Rocking Star Yash (ಚಿತ್ರ X) 
ಸಿನಿವಾಣಿ

ಜಾಗತಿಕ ಮಟ್ಟಕ್ಕೆ ಪ್ರಭು ಶ್ರೀರಾಮನ ಕಥೆ: 4,000 ಕೋಟಿ ಬಜೆಟ್‌ನ ರಾಮಾಯಣ ಚಿತ್ರದ ಕುರಿತು ನಟ ಯಶ್ ಹೇಳಿದ್ದೇನು..? Rocking Star Yash

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಸಿನಿರಂಗದ ಬಹುನಿರೀಕ್ಷಿತ ರಾಮಾಯಣ ಚಿತ್ರದ ಮೊದಲ ನೋಟ ಯಶಸ್ವಿಯಾಗಿ ನೆರವೇರಿದೆ
  • ಈ ಅದ್ಭುತ ಪ್ರಾಜೆಕ್ಟ್‌ನ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ ರಾಕಿಂಗ್​ ಸ್ಟಾರ್ ಯಶ್​
  • ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ
Rocking Star Yash: ಭಾರತೀಯ ಸಿನಿರಂಗದ ಬಹುನಿರೀಕ್ಷಿತ ರಾಮಾಯಣ ಚಿತ್ರದ ಮೊದಲ ನೋಟ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ದೆಹಲಿಯ ಪ್ರಥಮ್ ಸಂಕಲ್ಪ್‌ನಲ್ಲಿ ಶನಿವಾರ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭವು ಕೇವಲ ಚಿತ್ರದ ದೃಶ್ಯ ವೈಭವದಿಂದ ಮಾತ್ರವಲ್ಲದೆ, ಕನ್ನಡದ ಹೆಮ್ಮೆ ರಾಕಿಂಗ್ ಸ್ಟಾರ್ ಯಶ್ ಅವರ ಅನಿರೀಕ್ಷಿತ ಆಗಮನದಿಂದಾಗಿ ಇಡೀ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.
ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಮತ್ತು ರಣಬೀರ್ ಕಪೂರ್, ಸಾಯಿ ಪಲ್ಲವಿ, ಅರುಣ್ ಗೋವಿಲ್, ಸನ್ನಿ ಡಿಯೋಲ್, ರವಿ ದುಬೆ, ಶೋಭನಾ, ರಾಕುಲ್ ಪ್ರೀತ್ ಸಿಂಗ್, ಕುನಾಲ್ ಕಪೂರ್, ಅಜಿಂಕ್ಯ ಡಿಯೋ ಮತ್ತು ಕುಮಾರ್ ವಿಶ್ವಾಸ್ ಸೇರಿದಂತೆ ದೊಡ್ಡ ತಾರಾಬಳಗವೇ ಭಾಗವಹಿಸಿತ್ತು.

ರಾವಣನಾಗಿ ಅಬ್ಬರಿಸಲಿರುವ ಯಶ್; ಹಿಂದಿ ಕಲಿತ ರಾಕಿ ಭಾಯ್!

ಈ ಚಿತ್ರದಲ್ಲಿ ಲಂಕಾಧಿಪತಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಲ್ಲದೆ, ನಮಿತ್ ಮಲ್ಹೋತ್ರಾ ಅವರೊಂದಿಗೆ ಸಹ-ನಿರ್ಮಾಪಕರಾಗಿಯೂ ಯಶ್ ಜವಾಬ್ದಾರಿ ಹೊತ್ತಿದ್ದಾರೆ. ವೇದಿಕೆ ಮೇಲೆ ಮಾತನಾಡಿದ ಯಶ್, ಈ ಅದ್ಭುತ ಪ್ರಾಜೆಕ್ಟ್‌ನ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದರ ಸಂಪೂರ್ಣ ಶ್ರೇಯಸ್ಸು ನಿರ್ಮಾಪಕ ನಮಿತ್ ಅವರಿಗೆ ಸಲ್ಲಬೇಕು. ಅವರು ನನಗೆ ಈ ಪಾತ್ರವನ್ನು ನಿರ್ವಹಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಈ ಚಿತ್ರದ ಮೂಲಕ ನನಗೆ ಹಿಂದಿ ಕಲಿಯುವ ಅವಕಾಶವೂ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.
ಮುಂದುವರಿದು ಮಾತನಾಡಿದ ಅವರು, ಇದು ಇಡೀ ಭಾರತದ ಕನಸು. ಈ ಚಿತ್ರದ ಭಾಗವಾಗಿರುವ ಪ್ರತಿಯೊಬ್ಬರೂ ನಮ್ಮ ದೇಶದ ಮಹಾನ್ ಕಥೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಬೇಕು ಎಂಬ ದೃಷ್ಟಿಕೋನ ಮತ್ತು ನಂಬಿಕೆಯಿಂದ ಬಂದಿದ್ದಾರೆ. ಆದಾಗ್ಯೂ, ನಾವೆಲ್ಲರೂ ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಇಲ್ಲಿ ನಿಂತಿದ್ದೇವೆ. ಪ್ರಭು ಶ್ರೀರಾಮನ ಕಥೆಯನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವುದು ಮತ್ತು ನಮ್ಮ ದೇಶದಲ್ಲಿ ಅವರನ್ನು ಸಂಭ್ರಮಿಸುವುದು ಮಾತ್ರವೇ ನಮ್ಮ ಏಕೈಕ ಗುರಿಯಾಗಿದೆ ಎಂದು ಹೇಳಿದರು.

ರಣಬೀರ್, ಸಾಯಿ ಪಲ್ಲವಿ ನಟನೆಗೆ ಯಶ್ ಪ್ರಶಂಸೆ

ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಯಶ್​, ರಣಬೀರ್, ನೀವು ಅದ್ಭುತವಾಗಿ ನಟಿಸಿದ್ದೀರಿ. ಈ ಪಾತ್ರಕ್ಕಾಗಿ ನೀವು ನಿಮ್ಮನ್ನು ಹೇಗೆ ಸಮರ್ಪಿಸಿಕೊಂಡಿದ್ದೀರಿ ಮತ್ತು ವೇದಿಕೆಯಲ್ಲಿ ಎಂತಹ ಮ್ಯಾಜಿಕ್​ ಸೃಷ್ಟಿಸಿದ್ದೀರಿ ಎಂಬುದನ್ನು ಇಡೀ ಭಾರತ ಶೀಘ್ರದಲ್ಲೇ ಅರ್ಥ ಮಾಡಿಕೊಳ್ಳಲಿದೆ. ಇನ್ನು ಸಾಯಿ ಪಲ್ಲವಿ ಅತ್ಯಂತ ಪ್ರತಿಭಾವಂತ ನಟಿ. ಅವರು ಸೀತೆಯ ಪಾತ್ರದಲ್ಲಿ ನಟಿಸುವುದನ್ನು ನೋಡುವುದೇ ಒಂದು ಚಂದ, ಅವರ ಕಣ್ಣುಗಳೇ ಎಲ್ಲವನ್ನೂ ಮಾತನಾಡುತ್ತವೆ ಎಂದು ಹೇಳಿದರು.

ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ಗೆ ಲಗ್ಗೆ ಇಡಲಿರುವ ರಾಮಾಯಣ

ದೆಹಲಿಯ ಲಾಂಚ್ ಬೆನ್ನಲ್ಲೇ ರಾಮಾಯಣ ಚಿತ್ರದ ಅಂತರರಾಷ್ಟ್ರೀಯ ಪ್ರಚಾರ ಅಭಿಯಾನ ಅಧಿಕೃತವಾಗಿ ಆರಂಭವಾಗಲಿದೆ. ಜುಲೈ 23 ರಂದು ಜಾಗತಿಕವಾಗಿ ಅತ್ಯಂತ ಪ್ರಸಿದ್ಧವಾಗಿರುವ ಸ್ಯಾನ್ ಡಿಯಾಗೋ ಕಾಮಿಕ್-ಕಾನ್' ಈವೆಂಟ್‌ನಲ್ಲಿ ಚಿತ್ರದ ವಿಶೇಷ ಪ್ರೆಸೆಂಟೇಶನ್ ನಡೆಯಲಿದೆ. ಕಲ್ಕಿ 2898 ಎಡಿ ಚಿತ್ರದ ನಂತರ ಈ ಜಾಗತಿಕ ಪಾಪ್ ಕಲ್ಚರ್ ವೇದಿಕೆಗೆ ಲಗ್ಗೆ ಇಡುತ್ತಿರುವ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿ ರಣಬೀರ್ ಕಪೂರ್, ಯಶ್ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಭಾಗವಹಿಸಲಿದ್ದಾರೆ.

ರೂ. 4,000 ಕೋಟಿ ಬಜೆಟ್, ದೀಪಾವಳಿಗೆ ಮೊದಲ ಭಾಗ ಬಿಡುಗಡೆ

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಗರಿಷ್ಠ ಅಂದರೆ ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ ಎಂದು ವರದಿಯಾಗಿದೆ. ಜಾಗತಿಕ ಮಟ್ಟದ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಮತ್ತು ಭಾರತದ ಹೆಮ್ಮೆ ಎ.ಆರ್. ರೆಹಮಾನ್ ಜಂಟಿಯಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ದೃಶ್ಯ ವೈಭವದ ಮಹಾಕಾವ್ಯವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಅಧ್ಯಾಯವು 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಮತ್ತು ಎರಡನೇ ಭಾಗವು 2027 ರಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ (ಏಜೆನ್ಸೀಸ್​).