ಸಿನಿವಾಣಿ

ಬಾಲುನ ಕೊನೇ ಬಾರಿ ನೋಡೋದಕ್ಕೂ ಸಾಧ್ಯವಾಗಲಿಲ್ಲ ... ಯೇಸುದಾಸ್​ ಬೇಸರ

ಭಾರತೀಯ ಚಲನಚಿತ್ರ ಸಂಗೀತದಲ್ಲಿ ಯೇಸುದಾಸ್​ ಮತ್ತು ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರು ಸಹೋದರರಂತೆ ಗುರುತಿಸಿಕೊಂಡವರು. ಬಾಲು ತಮ್ಮ ಸಹೋದರನಿದ್ದಂತೆ ಎಂದು ಯೇಸುದಾಸ್​ ಅವರು ಹಲವು ವೇದಿಕೆಗಳಲ್ಲೂ ಹೇಳಿಕೊಂಡಿದ್ದರು. ಈಗ ಬಾಲಸುಬ್ರಹ್ಮಣ್ಯಂ ಅವರು ನಿಧನಕ್ಕೆ ಯೇಸುದಾಸ್​ ಕಂಬನಿ ಮಿಡಿದಿದ್ದಾರೆ.

ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಯೇಸುದಾಸ್​ ಅವರು ಕಾಣಲಿಲ್ಲ. ಬರೀ ಅಂತ್ಯಕ್ರಿಯೆಯಷ್ಟೇ ಅಲ್ಲ, ಎಸ್​ಪಿಬಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮತ್ತು ಅವರು ನಿಧನರಾದಾಗಲೂ ಯೇಸುದಾಸ್​ ಅವರು ಯಾವೊಂದು ಮಾತನಾಡಿರಲಿಲ್ಲ.

ಅದ್ಯಾಕೆ ಎಂದು ಇದೀಗ ಯೇಸುದಾಸ್​ ಅವರು ಬಹಿರಂಗಪಡಿಸಿದ್ದಾರೆ. ಪ್ರಮುಖವಾಗಿ ಯೇಸುದಾಸ್​ ಅವರು ಸದ್ಯ ಅಮೇರಿಕಾದಲ್ಲಿದ್ದಾರೆ. ಕೋವಿಡ್​ ಕಾರಣದಿಂದ ಅವರಿಗೆ ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಪತ್ರ ಮುಖೇನ ಅವರು ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಬಾಲು ಅವರು ಕೊನೆಗೆ ಒಂದು ಬಾರಿ ನೋಡುವುದಕ್ಕೂ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ನಾನು ಮತ್ತು ಬಾಲು ಕೊನೆಯದಾಗಿ ಹಾಡಿದ್ದು ಸಿಂಗಾಪೂರ್​ನ ಒಂದು ಕಾನ್ಸರ್ಟ್​ನಲ್ಲಿ. ಆ ನಂತರ ಅವರನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸದ್ಯ ನಾನು ಅಮೆರಿಕಾದಲ್ಲಿದ್ದು, ಬಾಲು ಹುಷಾರಾಗಬಹುದು ಎಂದು ಅಲ್ಲೇ ಕಾಯುತ್ತಿದ್ದೆ. ಆದರೆ, ಈ ಕೋವಿಡ್​ ನಮ್ಮೆಲ್ಲರಿಗೂ ದೊಡ್ಡ ನಷ್ಟ ಉಂಟು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ' ಎಂದು ಬರೆದು ಕೊಂಡಿದ್ದಾರೆ.

ಕೊನೆಯ ಬಾರಿ ಅವರನ್ನು ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಎಂಬ ದುಃಖ ಮನಸ್ಸನ್ನು ಆವರಿಸಿದೆ ಎಂದಿರುವ ಅವರು, 'ಒಂದು ಪಕ್ಷ ನಾನು ಅಲ್ಲಿ ಇದ್ದಿದ್ದರೂ, ಅವರನ್ನು ಆ ಸ್ಥಿತಿಯಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ, ನನ್ನ ಮನಸ್ಸಿನಲ್ಲಿ ಯಾವಾಗಲೂ ಅವರ ನಗುಮುಖ ಇದೆ' ಎಂದು ಅವರು ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.