸಿಕೊಂಡರೆ ಅವರನ್ನು ಹೀಯಾಳಿಸುವ ಕೊಳಕು ಮನಸ್ಥಿತಿಯ ಬಗ್ಗೆ ಸಲ್ಮಾನ್ ಖಾರವಾಗಿಯೇ ಕಿಡಿಕಾರಿದ್ದರು, (ಏಜೆನ್ಸೀಸ್​).