ದೆಹಲಿ ಮೆಟ್ರೋ ಬಂದ್ ಮಾಡಿದ್ದಕ್ಕೆ ಸುಪ್ರೀಂ ಗರಂ: 'ಪ್ರತಿಭಟನೆ ನೆಪದಲ್ಲಿ ಜನರಿಗೆ ಕಾಟ ಕೊಡಬೇಡಿ' ಖಡಕ್ ಎಚ್ಚರಿಕೆ! Supreme Court

ದೆಹಲಿಯಲ್ಲಿ ಪ್ರತಿಭಟನೆ ನೆಪದಲ್ಲಿ ಮೆಟ್ರೋ ಸೇವೆ ಸಂಪೂರ್ಣ ಬಂದ್ ಮಾಡಲು ಹೊರಟ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಪ್ರಯಾಣಿಕರಿಗೆ ತೊಂದರೆ ಕೊಡದಂತೆ ಖಡಕ್ ಆದೇಶ ನೀಡಿದೆ.
Delhi Metro Rail and Supreme Court Order
ದೆಹಲಿ ಮೆಟ್ರೋ ರೈಲು ಹಾಗೂ ಸುಪ್ರೀಂ ಕೋರ್ಟ್ ಆದೇಶ
Published on: 

ನವದೆಹಲಿ: ಶನಿವಾರ (ಅ. 10) ಜಂತರ್​-ಮಂತರ್​ನಲ್ಲಿ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್​ ಜನತಾ ಪಾರ್ಟಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಇದೇ ಕಾರಣಕ್ಕೆ ರಾಜಧಾನಿಯಲ್ಲಿ. ಮೆಟ್ರೋ ಹಾಗೂ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಲು ಮುಂದಾಗಿದ್ದ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಬಿಸಿ ಮುಟ್ಟಿಸಿದೆ. ಯಾವುದೇ ಕಾರಣಕ್ಕೂ ಮೆಟ್ರೋ ಸೇವೆಗಳ ಮೇಲೆ ಸಂಪೂರ್ಣ ನಿಷೇಧ ಹೇರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ಜನಸಾಮಾನ್ಯರಿಗೆ ತೊಂದರೆ ಕೊಡಬೇಡಿ: ಕೋರ್ಟ್ ಚಾಟಿ

ಕಾಕ್ರೋಜ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಾಳೆ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ನೆಪವೊಡ್ಡಿ ದೆಹಲಿ ಮೆಟ್ರೋ ರೈಲು ನಿಗಮ (DMRC) ದಿಢೀರನೆ ಹತ್ತಾರು ನಿಲ್ದಾಣಗಳನ್ನು ಬಂದ್ ಮಾಡಲು ನಿರ್ಧರಿಸಿತ್ತು. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನ್ಯಾಯಪೀಠ ಅಧಿಕಾರಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಿದೆ.

"ಪ್ರತಿಭಟನೆ ನಿಯಂತ್ರಿಸುವ ನೆಪದಲ್ಲಿ ಸಾಮಾನ್ಯ ನಾಗರಿಕರಿಗೆ, ನಿತ್ಯದ ಪ್ರಯಾಣಿಕರಿಗೆ ಕಿರುಕುಳ ನೀಡುವುದು ಸರಿಯಲ್ಲ. ಮೆಟ್ರೋ ಮತ್ತು ಇತರ ರೈಲು ಸೇವೆಗಳು ನಿಯಂತ್ರಿತ ರೂಪದಲ್ಲಾದರೂ ಸರಿಯೇ, ಸುಗಮವಾಗಿ ಓಡಾಡಲು ಅವಕಾಶ ನೀಡಬೇಕು," ಎಂದು ನ್ಯಾಯಾಲಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.

ಅಲ್ಲದೆ, "ಮೆಟ್ರೋ ಸಂಚಾರದ ಮೇಲೆ ಸಂಪೂರ್ಣ ನಿಷೇಧ ಹೇರಲು ನಾವು ಬಿಡುವುದಿಲ್ಲ. ಈ ನಿಷೇಧದ ಆದೇಶವನ್ನು ಮರುಪರಿಶೀಲಿಸಿ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು," ಎಂದು ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

DMRC ಮಾಡಿದ್ದೇನು?

ಸಿಜೆಪಿ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಸೇರುವ ಸಾಧ್ಯತೆಯಿದ್ದು, ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ದೆಹಲಿ ಪೊಲೀಸರು ಮೆಟ್ರೋ ಸಂಚಾರ ಸ್ಥಗಿತಕ್ಕೆ ಮನವಿ ಮಾಡಿದ್ದರು. ಇದನ್ನು ಆಧರಿಸಿ DMRC, ಶುಕ್ರವಾರ (ಅಕ್ಟೋಬರ್ 9) ರಾತ್ರಿ 9 ಗಂಟೆಯಿಂದಲೇ ಅನ್ವಯವಾಗುವಂತೆ ಹಲವು ಪ್ರಮುಖ ಮೆಟ್ರೋ ನಿಲ್ದಾಣಗಳ ಗೇಟ್‌ಗಳನ್ನು ಬಂದ್ ಮಾಡುವುದಾಗಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ನಾಳೆ ಮುಂದಿನ ಸೂಚನೆ ಬರುವವರೆಗೂ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಘೋಷಿಸಿ ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿತ್ತು.

ಆದರೆ, ಕೇವಲ ನವದೆಹಲಿ ಮೆಟ್ರೋ ನಿಲ್ದಾಣವನ್ನು ಹೊರತುಪಡಿಸಿ, ಬಾಕಿ ಎಲ್ಲ ನಿಲ್ದಾಣಗಳಲ್ಲಿ ಕೇವಲ ಎಂಟ್ರಿ-ಎಕ್ಸಿಟ್ ಬಾಗಿಲುಗಳು ಮಾತ್ರ ಮುಚ್ಚಿರಲಿದ್ದು, ಒಳಗೆ ಮಾರ್ಗ ಬದಲಿಸುವ (ಇಂಟರ್‌ಚೇಂಜ್) ಸೌಲಭ್ಯ ಇರಲಿದೆ ಎಂದು DMRC ಹೇಳಿತ್ತು. ಆದರೂ, ಆಫೀಸ್‌ಗಳಿಗೆ, ಆಸ್ಪತ್ರೆಗಳಿಗೆ ಹೋಗುವ ಜನಸಾಮಾನ್ಯರು ಎಲ್ಲಿಂದ ಮೆಟ್ರೋ ಹತ್ತಬೇಕು, ಎಲ್ಲಿ ಇಳಿಯಬೇಕು ಎಂಬ ಗೊಂದಲ ಮನೆಮಾಡಿತ್ತು.

Also Read
ಜಂತರ್​-ಮಂತರ್​ನಲ್ಲಿ 'ಜಿರಳೆ' ಪ್ರತಿಭಟನೆ: ಮೆಟ್ರೋ ಸೇವೆಯಲ್ಲಿ ಭಾರೀ ವ್ಯತ್ಯಯ; 57 ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತ! Delhi Metro
Delhi Metro Rail and Supreme Court Order

ಪರ್ಯಾಯ ವ್ಯವಸ್ಥೆ ಮಾಡಿ, ಜನರಿಗೆ ಮಾಹಿತಿ ಕೊಡಿ!

ಸುಪ್ರೀಂ ಕೋರ್ಟ್ ಕೇವಲ ಮೌಖಿಕ ಆದೇಶ ನೀಡಿ ಸುಮ್ಮನಾಗದೆ, ಅಧಿಕಾರಿಗಳು ತಕ್ಷಣವೇ ಕುಳಿತು ಹೊಸ ನಿಯಮ ರೂಪಿಸಬೇಕು ಮತ್ತು ಆ ಪರಿಷ್ಕೃತ ಮಾರ್ಗಸೂಚಿಗಳನ್ನು ತಕ್ಷಣವೇ ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಹಾಗೂ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಸಾರ್ವಜನಿಕರಿಗೆ ಮುಟ್ಟಿಸಬೇಕು ಎಂದು ಕಟ್ಟಪ್ಪಣೆ ಮಾಡಿದೆ.

ಯಾವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ? ಯಾವ ಮೆಟ್ರೋ ಗೇಟ್‌ಗಳು ತೆರೆದಿರುತ್ತವೆ? ಜನಸಾಮಾನ್ಯರು ಓಡಾಡಲು ಇರುವ ಪರ್ಯಾಯ ರಸ್ತೆಗಳು ಯಾವುವು? ಎಂಬ ಪಕ್ಕಾ ಮಾಹಿತಿಯನ್ನು ಜನರಿಗೆ ತಲುಪಿಸಿ ಎಂದು ನ್ಯಾಯಾಲಯ ಸೂಚಿಸಿದೆ. ಇದರಿಂದ ಪ್ರಯಾಣಿಕರು ಗೊಂದಲವಿಲ್ಲದೆ ತಮ್ಮ ಪ್ರಯಾಣವನ್ನು ಪ್ಲಾನ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರತಿಭಟನಾಕಾರರಿಗೂ ಸುಪ್ರೀಂ ಸೂಚನೆ

ಇದೇ ವೇಳೆ ಪ್ರತಿಭಟನಾಕಾರರ ಹಕ್ಕಿನ ಕುರಿತು ಮಾತನಾಡಿದ ಸುಪ್ರೀಂ ಕೋರ್ಟ್, ಶಾಂತಿಯುತ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು ಹೌದಾದರೂ, ಅದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಾಳಾಗಬಾರದು. ಪ್ರತಿಭಟನೆ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಗಳಿದ್ದರೆ ನೇರವಾಗಿ ತುರ್ತು ಅರ್ಜಿ ಸಲ್ಲಿಸಬಹುದು ಎಂದು ಪ್ರತಿಭಟನಾ ಆಯೋಜಕರಿಗೆ ನಿರ್ದೇಶಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net